ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಪ್ಪತ್ತಗುಡ್ಡ ಔಷಧೀಯಗಿಡಗಳ ಖಜಾನೆ

ಶಿವಾನುಭವ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧರಾಮ ಶ್ರೀ ಅಭಿಮತ
Published : 21 ಆಗಸ್ಟ್ 2024, 16:18 IST
Last Updated : 21 ಆಗಸ್ಟ್ 2024, 16:18 IST
ಫಾಲೋ ಮಾಡಿ
Comments

ಗದಗ: ‘ಕಪ್ಪತ್ತಗುಡ್ಡ ಅಪರೂಪದ ಆಯುರ್ವೇದ ಔಷಧೀಯ ಸಸ್ಯಗಳಿಂದ ತುಂಬಿರುವ ಖಜಾನೆ. ಕಪ್ಪತ್ತಗುಡ್ಡ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದು, ನಾಡಿನ ಮೂಲೆಮೂಲೆಗಳಿಂದ ಪ್ರವಾಸಿಗರು ಬಂದು ಪ್ರಾಕೃತಿಕ ಸೊಬಗನ್ನು ಆನಂದಿಸುತ್ತಿದ್ದಾರೆ’ ಎಂದು ಸಿದ್ಧರಾಮ ಶ್ರೀ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2,707ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಪರಿಶುದ್ಧ ಗಾಳಿಯನ್ನು ಹೊಂದಿರುವ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ’ ಎಂದು ಬಣ್ಣಿಸಿದರು.

‘ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಶ್ರಮದ ಫಲವಾಗಿ ಇಂದು ಕಪ್ಪತ್ತಗುಡ್ಡ ಉಳಿದಿದೆ. ಕಪ್ಪತ್ತಗುಡ್ಡ ಉಳಿವಿಗಾಗಿ ಜನರನ್ನು, ಪರಿಸರವಾದಿಗಳನ್ನು, ಅನೇಕ ಸಂಘ-ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನು ಸಂಘಟಿಸಿ ಹೋರಾಟ ಮಾಡಿದ್ದಾರೆ. ಅನೇಕ ಆಯುರ್ವೇದ ಪಂಡಿತರು ವನಸ್ಪತಿಗಾಗಿ ಕಪ್ಪತ್ತಗುಡ್ಡ ಅರಸಿ ಬರುತ್ತಾರೆ. ಅಪಾರ ಖನಿಜ ಸಂಪತ್ತನ್ನು, ಆಯುರ್ವೇದ ಸಂಪತ್ತನ್ನು, ವನ್ಯಜೀವಿಗಳನ್ನು ಹೊಂದಿರುವ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಯದಂತೆ ಶ್ರೀಗಳು ಮುನ್ನೆಚ್ಚರಿಕೆ ವಹಿಸಿದ್ದರು. ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಸರ್ಕಾರ ಕ್ರಮಕೈಕೊಳ್ಳಬೇಕು. ಈ ಭಾಗದ ಸಚಿವರು, ಶಾಸಕರು, ನಾಯಕರು ವಿಶೇಷ ಆಸಕ್ತಿ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರೊ. ಸಿ.ಎಸ್. ಅರಸನಾಳ ಉಪನ್ಯಾಸ ನೀಡಿ, ‘ಗಿಡಮರಗಳನ್ನು ಕಡಿಯುವುದು, ಬೆಂಕಿಹಚ್ಚುವುದು, ಗಣಿಗಾರಿಕೆ ಹೀಗೆ ಅನೇಕ ಸಂಕಷ್ಟಗಳ ಸಂದರ್ಭದಲ್ಲಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ’ ಎಂದು ತಿಳಿಸಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರು ವಚನ ಸಂಗೀತ ಹಾಡಿದರು. ಖುಷಿ ಎಂ. ಲಕ್ಕುಂಡಿ ಧರ್ಮಗ್ರಂಥ ಪಠಿಸಿದರು. ವರ್ಷಾ ಆರ್. ಮೇಟಿ ವಚನ ಚಿಂತನೆ ನಡೆಸಿಕೊಟ್ಟರು.

ಮಾಜಿ ಸಚಿವ ಎಸ್.ಎಸ್.ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಐ.ಬಿ.ಬೆನಕೊಪ್ಪ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್‍ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹಚೇರಮನ್‍ ಶಿವಾನಂದ ಹೊಂಬಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT