ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿ: ಸಚಿವ ಸಿ.ಸಿ.ಪಾಟೀಲ ಅಭಿಮತ

ಕರ್ನಾಟಕ ರಾಜ್ಯೋತ್ಸವ: ಸಾರ್ವಜನಿಕ ಧ್ವಜಾರೋಹಣ ನಡೆಸಿ ಸಚಿವ ಸಿ.ಸಿ.ಪಾಟೀಲ ಅಭಿಮತ
Last Updated 2 ನವೆಂಬರ್ 2021, 7:20 IST
ಅಕ್ಷರ ಗಾತ್ರ

ಗದಗ: ‘ಕನ್ನಡ ಭಾಷೆ ಸಮೃದ್ಧವಾಗಿದೆ. ಆದರೆ, ಈಗ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ದಾಳಿ ಅತಿಯಾಗಿದೆ. ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹೆಚ್ಚಿಸಲು ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘‘ಕನ್ನಡ ರಾಜ್ಯೋತ್ಸವ ಆಚರಣೆಯು ನವೆಂಬರ್‌ 1ಕ್ಕೆ ಮಾತ್ರ ಸೀಮಿತವಾಗದೇ ನಮಗೆಲ್ಲ ನಿತ್ಯೋತ್ಸವವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಕನ್ನಡಕ್ಕಾಗಿ ನಾವು’, ‘ಮಾತಾಡ್ ಮಾತಾಡ ಕನ್ನಡ’ ಎಂಬ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸಕ್ಕೆ ಕೈ ಹಾಕಿದ್ದು ಅಭಿನಂದನಾರ್ಹ. ರಸಋಷಿ ಕುವೆಂಪು ಹೇಳಿದಂತೆ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ’’ ಎಂದು ಹೇಳಿದರು.

‘ಕನ್ನಡ ನಾಡು ಕಲೆ, ಸಾಹಿತ್ಯ, ಸಂಗೀತಗಳ ಬೀಡು. ಇದಕ್ಕೆ ಜಿಲ್ಲೆಯ ಕೊಡುಗೆಯೂ ಅಪಾರ. ಗದುಗಿನ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪಸರಿಸಿದ ಹುಯಿಲಗೋಳ ನಾರಾಯಣರಾವ್‌, ಡಾ. ಎಂ.ಎಸ್.ಸುಂಕಾಪುರ, ಪ್ರೊ. ಕೀರ್ತಿನಾಥ ಕುರ್ತಕೊಟಿ, ಡಾ.ಚನ್ನವೀರ ಕಣವಿ, ಡಾ.ಕೆ.ಎಚ್.ಕುಲಕರ್ಣಿ, ಮಾಧವ ಕುಲಕರ್ಣಿ, ಡಾ. ಎಚ್.ಎನ್.ಹೂಗಾರ, ಹಿಂದೂಸ್ತಾನಿ ಗಾಯಕ ಭೀಮಸೇನ ಜೋಶಿ, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಕ್ರಿಕೆಟಿಗ ಸುನೀಲ್‌ ಜೋಶಿ ಹೀಗೆ ಅನೇಕ ಸಾಧಕರು ಗದುಗಿನ ಹೆಮ್ಮೆ ಆಗಿದ್ದಾರೆ’ ಎಂದು ಹೇಳಿದರು.

ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಿಇಓ ಭರತ್‌ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಡಿಸಿಎಫ್‌ ದೀಪಾ ಬಾಜಪೇಯಿ, ಎಡಿಸಿ ಸತೀಶ್ ಕುಮಾರ್‌ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಆಕರ್ಷಕ ಪಥ ಸಂಚಲನ

ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ 9ಕ್ಕೆ ಸಚಿವ ಸಿ.ಸಿ.ಪಾಟೀಲ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳ ವೀಕ್ಷಣೆ ಮಾಡಿದರು. ನಂತರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ನೇತೃತ್ವದ ಆಕರ್ಷಕ ಪಥಸಂಚಲನದ ಗೌರವರಕ್ಷೆ ಸ್ವಿಕರಿಸಿದರು.

ಜಿಲ್ಲಾ ಪೊಲೀಸ್‌ ಬ್ಯಾಂಡ್‌ನ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್‌, ಗೃಹರಕ್ಷಕ ದಳ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಅಬಕಾರಿ ದಳ, ಎನ್‌ಸಿಸಿ ಯುವಕ ಮತ್ತು ಯುವತಿಯರ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ಸಾಧಕರಿಗೆ ಸನ್ಮಾನ

ಹಗಲುವೇಷ ಕಲಾವಿದ ಗೋವಿಂದಪ್ಪ ರಾಮಚಂದ್ರಪ್ಪ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಂಚಯ್ಯ ರಾ.ಹಿರೇಮಠ, ಬಿಎ ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ತೇಜಸ್ವಿನಿ ರೊಡ್ಡಣ್ಣವರ, ದ್ವಿತೀಯ ಸ್ಥಾನ ಪಡೆದ ಪ್ರೇಮಾ ಹಂದ್ರಾಳ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಿರಣ್‌ ಈ.ತಾಳಿಕೋಟಿ, ದ್ವೀತಿಯ ಸ್ಥಾನ ಪಡೆದ ಸ್ಫೂರ್ತಿ ಪೂಜಾರ, ಸುಷ್ಮಾ ಕುರ್ತಕೋಟಿ, ಪ್ರದೀಪ ಹೊರಪೇಟೆ, ಲಾಲಾಜಿ ನದಾಫ್, ಸೇವಂತಿಕಾ ಹೊಂಬಣ್ಣವರ, ತೃತೀಯ ಸ್ಥಾನ ಪಡೆದ ಸಾನಿಯಾ ರಾಯಚೂರ, ಸುಲೇಮಾನ ಮುಳ್ಳೂರ, ಅಮೃತಾ ಶಿರೋಳ, ಚೇತನಾ ಕದಡಿ, ಲಕ್ಷ್ಮೀ ಲಿಂಬಿಕಾಯಿ, ಕ್ರೀಡಾ ವಿಭಾಗದಲ್ಲಿ ಶ್ವೇತಾ ಬೆಳಗಟ್ಟಿ, ಗಂಗಪ್ಪ ಇಳಕಲ್ಲ, ಕುಶಾನ ಚವ್ಹಾಣ, ಮುಸ್ಕಾನ ಕುರಹಟ್ಟಿ, ಭಾರತಿ ನೆಲದುರ್ಗಾ, ಅರುಣ ಕೊಳ್ಳಿ, ಐಶ್ವರ್ಯ ಸತ್ಯಪ್ಪನಮಠ, ಆರೀಫ್ ಜಿ.ಕೆ., ವೀರೇಶ ಹಿರೇಮಠ, ಮಲ್ಲಿಕಾರ್ಜುನ ಕೊಪ್ಪದ, ಹನುಮಂತ ಮರನೂರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT