ಬುಧವಾರ, ಅಕ್ಟೋಬರ್ 28, 2020
20 °C
ಕೆಲವೆಡೆ ಅಂಗಡಿಗಳು ಬಂದ್‌, ರಸ್ತೆ ತಡೆ ನಡೆಸಿದ್ದರಿಂದ ಪರದಾಡಿದ ಪ್ರಯಾಣಿಕರು, ಪೊಲೀಸರು– ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ

ಕರ್ನಾಟಕ‌ ಬಂದ್‌: ಗದಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ ಸಂಘಟನೆಯು ವಿವಿಧ ಸಂಘಟನೆಗಳ ಜತೆಗೂಡಿ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಗದಗ ಜಿಲ್ಲೆಯಲ್ಲಿ ಮಿಶ್ರ ‍ಪ್ರತಿಕ್ರಿಯೆ ವ್ಯಕ್ತವಾಯಿತು.

ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಕರವೇ (ಪ್ರವೀಣ ಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕಾರ್ಮಿಕ ಹಾಗೂ ದಲಿತ ಸಂಘಟನೆಗಳು ಬಂದ್‌ಗೆ ಕೈಜೋಡಿಸಿದ್ದವು. ‌

ಕರ್ನಾಟಕ ಬಂದ್‌ನಿಂದಾಗಿ ಗದಗ– ಬೆಟಗೇರಿ ನಗರದ ಸಾರ್ವಜನಿಕರಿಗೆ ತೊಂದರೆ ಎದುರಾಗಲಿಲ್ಲ. ಮಾರುಕಟ್ಟೆ, ಹೋಟೆಲ್‌ಗಳು, ಆಸ್ಪತ್ರೆಗಳು, ದೈನಂದಿನಂತೆ ಕಾರ್ಯಾಚರಿಸಿದವು. ವಾಹನ ಸಂಚಾರವೂ ಮಾಮೂಲಿಯಾಗಿತ್ತು.  

ರೈತ ಸಂಘದವರು ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮುಳಗುಂದ ನಾಕಾ ವೃತ್ತದವರಿಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅರೆಬೆತ್ತಲೆ ಮೆರವಣಿಗೆ ಮಾಡುವ ಮೂಲಕ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು. ತಿದ್ದುಪಡಿ ಮಸೂದೆಗಳನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರಕ್ಕೆ ತಾಕೀತು ಮಾಡಿದರು.

‘ಕೃಷಿ ಮತ್ತು ರೈತರು ದೇಶದ ಬೆನ್ನೆಲಬು ಎನ್ನುತ್ತಲೇ ಆಳುವ ಸರ್ಕಾರಗಳು ಅನ್ನದಾತನ ಬೆನ್ನು ಮೂಳೆ ಮುರಿಯುವ ಹುನ್ನಾರ ನಡೆಸಿವೆ. ಕಾರ್ಪೊರೇಟ್ ಪರವಾದ ನಿರ್ಣಯಗಳು ಖಂಡನೀಯ. ರೈತರು ನಡೆಸುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ ಮುಳಗುಂದ ಹೇಳಿದರು.

ನಗರದ ಟಿಪ್ಪುಸುಲ್ತಾನ್ ವೃತ್ತದ ಬಳಿ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಎಸ್‌ಪಿ ಯತೀಶ್‌ ಎನ್‌., ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಿ ಎಂದು ಸೂಚಿಸಿದರು. ಆಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಂದ್‌ಗೆ ಕಾಂಗ್ರೆಸ್‌ ಬೆಂಬಲ

ಶಿರಹಟ್ಟಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಶಿರಹಟ್ಟಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಹಶೀಲ್ದಾರ್‌ ಯಲ್ಲಪ್ಪ ಗೋಣ್ಣೆಣನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಶಿರಹಟ್ಟಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹುಮಾಯೂನ್‌ ಮಾಗಡಿ ಮಾತನಾಡಿ, ಜನ ವಿರೋಧಿ ನೀತಿಗಳನ್ನು ಖಂಡಿಸಿದರು. ‌

ಶಿವನಗೌಡ ಪಾಟೀಲ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬುಡನಷ್ಯಾ ಮಕಾನದಾರ, ವೀರಣ್ಣ ಅಂಗಡಿ, ಡಿ.ಕೆ.ಹೊನ್ನಪ್ಪನವರ, ದೇವಪ್ಪ ಲಮಾಣಿ, ಮಂಜುನಾಥ ಘಂಟಿ, ಮಾಬುಸಾಬ ಲಕ್ಷ್ಮೇಶ್ವರ, ಪರಮೇಶ ಪರಬ, ಇಸಾಕ ಆದ್ರಳ್ಳಿ ಇದ್ದರು.

ಹೆದ್ದಾರಿ ತಡೆದು ಪ್ರತಿಭಟನೆ

ನರಗುಂದ: ಕರ್ನಾಟಕ ಬಂದ್‍ಗೆ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜನಜೀವನ ಎಂದಿನಂತೆಯೇ ಇತ್ತು.

ಪ್ರತಿಭಟನಕಾರರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಶಿವಾಜಿ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಇದರಿಂದ ಮೂರು ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತಾಯಿತು. ಕೆಲವೆಡೆ ಪ್ರತಿಭಟನಕಾರರು ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ಬಂದ್ ಮಾಡಿಸಿದರು. ಇದರಿಂದ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ‘ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಮರಣ ಶಾಸನವಾಗಿದೆ. ಅದನ್ನು ಹಿಂಪಡೆದು ರೈತರ ಹಿತ ಕಾಯಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ರೈತ ಸಂಘದ ಶಹರ ಘಟಕದ ಅಧ್ಯಕ್ಷ ವಿಠ್ಠಲ ಜಾಧವ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಸಾಬಳೆ ಇದ್ದರು. ಬಂದ್‍ಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.

ಸರ್ಕಾರದ ಜನ ವಿರೋಧ ನೀತಿ ನಿಲ್ಲಲಿ

ಲಕ್ಷ್ಮೇಶ್ವರ: ‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರಿಯಾದ ಕ್ರಮವಲ್ಲ. ಈ ಕಾಯ್ದೆ ಜಾರಿ ಆದರೆ ರಾಜ್ಯದಲ್ಲಿನ ಲಕ್ಷಾಂತರ ಎಪಿಎಂಸಿ ಹಮಾಲರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ. ಬಳಿಗಾರ ಆತಂಕ ವ್ಯಕ್ತಪಡಿಸಿದರು.

ಸೋಮವಾರ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ವಿ.ಜಿ.ಪಡಗೇರಿ, ವೀರೇಂದ್ರಗೌಡ ಪಾಟೀಲ, ಬಾಬಣ್ಣ ಅಳವಂಡಿ, ಜಯಕ್ಕ ಕಳ್ಳಿ, ಸಾಯಿಬ್‍ಜಾನ್ ಹವಾಲ್ದಾರ, ಭಾಗ್ಯಶ್ರೀ ಲಮಾಣಿ, ವಿಜಯ ಕರಡಿ, ನೀಲಪ್ಪ ಪಡಗೇರಿ, ಶೇಕಣ್ಣ ಕಾಳೆ, ಈರಣ್ಣ ಅಂಕಲಕೋಟಿ ಇದ್ದರು.
 

ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತ

ಲಕ್ಷ್ಮೇಶ್ವರ: ಪಕ್ಷಾತೀತ ರೈತಪರ ಹೋರಾಟ ವೇದಿಕೆ, ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಮತ್ತು ಪ್ರವೀಣ ಶೆಟ್ಟಿ ಬಣ, ಜಯ ಕರ್ನಾಟಕ ಸಂಘಟನೆ, ವೀರ ಕನ್ನಡಿಗ ಟಿಪ್ಪು ವೇದಿಕೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಯುವ ಸೇನೆ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.‌

ಶಿಗ್ಲಿ ಕ್ರಾಸ್‍ನಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಅಲ್ಲಿಂದಲೇ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ದಲಿತ ಸಂಘಟನೆಗಳ ಸದಸ್ಯರು ತಮಟೆ ಬಾರಿಸುವ ಮೂಲಕ ಮೆರವಣಿಗೆಗೆ ರಂಗು ತಂದರು. ‌

ಮೆರವಣಿಗೆಯು ಪುರಸಭೆ, ಸೋಮೇಶ್ವರ ಪಾದಗಟ್ಟಿ, ನೆಮ್ಮದಿ ಕೇಂದ್ರ, ದೂದಪೀರಾಂ ದರ್ಗಾ, ಬಜಾರ ರಸ್ತೆ ಮೂಲಕ ಸಂಚರಿಸಿ ಹೊಸ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

ಪಕ್ಷಾತೀತ ರೈತಪರ ಹೋರಾಟ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ ‘ಎರಡೂ ಕಾಯ್ದೆಗಳು ರೈತರು ಮತ್ತು ಕಾರ್ಮಿಕರಿಗೆ ಮಾರಕವಾಗಿದ್ದು, ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟರ ಮನವಿ ಸ್ವೀಕರಿಸಿದರು. ಡಿವೈಎಸ್‍ಪಿ ಓಗನಗೌಡ್ರ, ಸಿಪಿಐ ವಿಕಾಸ ಲಮಾಣಿ, ಪಿಎಸ್‍ಐ ಶಿವಯೋಗಿ ಲೋಹಾರ ಬಂದೋಬಸ್ತ್ ಕೈಗೊಂಡಿದ್ದರು.
 

ಬಂದ್ ಬೆಂಬಲಿಸಿ ಸಂಘಟನೆಗಳಿಂದ ಪ್ರತಿಭಟನೆ

ಗಜೇಂದ್ರಗಡ: ಕರ್ನಾಟಕ ಬಂದ್ ಬೆಂಬಲಿಸಿ ಪಟ್ಟಣದ ವಿವಿಧ ಪಕ್ಷಗಳು, ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಬಂದ್ ಹಿನ್ನೆಲೆಯಲ್ಲಿ ಮೆಡಿಕಲ್‌ ಸ್ಟೋರ್ಸ್‌ ಹೊರತುಪಡಿಸಿ ಪಟ್ಟಣದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಕಾಂಗ್ರೆಸ್, ಸಿಪಿಎಂ, ಎಪಿಎಂಸಿ ಹಮಾಲಿ ಕಾರ್ಮಿಕರು, ದಲಿತ, ಕನ್ನಡಪರ ಸಂಘಟನೆಗಳ ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಕಾಲಕಾಲಾಲೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.

ಮುಖಂಡರಾದ ಶಶಿಧರ ಹೂಗಾರ, ಎಂ.ಎಸ್.ಹಡಪದ, ವೀರಣ್ಣ ಸೊನ್ನದ, ಅಶೋಕ ಬಾಗಮಾರ, ಬಸವರಾಜ ಶೀಲವಂತರ, ಶಿವರಾಜ ಘೋರ್ಪಡೆ, ಎಚ್.ಎಸ್.ಸೋಂಪುರ, ರಾಜು ಸಾಂಗ್ಲಿಕರ ಇದ್ದರು.

--------
ತಿದ್ದುಪಡಿ ವಾಪಸ್‌ ಪಡೆಯುವಂತೆ ಆಗ್ರಹ

ಮುಂಡರಗಿ: ಕಾಂಗ್ರೆಸ್ ಹಾಗೂ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಆಶಪ್ಪ ಪೂಜಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಿದ್ಯುತ್ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ಸರ್ಕಾರ ಖಾಸಗೀಕರಣಗೊಳಿಸಲು ಮುಂದಾಗಿದೆ. ರೈತರ ಬದುಕಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೆ ತರುವ ಬದಲಾಗಿ ಜನಪರ ಹಾಗೂ ರೈತಪರ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ರೈತ ಸಂಘ, ಉತ್ತರ ಕರ್ನಾಟಕ ರೈತ ಸಂಘ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಹಸಿರು ಸೇನೆ ಮೊದಲಾದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮು ಕಲಾಲ, ಕಾಂಗ್ರೆಸ್ ಮುಖಂಡರಾದ ಕೊಟ್ರೇಶ ಅಂಗಡಿ, ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಎಸ್.ಡಿ.ಮಕಾಂದಾರ, ನಬಿಸಾಬ್ ಕೆಲೂರ, ಡಾ.ಬಿ.ಎಸ್.ಮೇಟಿ, ಶ್ರೀಕಾಂತಗೌಡ ಪಾಟೀಲ, ಡಿ.ಡಿ.ಮೋರನಾಳ, ವಿರುಪಾಕ್ಷಗೌಡ ಹರಗಿನಡೋಣಿ, ರೈತ ಮುಖಂಡರಾದ ಶಿವಾನಂದ ಇಟಗಿ, ಸುರೇಶ ಹಲವಾಗಲಿ, ಪ್ರಕಾಶ ಸಜ್ಜನರ, ಶಂಕರಗೌಡ್ರ ಜಾಯನಗೌಡ್ರ, ಚಂದ್ರು ಪೂಜಾರ, ಸಂತೋಷ ಹಿರೇಮನಿ, ನಾಗರಾಜ ಹೊಂಬಳಗಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು