ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್:‌ ಸಮಗ್ರ ಕೃಷಿಯಲ್ಲಿ ತಂದೆ-ಮಗನ ಸಾಧನೆ

ಮಣ್ಣಿನ ಫಲವತ್ತತೆ ಹೆಚ್ಚಿಸಲು ಎರೆಹುಳು ಬಳಕೆ
ಚಂದ್ರು ಎಂ. ರಾಥೋಡ್‌
Published 23 ಫೆಬ್ರುವರಿ 2024, 4:32 IST
Last Updated 23 ಫೆಬ್ರುವರಿ 2024, 4:32 IST
ಅಕ್ಷರ ಗಾತ್ರ

ನರೇಗಲ್:‌ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ತಂದೆ. ಕೋವಿಡ್ ಬಳಿಕ ಬೆಂಗಳೂರಿನ ಐಟಿ ಕಂಪನಿ ಉದ್ಯೋಗ ತೊರೆದು ಕೃಷಿ ಕಡೆಗೆ ಮುಖ ಮಾಡಿರುವ ಮಗ. ಇಬ್ಬರೂ ಸೇರಿ ಸಮಗ್ರ ಕೃಷಿಯತ್ತ ಮುಖಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಸಮೀಪದ ಜಕ್ಕಲಿ ಗ್ರಾಮದ ಎಂ.ಎಸ್.‌ಧಡೆಸೂರಮಠ ಹಾಗೂ ಮಹೇಶ ಎಂ. ಧಡೆಸೂರಮಠ ತಮ್ಮ ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ದಾವಣಗೇರಿ ಗ್ರಾಮದಿಂದ 1,500 ಪೇರಲ ಸಸಿಗಳನ್ನು ಹಾಗೂ 1,500 ಶ್ರೀಗಂಧದ ಸಸಿಗಳನ್ನು ತಂದು 2021ರಲ್ಲಿ ನಾಟಿ ಮಾಡಿದ್ದರು. ಪ್ರತಿ ಪೇರು ಗಿಡದ ಪಕ್ಕದಲ್ಲಿ ಶ್ರೀಗಂಧದ ಗಿಡವನ್ನು ನಾಟಿ ಮಾಡಿದ್ದಾರೆ. ಇದರಿಂದ ಬೇರುಗಳು ಗಟ್ಟಿಯಾಗಿ ಭೂಮಿಯ ಆಳಕ್ಕೆ ಇಳಿಯುತ್ತವೆ ಎನ್ನುವುದು ಅರವ ನಂಬಿಕೆ.

‘2023ರ ಡಿಸೆಂಬರ್‌ನಿಂದ ಫಸಲು ಕೊಡಲು ಆರಂಭಿಸಿದ ಪೇರು ಗಿಡಗಳು ಇಲ್ಲಿಯವರೆಗೆ ಅಂದಾಜು ₹2.5 ಲಕ್ಷಕ್ಕೂ ಹೆಚ್ಚು ಆದಾಯ ನೀಡಿವೆ. ಕೆಲ ವರ್ಷಗಳಲ್ಲೇ ನಿರಂತರವಾಗಿ ಫಸಲು ಬರುತ್ತದೆ’ ಎನ್ನುತ್ತಾರೆ ರೈತ ಎಂ.ಎಸ್.‌ಧಡೆಸೂರಮಠ.

ತೋಟದಲ್ಲಿ ತೆಂಗು 150, ತೇಗ 50, ನೇರಳೆ 5, ರಾಮಫಲ 2, ಸೀತಾಫಲ 2, ಲಕ್ಷ್ಮಣ ಫಲ 2, ಮಾವು 5, ನಿಂಬೆ 5, ಪಪ್ಪಾಯ 5, ಮೋಸಂಬಿ 5, ಅಮೃತನೋಣಿ 3, ಕಾಡುನೆಲ್ಲಿ 2, ಮಹಾಗನಿ 50 ಸಸಿಗಳನ್ನು ನಾಟಿ ಮಾಡಲಾಗಿದೆ.

ಕೃಷಿ ಚಟುವಟಿಕೆಗಾಗಿ 2022ರಲ್ಲಿ ತೋಟದಲ್ಲಿಯೇ 3 ಕೋಣೆಯ ಮನೆ ಕಟ್ಟಿಸಿ ಅದರಲ್ಲಿ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯ ನಿರ್ಮಿಸಿದ್ದಾರೆ. ಸ್ವಂತ ಜಮೀನಿನ ಪಕ್ಕದಲ್ಲಿ 2 ಎಕರೆ ಕೃಷಿ ಭೂಮಿಯನ್ನು ಖರೀದಿ ಮಾಡಿದ್ದು ಅದನ್ನು ಮನೆಗೆ ಬೇಕಾಗುವ ಕಾಳು ಕಡಿಗಾಗಿ ಮೀಸಲಿಟ್ಟಿದ್ದಾರೆ. ಅದರಲ್ಲಿ ಜೋಳ, ಗೋಧಿ, ಕುಸುಬಿ, ಕಡಲೆ, ಹೆಸರು ಸೇರಿದಂತೆ ಅಗತ್ಯ ತರಕಾರಿಗಳನ್ನು ಬೆಳೆಯಲು ಉಪಯೋಗಿಸುತ್ತಾರೆ.

ಕಿರಿಯ ಮಗನ ಕೃಷಿ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿರುವ ನಿವೃತ್ತ ಶಿಕ್ಷಕ ಎಂ.ಎಸ್.‌ ಧಡೆಸೂರಮಠ ಅವರು, ಮಗ ಕೈಗೊಳ್ಳುವ ಸಂಶೋಧನಾತ್ಮಕ ಹಾಗೂ ಪ್ರಯೋಗಾತ್ಮಕ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಹೊಲದಲ್ಲಿ ಬರುವ ಕಸ ಹಾಗೂ ಗಿಡಗಳಿಂದ ಉದುರುವ ಎಲೆಗಳನ್ನು ಸಂಗ್ರಹಿಸಿ ಮಣ್ಣಲ್ಲಿ ಸೇರಿಸಿ ಗೊಬ್ಬರ ಉತ್ಪಾದೆನೆ ಮಾಡುತ್ತಾರೆ. ಹುಲಕೋಟಿ ಕೃಷಿ ಇಲಾಖೆಯಿಂದ ಎರೆಹುಳುಗಳನ್ನು ತಂದು ಭೂಮಿಗೆ ಬಿಡುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ, ಭೂಮಿ ಹದಗೊಳಿಸುತ್ತಿದ್ದಾರೆ. ಆದಕಾರಣ ತೋಟದಲ್ಲಿ ನಾಟಿ ಮಾಡಲಾದ ಎಲ್ಲಾ ಗಿಡಗಳು ಬೆಳೆದಿವೆ.

ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಸರಹದ್ದಿನಲ್ಲಿರುವ ಪೇರು ಹಾಗೂ ಶ್ರೀಗಂಧದ ತೋಟದಲ್ಲಿ ನಿಂತಿರುವ ನಿವೃತ್ತ ಶಿಕ್ಷಕ ಎಂ. ಎಸ್.‌ ಧಡೆಸೂರಮಠ
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಸರಹದ್ದಿನಲ್ಲಿರುವ ಪೇರು ಹಾಗೂ ಶ್ರೀಗಂಧದ ತೋಟದಲ್ಲಿ ನಿಂತಿರುವ ನಿವೃತ್ತ ಶಿಕ್ಷಕ ಎಂ. ಎಸ್.‌ ಧಡೆಸೂರಮಠ

ಭೂಮಿಗೂ ಜೀವವಿದೆ ಅದನ್ನು ಬದುಕಿಸಬೇಕು ಎನ್ನುವುದನ್ನು ಅರಿತು ಕೃಷಿ ಮಾಡಬೇಕು. ಆಗ ಹಾಕಿದ ಬಂಡವಾಳಕ್ಕೆ ನಷ್ಟವಾಗುವುದಿಲ್ಲ

-ಮಹೇಶ ಎಂ. ಧಡೆಸೂರಮಠ ಮಗ

ಭೂ ಫಲವತ್ತತೆಗೆ ಜೀವಾಮೃತ

ಜೀವಾಮೃತ ಹಾಕಿದರೆ ಭೂಮಿ ಫಲವತ್ತತೆ ಕಾಪಾಡಿ ಮಣ್ಣಿಗೆ ಅಮೃತ ನೀಡಿದಂತಾಗುತ್ತದೆ ಎನ್ನುವ ಕಾರಣಕ್ಕೆ ತಾವೇ ಜೀವಾಮೃತ ಸಿದ್ದಪಡಿಸುತ್ತಾರೆ. ‘ನಾಲ್ಕು ಲೀಟರ್ ಗೋಮೂತ್ರ (ಗಂಜಲು) ಒಂದು ಬುಟ್ಟಿ ಸಗಣಿ ನಾಲ್ಕು ಕೆಜಿ ಹಸಿ ಹಿಟ್ಟು ನಾಲ್ಕು ಕೆಜಿ ಬೆಲ್ಲ ನಾಲ್ಕು ಕೆಜಿ ಶೇಂಗಾ ಹಿಂಡಿಯ ಮಿಶ್ರಣವನ್ನು ಎರಡ್ಮೂರು ಲೀಟರ್ ನೀರಿನ ಡ್ರಮ್‌ನಲ್ಲಿ ಹಾಕಿ ಮುಚ್ಚಬೇಕು. ಅದನ್ನು ಎರಡು ದಿನಕ್ಕೊಮ್ಮ ಕಟ್ಟಿಗೆಯಿಂದ ತಿರುಗಿಸಬೇಕು. ಹೀಗೆ 15 ದಿನ ಮಾಡಬೇಕು. ಆಗ ಭೂಮಿಗೆ ಬೇಕಾಗುವ ಜೀವಾಮೃತ ಸಿದ್ದಗೊಳ್ಳುತ್ತದೆ. ಅದನ್ನು ಭೂಮಿಯಲ್ಲಿ ತೇವಾಂಶ ಇದ್ದಾಗ ಹಾಕಿದರೆ ಜೀವ ಕಣಗಳು ಸಾಯುವುದಿಲ್ಲ. ಹಾಗಾಗಿ ಗಿಡಗಳು ಉತ್ತಮವಾಗಿ ಬೆಳೆದು ಇಳುವರಿ ಜಾಸ್ತಿ ಬರುತ್ತದೆ. ನಮ್ಮ ತೋಟದಲ್ಲಿ ಒಂದು ಪೇರು ಗಿಡ ಕನಿಷ್ಠ 100 ಹಣ್ಣುಗಳನ್ನು ನೀಡುತ್ತದೆ’ ಎಂದು ಎಂ. ಎಸ್.‌ ಧಡೆಸೂರಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT