ಮುಂಡರಗಿ: ತುಂಗಭದ್ರಾ ನದಿ ದಂಡೆ ಮೇಲಿರುವ ಕೊರ್ಲಹಳ್ಳಿ ಗ್ರಾಮವು ತಾಲ್ಲೂಕಿನ ಪ್ರಮುಖ ಗ್ರಾಮವಾಗಿದ್ದು, ಜನರು ರಸ್ತೆ, ಚರಂಡಿ, ನೀರು ಮತ್ತಿತರ ಹಲವಾರು ಸಮಸ್ಯೆಗಳನ್ನು ನಿತ್ಯ ಎದುರಿಸುತ್ತಿದ್ದಾರೆ.
ಈಚೆಗೆ ಗ್ರಾಮವು ಭೌತಿಕವಾಗಿ ಹೊಸಕೊರ್ಲಹಳ್ಳಿ ಹಾಗೂ ಹಳೆಕೊರ್ಲಹಳ್ಳಿ ಗ್ರಾಮಗಳಾಗಿ ವಿಂಗಡೆಣೆಯಾಗಿದೆ. ಈ ಎರಡೂ ಗ್ರಾಮಗಳು ಒಂದೂವರೆ ಕಿ.ಮೀ. ಅಂತರದಲ್ಲಿದ್ದು, ಎರಡೂ ಗ್ರಾಮಗಳೂ ಸಮಸ್ಯೆಯಿಂದ ಮುಕ್ತವಾಗಿಲ್ಲ.
ಹಳೆಕೊರ್ಲಹಳ್ಳಿ ಹಾಗೂ ಬೀಡನಾಳ ಕ್ರಾಸ್ ಮಧ್ಯದ ವಿಶಾಲವಾದ ಪ್ರದೇಶದಲ್ಲಿ ಹೊಸಕೊರ್ಲಹಳ್ಳಿ ಗ್ರಾಮವನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗಿದೆ. ಆದರೆ ಗ್ರಾಮದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮದ ಎಲ್ಲ ರಸ್ತೆಗಳು ಕಿರಿದಾಗಿವೆ. ಕಿರು ರಸ್ತೆಗಳ ಬದಿಯಲ್ಲಿ ಗ್ರಾಮಸ್ಥರು ತಮ್ಮ ವಾಹನ ಹಾಗೂ ದನ, ಕರುಗಳನ್ನು ಕಟ್ಟುತ್ತಿದ್ದು, ಸಂಚಾರ ಕಷ್ಟವಾಗಿದೆ.
ಈ ಕಿರು ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಿಸದೇ ಇರುವುದರಿಂದ ಗ್ರಾಮಸ್ಥರು ಬಳಸಿದ ಗಲೀಜು ನೀರು ನಿತ್ಯ ರಸ್ತೆಯ ಮಧ್ಯದಲ್ಲಿ ಹರಿಯುತ್ತದೆ. ಇದು ಸೊಳ್ಳೆ ಮತ್ತಿತರ ಕ್ರಿಮಿ, ಕೀಟಗಳ ಹಾವಳಿಗೆ ಕಾರಣವಾಗಿದೆ.
ಮುಖ್ಯ ರಸ್ತೆಯ ಬದಿಯಲ್ಲಿ ಕಾಟಾಚಾರಕ್ಕೆ ಚರಂಡಿಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನೂ ನಿಯಮಿತವಾಗಿ ಸ್ವಚ್ಛಗೊಳಿಸದೆ ಇರುವುದರಿಂದ ಗಬ್ಬೆದ್ದು ನಾರುತ್ತಿವೆ. ಬಹುತೇಕ ಭಾಗಗಳಲ್ಲಿ ಬೃಹತ್ ಚರಂಡಿಗಳು ಹೂತು ಹೋಗಿವೆ.
ಹಳೆಕೊರ್ಲಹಳ್ಳಿ ಗ್ರಾಮದಲ್ಲಿಯೂ ಸ್ವಚ್ಛತೆ ಮರೀಚಿಕೆಯಾಗಿದ್ದು, ಬಹುತೇಕ ಕಿರು ರಸ್ತೆಗಳು ಗಲೀಜು ನೀರಿನಿಂದ ಆವೃತ್ತವಾಗಿವೆ. ಅಲ್ಲಿಯೂ ಚರಂಡಿಗಳನ್ನು ನಿರ್ಮಿಸದೆ ಇರುವುದರಿಂದ ಗ್ರಾಮಸ್ಥರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ. ಗ್ರಾಮದ ಸುತ್ತಲೂ ಭತ್ತದ ಗದ್ದೆಗಳಿದ್ದು, ಗದ್ದೆಗಳು ಸದಾ ನೀರಿನಿಂದ ತುಂಬಿರುತ್ತವೆ.
ಹೊಸಕೊರ್ಲಹಳ್ಳಿ ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರವಿದ್ದು, ಅದು ಗಲೀಜು ನೀರು ತುಂಬಿರುವ ಚರಂಡಿಯಿಂದ ಸುತ್ತುವರಿದಿದೆ. ಅಂಗನವಾಡಿ ಕೇಂದ್ರದ ಸುತ್ತಲೂ ಕಸ, ಕಡ್ಡಿ ಸಂಗ್ರಹವಾಗಿವೆ.
ಹಳೆಕೊರ್ಲಹಳ್ಳಿ ಗ್ರಾಮವು ಅರಬಾವಿ–ಚಳ್ಳಕೇರಿ ರಾಜ್ಯ ಹೆದ್ದಾರಿಗೆ ಹತ್ತಿಕೊಂಡಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹೊಸಕೊರ್ಲಹಳ್ಳಿ ಗ್ರಾಮವು ಹಳೆಕೊರ್ಲಹಳ್ಳಿ ಗ್ರಾಮದಿಂದ ಒಂದುವರೆ ಕಿ.ಮೀ. ದೂರವಿದ್ದು, ಅಲ್ಲಿ ನಿಯಮಿತ ವಾಹನ ಸಂಚಾರವಿಲ್ಲ. ಹೀಗಾಗಿ ಅಲ್ಲಿನ ಜನರು ಪರದಾಡುವಂತಾಗಿದೆ. ಎರಡೂ ಗ್ರಾಮಗಳಲ್ಲಿ ಬಸ್ ನಿಲ್ದಾಣಗಳಿಲ್ಲದ್ದರಿಂದ ಪ್ರಯಾಣಿಕರು ವಾಹನಗಳಿಗಾಗಿ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ.
ಹೊಸಕೊರ್ಲಹಳ್ಳಿ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿಯವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲಹನುಮಂತ ಕಿಳ್ಳಿಕ್ಯಾತರ ಹೊಸಕೊರ್ಲಹಳ್ಳಿ ಗ್ರಾಮಸ್ಥ
ಕೊರ್ಲಹಳ್ಳಿ ಗ್ರಾಮಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಗ್ರಾಮ ಪಂಚಾಯಿತಿಯವರು ಈಗಾಗಲೇ ಕ್ರಿಯಾ ಯೋಜನೆ ಕಳುಹಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದುವಿಶ್ವನಾಥ ಹೊಸಮನಿ ತಾಲ್ಲೂಕು ಪಂಚಾಯಿತಿ ಇಒ
ತ್ಯಾಜ್ಯ ವಿಲೇವಾರಿಗಿಲ್ಲ ಕ್ರಮ
ಕೊರ್ಲಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸಲಾಗಿದ್ದು ಬೆಂಗಳೂರು ದಾವಣಗೆರೆ ಚಿತ್ರದುರ್ಗ ಮೊದಲಾದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಸೇತುವೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಅಂಗಡಿ ಮಳಿಗೆಗಳು ತಲೆಎತ್ತಿದ್ದು ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಕೊರ್ಲಹಳ್ಳಿ ಗ್ರಾಮದ ಸೇತುವೆಯ ಬಳಿ ಹಲವಾರು ಅಂಗಡಿಗಳಿದ್ದು ಅಂಗಡಿಗಳ ತ್ಯಾಜ್ಯವನ್ನು ನದಿ ದಂಡೆಯ ಮೇಲೆ ಎಸೆಯಲಾಗುತ್ತದೆ. ಹೀಗಾಗಿ ಸೇತುವೆಯ ಸುತ್ತಮುತ್ತಲಿನ ಪ್ರದೇಶ ಗಲೀಜಿನಿಂದ ಕೂಡಿರುತ್ತದೆ. ಸೇತುವೆಯ ಬಳಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯಿತಿಯವರು ಅಗತ್ಯ ಕ್ರಮ ಕೈಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.