ಮಂಗಳವಾರ, ಮೇ 24, 2022
31 °C
`ರಂಗಸೌರಭ’ದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಅಭಿಮತ

ಭಾರತೀಯ ರಂಗ ಸಂಸ್ಕೃತಿ ವಿಶ್ವಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೇವಲ ಭೌತಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ದೇಶದ ಸಮಗ್ರ ಅಭಿವೃದ್ಧಿ ಎನ್ನಲು ಸಾಧ್ಯವಿಲ್ಲ. ಸಾಂಸ್ಕೃತಿಕವಾಗಿಯೂ ಅಭಿವೃದ್ಧಿ ಹೊಂದಿದಾಗ ಮಾತ್ರ ಅದನ್ನು ಸಂಪೂರ್ಣ ಅಭಿವೃದ್ಧಿ ಎನ್ನಬಹುದು ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಭಿಪ್ರಾಯಪಟ್ಟರು. 

ನಗರದ ಮರಾಠಿ ವಾಙ್ಮಯ ಪ್ರೇಮಿ ಮಂಡಳದಲ್ಲಿ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ `ರಂಗಸೌರಭ’ ಪೌರಾಣಿಕ ನಾಟಕ ಪ್ರಯೋಗ, ಜಾನಪದ ಸಂಗೀತ, ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ ಹಾಗೂ ‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ, ಸಂಗೀತ, ಗಾಯನ, ಚಿತ್ರಕಲೆ, ನೃತ್ಯ, ಪ್ರಸಾಧನ, ನೆರಳು-ಬೆಳಕು ಹೀಗೆ ಸರ್ವ ಕಲೆಗಳ ಆಗರವಾಗಿರುವ ಭಾರತೀಯ ರಂಗ ಕಲೆ ನಮ್ಮ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವ ಮೂಲಕ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ಭಾರತೀಯ ರಂಗ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

ಶಿಕ್ಷಣ ತಜ್ಞ ಡಾ. ಎ.ಕೆ.ನಾಶಿ ಮಾತನಾಡಿ, ‘ಸಮಾಜದಲ್ಲಿ ಬೇರೂರಿದ್ದ ಅನಕ್ಷರತೆ, ಮೌಢ್ಯ, ಅಂಧಾನುಕರಣೆ, ಭೇದಭಾವಗಳನ್ನು ತೊಡೆದು ಹಾಕಿ, ಸಾಕ್ಷರತೆಯ ಮಹತ್ವ, ಪರಸ್ಪರ ಸಹಬಾಳ್ವೆ ಹಾಗೂ ಜೀವನದ ಮೌಲ್ಯಗಳ ಜಾಗೃತಿಯನ್ನು ರಂಗಭೂಮಿ ಮೂಡಿಸುತ್ತ ಬಂದಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿ ಪ್ರೊ. ಆರ್.ಎನ್.ಕುಲಕರ್ಣಿ ಮಾತನಾಡಿ, ಉತ್ತಮ ರಂಗ ಪ್ರಯೋಗಗಳಿಗೆ ಇಂದು ಕೂಡ ಜನ ಪ್ರೋತ್ಸಾಹ ನೀಡುತ್ತಾರೆ. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಪ್ರತಿವರ್ಷ ರಂಗ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ವೈದಿಕ ವಿದ್ವಾಂಸ ರತ್ನಾಕರಭಟ್ ಜೋಶಿ, ಡಾ.ದತ್ತಪ್ರಸನ್ನ ಲಕ್ಷ್ಮಣರಾವ್ ಪಾಟೀಲ ಹಾಗೂ ಸುಭಾಷ ಗೂಳಪ್ಪ ಮಳಗಿ ಮಾತನಾಡಿದರು.

ಬೆಟಗೇರಿಯ ಅಶೋಕ ಸುತಾರ ಸಾಂಸ್ಕೃತಿಕ ಕಲಾತಂಡದವರು ‘ಮಹಿಷಾಸುರ ಮರ್ಧಿನಿ’ ಎಂಬ ಪೌರಾಣಿಕ ನಾಟಕ ಹಾಗೂ ರಾಚಯ್ಯ ಹೊಸಮಠ, ಮಂಜುನಾಥ ಗದುಗಿನ ಕಲಾತಂಡದರ ಜನಪದ ಸಂಗೀತ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ರಂಗ ಕಲಾವಿದರಾದ ಡಾ.ದತ್ತಪ್ರಸನ್ನ, ಲಕ್ಷ್ಮಣರಾವ್ ಪಾಟೀಲ ಹಾಗೂ ಸುಭಾಷ ಗೂಳಪ್ಪ ಮಳಗಿ ಅವರಿಗೆ ‘ಚಿನ್ಮಯ ಕಲಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೀರಯ್ಯ ಹೊಸಮಠ ಪ್ರಾರ್ಥಿಸಿದರು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಸಿ. ಬಡಿಗೇರ ಸ್ವಾಗತಿಸಿದರು. ಸಾಹಿತಿಗ ನದಾಫ್ ನಿರೂಪಿಸಿದರು. ಸಂಚಾಲಕ ಡಾ. ಪ್ರಭು ಗಂಜಿಹಾಳ ವಂದಿಸಿದರು.

ಸಮಾಜದ ಪರಿವರ್ತನೆಯಲ್ಲಿ ರಂಗಕಲೆ ಅತ್ಯಂತ ಮಹತ್ವದ್ದು. ಸಮಾಜ ಹಾಗೂ ದೇಶದ ಪ್ರಗತಿಗೆ ರಂಗ ಕಲಾವಿದರ ಕೊಡುಗೆ ಅನುಪಮವಾದುದು
ಡಾ. ನಾಶಿ, ಶಿಕ್ಷಣ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.