ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಜೇಂದ್ರಗಡ: ಪ್ರವಾಸೋದ್ಯಮ ತಾಣಗಳಾಗದ ಐತಿಹಾಸಿಕ ಸ್ಥಳಗಳು

ಗಜೇಂದ್ರಗಡ ತಾಲ್ಲೂಕಿನ ಐತಿಹಾಸಿಕ, ಪೌರಾಣಿಕ ಸ್ಥಳಗಳ ಅಭಿವೃದ್ಧಿ ಗೌಣ
Published : 23 ಸೆಪ್ಟೆಂಬರ್ 2024, 5:07 IST
Last Updated : 23 ಸೆಪ್ಟೆಂಬರ್ 2024, 5:07 IST
ಫಾಲೋ ಮಾಡಿ
Comments

ಗಜೇಂದ್ರಗಡ: ತಾಲ್ಲೂಕಿನಲ್ಲಿರುವ ಹಲವು ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಹೊಂದಿರುವ ಸ್ಥಳಗಳು ತಮ್ಮ ಗತ ವೈಭವ ಹೊರ ಜಗತ್ತಿಗೆ ಪರಿಚಯವಾಗುವ ಮುನ್ನವೇ ಸರ್ಕಾರದ ನಿರ್ಲಕ್ಷ್ಯ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಅವಸಾನದ ಅಂಚಿಗೆ ತಲುಪುತ್ತಿದ್ದು, ಅಕ್ರಮ ಚಟುವಟಿಕೆಗಳ ತಾಣಗಳಾಗಿ ಪರಿವರ್ತನೆಯಾಗುತ್ತಿವೆ.

ಕೋಟೆ ನಾಡು ಎಂದು ಪ್ರಸಿದ್ದಿ ಪಡೆದಿರುವ ಗಜೇಂದ್ರಗಡದ ಗುಡ್ಡದ ಮೇಲೆ ಐತಿಹಾಸಿಕ ಕೋಟೆ, ಚಾಲುಕ್ಯರ ರಾಜಧಾನಿಯಾಗಿದ್ದ ಸೂಡಿ ಸ್ಮಾರಕಗಳು, ವಿವಿಧ ದೈವಗಳ ಆರಾಧನೆಯ ಪುಣ್ಯ ಕ್ಷೇತ್ರಗಳಾಗಿರುವ ದಕ್ಷಿಣ ಕಾಶಿ ಖ್ಯಾತಿಯ ಕಾಲಕಾಲೇಶ್ವರ ದೇವಸ್ಥಾನ, ಗುಡ್ಡದ ಮೇಲಿರುವ ಕಾಲಕಾಲೇಶ್ವರನ ಪಾದಗಟ್ಟಿ, ಇಟಗಿ ಭೀಮಾಂಭಿಕಾದೇವಿ, ಪಂಚತಂತ್ರ ಕಥೆಯ ಉಬ್ಬು ಶಿಲ್ಪ ಹೊಂದಿರುವ ರಾಜೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ, ಕಣವಿ ವೀರಭದ್ರೇಶ್ವರ, ಗುಡ್ಡದಲ್ಲಿರುವ ಅಮರೇಶ್ವರ ಹಾಗೂ ಏಕ ಶಿಲಾ ನಂದಿ, ಸುಂದರ ಕಲ್ಲಿನ ಕೆತ್ತನೆ ಹೊಂದಿರುವ ಸದಾಕಾಲ ನೀರು ಹೊಂದಿರುವ ಪುಷ್ಕರಣಿಗಳಿದ್ದು, ಈ ಸ್ಥಳಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣಗಳನ್ನಾಗಿಸಿ ಹೊರ ಜಗತ್ತಿಗೆ ಪರಿಚಯಿಸಬೇಕಿದೆ.

ಗಜೇಂದ್ರಗಡದ ಉತ್ತರ ದಿಕ್ಕಿನ ಗುಡ್ಡದ ಮೇಲೆ ಕೋಟೆ ವಿಶಾಲವಾಗಿ ಹರಡಿಕೊಂಡಿದೆ. ಕೋಟೆ ತಲುಪಲು ಕಲ್ಲಿನ ನೂರಾರು ಮೆಟ್ಟಿಲುಗಳಿದ್ದು, ಮೆಟ್ಟಿಲು ಹತ್ತಿ ಮೇಲೆ ಹೋಗುತ್ತಿದ್ದಂತೆ ಆಂಜನೇಯನ ದೇವಸ್ಥಾನವಿದೆ. ಆಂಜನೇಯನ ದರ್ಶನ ಪಡೆದು ಮುಂದೆ ಸಾಗಿದರೆ ಕೋಟೆ ಪ್ರವೇಶಿಸುವ ಕಲ್ಲಿನ ಕೆತ್ತನೆಯ ಕುಸುರಿ ಹೊಂದಿರುವ ಬೃಹತ್‌ ದ್ವಾರವಿದ್ದು, ದ್ವಾರ ಪ್ರವೇಶಿಸಿದ ಬಳಿಕ ವಿಶಾಲವಾಗಿ ಹರಡಿಕೊಂಡಿರುವ ಕೋಟೆ ಪ್ರವೇಶವಾಗುತ್ತದೆ. ದ್ವಾರದಿಂದ ಎಡಕ್ಕೆ ತಿರುಗಿ ಮೇಲೆ ಹತ್ತಿದರೆ ಕಲ್ಲಿನ ಸುಂದರ ಕೆತ್ತನೆ ಹೊಂದಿರುವ ತೊಟ್ಟಿಲಿನಂತಿರುವ ವೀಕ್ಷಣಾಲಯವಿದ್ದು, ಅಲ್ಲಿಂದ ಪಟ್ಟಣದ ವಿಹಂಗಮ ನೋಟ ಕಣ್ತುಂಬಿಕೊಳ್ಳಬಹುದಾಗಿದೆ.

ಅಲ್ಲದೆ ಕೋಟೆ ಒಳಗಡೆ ಮದ್ದಿನ ಕೋಣೆ, ಅಕ್ಕ-ತಂಗಿ ಹೊಂಡ, ಮಂಗನ ಹೊಂಡ, ಆಕಳು ಹೊಂಡ ಸೇರಿದಂತೆ ಅನೇಕ ಸ್ಮಾರಕಗಳಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಲ್ಲದೇ, ಅಕ್ರಮ ಕಲ್ಲು ಗಣಿಗಾರಿಕೆಯಿಂದ ಇಂತಹದ್ದೊಂದು ಅದ್ಭುತ ಸ್ಥಳ ಅವಸಾನದ ಅಂಚು ತಲುಪುತ್ತಿದೆ

ಗಜೇಂದ್ರಗಡ ಹಿಂದಿನಿಂದಲೂ ಭಾವೈಕ್ಯಕ್ಕೆಗೆ ಹೆಸರುವಾಸಿಯಾಗಿದೆ. ಅಂದಿನ ಕಾಲದಲ್ಲಿಯೇ ಪಟ್ಟಣದಲ್ಲಿ 18 ಬಾವಿ, 18 ಮಸೀದಿ, 18 ಮಠಗಳನ್ನು ನಿರ್ಮಿಸಲಾಗಿದ್ದು, ಕೋಮುಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಆದರೆ, ಬಹುತೇಕ ಬಾವಿಗಳು ಕೂಡ ಕಾಲನ ಗರ್ಭ ಸೇರಿವೆ.

ಪ್ರಕೃತಿ ಮಡಿಲಲ್ಲಿರುವ ಲಿಂಗರೂಪಿ ಕಾಲಕಾಲೇಶ್ವರ

ಗಜೇಂದ್ರಗಡದಿಂದ 5 ಕಿ.ಮೀ ದೂರದಲ್ಲಿ ನಿಸರ್ಗದ ಮಡಿಲಿನಲ್ಲಿರುವ ಕಾಲಕಾಲೇಶ್ವರ ಗ್ರಾಮದ ಬೆಟ್ಟದ ಪಡಿಯಲ್ಲಿ ಲಿಂಗರೂಪಿಯಾಗಿರುವ ಕಾಲಕಾಲೇಶ್ವರನಿದ್ದು, ಗರ್ಭಗುಡಿಯ ಪಕ್ಕದಲ್ಲಿ ಗಗನಾವತಿ ಗವಿ ಇದೆ. ಇಲ್ಲಿ ಋಷಿ ಮುನಿಗಳು ತಪಗೈದಿದ್ದಾರೆಂಬ ಪ್ರತೀತಿ ಇದೆ. ಗರ್ಭ ಗುಡಿಯ ಹೊರಬಾಗದಲ್ಲಿ ಅಂತರಗಂಗೆ ಇದ್ದು, ಅಲ್ಲಿ ಆಲದ ಮರದ ಬೇರಿನ ಮೂಲಕ ನೀರು ಜಿನುಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಮೇಲೆ ಒಂದು ಪೊಟರೆಯಲ್ಲಿ ನೀರು ಜಿನುಗುತ್ತದೆ. ಇದು ಯುಗಾದಿ ಪಾಡ್ಯದಂದು ನೀರು ಜಿನುಗಿರುವುದನ್ನು ನೋಡಿ ಈ ಭಾಗದ ರೈತರು ಮಳೆಗಳನ್ನು ನಿರ್ಧರಿಸುತ್ತಾರೆ.

ದೇವಸ್ಥಾನದ ಕೆಳಗಡೆ ಕುಡಿಯಲು ಹಾಗೂ ಸ್ಥಾನಕ್ಕೆ ಎರಡು ಪ್ರತ್ಯೇಕ ಪುಷ್ಕರಣಿಗಳಿವೆ. ದೇವಸ್ಥಾನದ ಎದುರಿಗಿರುವ ಮತ್ತೊಂದು ಗುಡ್ಡದ ತುದಿಯಲ್ಲಿ ಆಲದ ಮರವಿದ್ದು, ಅದರ ಅಡಿಯಲ್ಲಿ ಚಿಕ್ಕ ಗುಡಿಯಲ್ಲಿ ಕಲ್ಲಿನಲ್ಲಿ ಕೆತ್ತಿರುವ ಪಾದುಕೆಗಳಿವೆ. ಇವು ಕಾಲಕಾಲೇಶ್ವರನ ಪಾದುಕೆ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ. ಅಲ್ಲದೆ ಕಾಲಕಾಲೇಶ್ವರ ಗುಡ್ಡದ ಕಡಿದಾದ, ದುರ್ಗಮ ಪ್ರದೇಶದಲ್ಲಿರುವ ಗವಿಯೊಂದರಲ್ಲಿ ಮುರಡಿ ಭೀಮಜ್ಜ ನೆಲೆಸಿ ಹೈದರಾಬಾದ್‌ ನಿಜಾಮರ ವಿರುದ್ದದ ಹೋರಾಟದಲ್ಲಿ ಹಲವು ವರ್ಷಗಳ ಕಾಲ ಸಂಘಟನೆ ಮಾಡಿದ್ದರು. ಈಗಲೂ ಸ್ಥಳೀಯರು ಈ ಗವಿಯನ್ನು ಭೀಮಜ್ಜನ ಗವಿ ಎಂದೇ ಗುರುತಿಸುತ್ತಾರೆ.

ಇಲ್ಲಿಗೆ ಪ್ರತಿನಿತ್ಯ ನೂರಾರು ಮಂದಿ ಭಕ್ತರು ಬರುತ್ತಾರೆ. ವಿಶೇಷ ಸಂದರ್ಭದಲ್ಲಿ ಸಾವಿರಾರು ಭಕ್ತರು, ಪ್ರವಾಸಿಗರು ಬರುತ್ತಾರೆ. ಹಾಗಾಗಿ, ಕಾಲಕಾಲೇಶ್ವರ ಬೆಟ್ಟಕ್ಕೆ ಇನ್ನಷ್ಟು ಮೂಲಸೌಕರ್ಯ ಕಲ್ಪಿಸಬೇಕು. ಭಕ್ತರಿಗೆ ಅನುಕೂಲವಾಗುವಂತೆ ರೋಪ್‌ ವೇ ನಿರ್ಮಾಣಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವೈಭೋಗದ ತುತ್ತತುದಿಯಲ್ಲಿ ಮೆರೆದಿದ್ದ ಸೂಡಿ

ಗಜೇಂದ್ರಗಡದಿಂದ 12 ಕಿ.ಮೀ ದೂರದಲ್ಲಿರುವ ಸೂಡಿ ಗ್ರಾಮವು ಕಲ್ಯಾಣ ಚಾಲುಕ್ಯರ ಸಹೋದರಿ ರಾಣಿ ಅಕ್ಕಾದೇವಿ ಆಳ್ವಿಕೆಯಲ್ಲಿ ದೊಡ್ಡ ಅಗ್ರಹಾರವಾಗಿ, ನಾಣ್ಯಗಳನ್ನು ತಯಾರಿಸುತ್ತಿದ್ದ ಹೆಸರಾಂತ ಟಂಕಶಾಲೆಯಾಗಿತ್ತು. ಸೂಡಿ ಒಂದು ಕಾಲದಲ್ಲಿ ವೈಭೋಗದ ತುತ್ತತುದಿಯಲ್ಲಿ ಮೆರೆದಿತ್ತು ಎಂಬುದಕ್ಕೆ ಅಳಿದುಳಿದ ಪ್ರಾಚ್ಯ ಅವಶೇಷಗಳು ಇತಿಹಾಸಕ್ಕೆ ಮೂಕ ಸಾಕ್ಷಿಯಾಗಿ ನಿಂತಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ.

ಗ್ರಾಮದಲ್ಲಿರುವ ನಾಗರ ಬಾವಿ ವಿಶಿಷ್ಟವಾಗಿದ್ದು, ತನ್ನ ಇತಿಹಾಸವನ್ನು ಗರ್ಭದಲ್ಲಿರಿಸಿಕೊಂಡಿದೆ. ಇದನ್ನು ನಾಗಕುಂಡ, ರಸ್ತಾಬಾವಿ, ಪಾಂಡವರ ಬಾವಿ ಎಂದು ಕರೆಯುತ್ತಾರೆ. ಸಾಮಂತನಾದ ನಾಗದೇವನು ಇದನ್ನು ನಿರ್ಮಿಸಿದ ಕಾರಣ ನಾಗರಬಾವಿ, ನಾಗಕುಂಡ ಎಂದು ಹೆಸರು ಪಡೆದುಕೊಂಡಿದೆ. ಈ ಬಗೆಗಿನ ಶಾಸನವು ಇಲ್ಲಿರುವ ಜೋಡು ಕಳಸದ ಗುಡಿಯಲ್ಲಿದೆ. ಇದು ಸುಮಾರು 80 ಅಡಿ ಸುತ್ತಳತೆಯನ್ನು, ಸುಮಾರು 50 ಅಡಿ ಆಳವನ್ನು ಹೊಂದಿದೆ.

ಆ ಶಾಸನದ ಪ್ರಕಾರ ಕ್ರಿ.ಶ 1060 ರಲ್ಲಿ ಚಾಲುಕ್ಯರ ಮಹಾ ಸಾಮಂತಾಧಿಪತಿ, ದಂಡನಾಯಕ ನಾಗದೇವನು ನಾಗಗೊಂಡವೆಂಬ ಅಪರೂಪದ, ವಿಶಿಷ್ಠವಾದ ಪುಷ್ಕರಣಿಯನ್ನು ಕಟ್ಟಿಸುತ್ತಾನೆ. ಇದು ಚಾಲುಕ್ಯರ ವೈಭವದ ಕೊಳವಾಗಿತ್ತು. ಇದರ ಒಳಗೋಡೆಯಲ್ಲಿ ಉಬ್ಬು ಕಂಬದ ಗೋಪುರಗಳ ಮಾದರಿಯ ಕೆತ್ತನೆ ಇದೆ. ಹಿಂದೆ ಈ ಬಾವಿಯ ನೀರನ್ನು ಪಕ್ಕದಲ್ಲಿರುವ ನಾಗೇಶ್ವರ ದೇವಾಲಯದ ಪೂಜೆಗಾಗಿ ಒಯ್ಯುತ್ತಿದ್ದರಂತೆ, ಆದರೆ ಇಂದು ಬಾವಿಯು ನೀರಿಲ್ಲದೇ ಬತ್ತಿ ಶಿಥಿಲಾವಸ್ಥೆಯಿಂದ ಶಿಲ್ಪವು ಸಾಕಷ್ಟು ಜೀರ್ಣಗೊಂಡಿದೆ.

ಗ್ರಾಮದ ಆಗ್ನೇಯ ದಿಕ್ಕಿನಲ್ಲಿರುವ ಚಾಲುಕ್ಯರ ಕಾಲದಲ್ಲಿ ನಾಣ್ಯಗಳನ್ನು ಮುದ್ರಿಸುತ್ತಿದ್ದ ಟಂಕಶಾಲೆ ಸದ್ಯ ಭೂಮಿಯಲ್ಲಿ ಭಾಗಶಃ ಹುದುಗಿದ್ದು, ಅದು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಇದರ ಮೂಲಕ ನಾಗರ ಬಾವಿ ಸಮೀಪದ ಸಂಕೀರ್ಣ ಸಂಪರ್ಕಿಸುವ ಸುರಂಗ ಮಾರ್ಗವಿತ್ತು ಎನ್ನಲಾಗುತ್ತದೆ. ಈ ಟಂಕಶಾಲೆಯ ಪ್ರವೇಶ ದ್ವಾರದ ಕಂಬಗಳು ಹಾಗೂ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿವೆ. ಹೀಗಾಗಿ ಈ ಸುರಂಗ ಮಾರ್ಗಕ್ಕೆ ಅಡ್ಡಲಾಗಿ ಗೋಡೆ ಕಟ್ಟಿ ಮುಚ್ಚಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಶಿವಶರಣಿ ಭೀಮಮ್ಮ ನೆಲೆಸಿದ್ದ ಇಟಗಿ: ಗಜೇಂದ್ರಗಡದಿಂದ 16 ಕಿ.ಮೀ ದೂರದಲ್ಲಿರುವ ಇಟಗಿ ಗ್ರಾಮದಲ್ಲಿ 19ನೇ ಶತಮಾನದ ಕೊನೆಯಲ್ಲಿ ಶಿವಶರಣೆ ಭೀಮಮ್ಮ ಹಲವು ಪವಾಡಗಳನ್ನು ಮಾಡಿದ್ದಾರೆಂಬ ಪ್ರತೀತಿ ಇದೆ. ಹೀಗಾಗಿ ಗ್ರಾಮದಲ್ಲಿ ಭೀಮಾಂಭಿಕಾ ಮಠ ನಿರ್ಮಿಸಲಾಗಿದ್ದು, ಪ್ರತಿ ಅಮವಾಸ್ಯೆಗೆ ತಾಯಿ ದರ್ಶನಕ್ಕೆ ದೂರದ ಊರುಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಅಲ್ಲದೆ ಗ್ರಾಮದ ಕೆರೆಯ ಪಕ್ಕದಲ್ಲಿ ಚಾಲುಕ್ಯರ ಕಾಲದ ಶಂಭುಲಿಂಗ ದೇವಾಲಯವೂ ಇದೆ. ಇದನ್ನೂ ಕೂಡ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಗಜೇಂದ್ರಗಡದ ಗುಡ್ಡದ ಮೇಲಿರುವ ಆಕಲಹೊಂಡ (ಸಂಗ್ರಹ ಚಿತ್ರ)
ಗಜೇಂದ್ರಗಡದ ಗುಡ್ಡದ ಮೇಲಿರುವ ಆಕಲಹೊಂಡ (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಸನ್ನಿದಾನದ ವಿಹಂಗಮ ನೋಟ (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಸನ್ನಿದಾನದ ವಿಹಂಗಮ ನೋಟ (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿರುವ ನಾಗರ ಬಾವಿ (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿರುವ ನಾಗರ ಬಾವಿ (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿ ಈ ಹಿಂದೆ ನಾಣ್ಯಗಳನ್ನು ಮುದ್ರಿಸುತ್ತಿದ್ದ ಟಂಕ ಶಾಲೆ ಮಣ್ಣಲ್ಲಿ ಹೂತು ಕಸದ ತೊಟ್ಟಿಯಾಗಿರುವುದು (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿ ಈ ಹಿಂದೆ ನಾಣ್ಯಗಳನ್ನು ಮುದ್ರಿಸುತ್ತಿದ್ದ ಟಂಕ ಶಾಲೆ ಮಣ್ಣಲ್ಲಿ ಹೂತು ಕಸದ ತೊಟ್ಟಿಯಾಗಿರುವುದು (ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿರುವ ಜೋಡು ಕಳಸದ ದೇವಾಲಯ
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿರುವ ಜೋಡು ಕಳಸದ ದೇವಾಲಯ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದಲ್ಲಿರುವ ಪಂಚತಂತ್ರದ ಕಥೆಯ ಉಬ್ಬು ಶಿಲ್ಪ ಹೊಂದಿರುವ ಕಲ್ಗುಡಿ
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದಲ್ಲಿರುವ ಪಂಚತಂತ್ರದ ಕಥೆಯ ಉಬ್ಬು ಶಿಲ್ಪ ಹೊಂದಿರುವ ಕಲ್ಗುಡಿ

ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು

ರೋಣ ಸವಡಿ ಸೂಡಿ ಗಜೇಂದ್ರಗಡ ಕಾಲಕಾಲೇಶ್ವರ ಸೇರಿದಂತೆ ಅನೇಕ ಊರುಗಳಲ್ಲಿ ಪುರಾತನ ಸ್ಮಾರಕಗಳಿದ್ದು ಅವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅವುಗಳನ್ನು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗಜೇಂದ್ರಗಡದ ಇಂಗು ಕೆರೆ ಪಕ್ಕದಲ್ಲಿ ₹5 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್‌ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು ಕಾಲಕಾಲೇಶ್ವರ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರೋಪ್‌ ವೇ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ ಸರ್ಕಾರದ ವತಿಯಿಂದ ಸೂಡಿ ಉತ್ಸವ ನಡೆಸಲು ಪ್ರಯತ್ನ ಮಾಡಲಾಗುತ್ತಿದೆ. –ಜಿ.ಎಸ್.ಪಾಟೀಲ ಶಾಸಕರು ಹಾಗೂ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ರೋಣ.

ಧಾರ್ಮಿಕ ಸ್ಥಳ ಅಭಿವೃದ್ಧಿಪಡಿಸಿ ಗಜೇಂದ್ರಗಡ ಭಾಗದಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣಗಳನ್ನಾಗಿಸಿದರೆ ಅವುಗಳ ಗತ ವೈಭವ ಹೊರ ಜಗತ್ತಿಗೆ ಪರಿಚಯಿಸಿದಂತಾಗುತ್ತದೆ. ಅಲ್ಲದೆ ಪ್ರವಾಸೋದ್ಯಮದಿಂದ ಆದಾಯವೂ ಹೆಚ್ಚುತ್ತದೆ.
-–ಅಪ್ಪು ಮತ್ತಿಕಟ್ಟಿ ಯುವ ಮುಖಂಡ
ಗಜೇಂದ್ರಗಡ ಹಂಪಿ ಮಾದರಿ ಅಭಿವೃದ್ಧಿಯಾಗಲಿ ಗಜೇಂದ್ರಗಡ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರಾಚೀನ ಸ್ಮಾರಕಗಳಿವೆ. ಅವುಗಳನ್ನು ಪ್ರಾಚ್ಯ ವಸ್ತು ಇಲಾಖೆ ವ್ಯಾಪ್ತಿಗೆ ಒಳಪಡಿಸಿ ಹಂಪಿ ಬದಾಮಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು
–ಅಂದಪ್ಪ ರಾಠೋಡ ಉಪಾಧ್ಯಕ್ಷರು ಜೈ ಭೀಮ್‌ ಸೇನೆ ರಾಜ್ಯ ಸಂಘರ್ಷ ಸಮೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT