ಗುರುವಾರ , ಡಿಸೆಂಬರ್ 5, 2019
20 °C
ಮುಂಗಾರು ಹಂಗಾಮಿನ ಪ್ರಮುಖ ಬೆಳೆ

ಮಳೆ ಕೊರತೆ: ಇಳುವರಿ ಕುಸಿತ, ದರವೂ ಕುಸಿತ–ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರ

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Deccan Herald

ಲಕ್ಷ್ಮೇಶ್ವರ: ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆದ ಜಿಲ್ಲೆಯ ರೈತರ ಕಣ್ಣಲ್ಲಿ ಈಗ ಕಣ್ಣೀರು ಹರಿಯುತ್ತಿದೆ. ಇಳುವರಿ ಕುಸಿತದ ಜತೆಗೆ ದರವೂ ಪಾತಾಳಕ್ಕಿಳಿದಿರುವುದು ರೈತರನ್ನು ಆತಂಕಕ್ಕೆ ದೂಡಿದೆ.

ಜಿಲ್ಲೆಯಲ್ಲಿ ಎರೆ (ಕಪ್ಪು ಮಣ್ಣಿನಲ್ಲಿ) ಭೂಮಿಯಲ್ಲಿ ಮತ್ತು ನೀರಾವರಿ ಸೌಲಭ್ಯ ಇರುವ ಕಡೆ ಮುಂಗಾರಿನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಲಭಿಸಿದ್ದರಿಂದ ನಿರೀಕ್ಷೆ ಮೀರಿ ಈರುಳ್ಳಿ ಬಿತ್ತನೆಯಾಗಿದೆ. ತಾಲ್ಲೂಕಿನ ರಾಮಗಿರಿ, ಬಸಾಪುರ, ಗೊಜನೂರು, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ಅಡರಕಟ್ಟಿ, ಬಟ್ಟೂರು, ಪುಟಗಾಂವ್‍ಬಡ್ನಿ, ದೊಡ್ಡೂರು, ಶಿಗ್ಲಿ, ಗೋವನಾಳ ಭಾಗಗಳಲ್ಲಿ ನೂರಾರು ಹೆಕ್ಟೇರ್‌ಗಳಲ್ಲಿ ಈರುಳ‌್ಳಿ ಬಿತ್ತನೆಯಾಗಿದ್ದು, ಇಳುವರಿ ಕೈಗೆ ಬರುತ್ತಿದ್ದಂತೆ  ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

‘ಮೇ ತಿಂಗಳಲ್ಲಿ ಉತ್ತಮ ಮಳೆ ಲಭಿಸಿತ್ತು. ನಂತರ ಜುಲೈ, ಆಗಸ್ಟ್‌ ತಿಂಗಳಲ್ಲಿ ಮಳೆ ಕೊರತೆ ಕಾಡಿತ್ತು. ತೇವಾಂಶದ ಕೊರತೆಯಿಂದಾಗಿ ಈರುಳ್ಳಿ ಗಡ್ಡೆಗಳ ಗಾತ್ರವೂ ಕಡಿಮೆಯಾಗಿದೆ. ಇದರ ಜತೆಗೆ ಬೆಲೆಯೂ ಕುಸಿದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಪ್ರತಿ ಕ್ವಿಂಟಲ್‍ಗೆ ಸರಾಸರಿ ₹ 2 ಸಾವಿರ  ಧಾರಣೆ ಲಭಿಸಿದರೂ ರೈತರಿಗೆ ಹಾಕಿದ ಬಂಡವಾಳ ಸಿಗುತ್ತದೆ. ಆದರೆ, ಬೆಲೆ ಈಗ ಕ್ವಿಂಟಲ್‌ಗೆ  ₹700ಕ್ಕೆ ಕುಸಿದಿದೆ. ಇದರಿಂದ ಲಾಭದ ಮಾತಿರಲಿ, ಹಾಕಿದ ಬಂಡವಾಳವೂ ಕೈಗೆ ಬಾರದಂತಾಗಿದೆ ಎನ್ನುವುದು ಬೆಳೆಗಾರರ ನೋವು.

‘ಬೀಜ, ಗೊಬ್ಬರಕ್ಕ ಸಾವಿರಾರು ರೂಪಾಯಿ ಖರ್ಚು ಮಾಡೇವಿ. ಬೆಳೆ ಬಂದ ಮ್ಯಾಲೆ ಅದನ್ನು ಸ್ವಚ್ಛಮಾಡಲು  ಹೆಣ್ಣಾಳಿಗೆ ₹200, ಗಂಡಾಳಿಗೆ ₹300 ಪಗಾರ ಕೊಡಬೇಕ್ರೀ. ಈ ಬೆಲೆ ಕುಸಿದಿದೆ. ಸರ್ಕಾರ ಬೆಂಬಲ ಬೆಲೆ ಕೊಟ್ಟರ ಸ್ವಲ್ಪ ಅನುಕೂಲ ಅಕ್ಕೇತಿ’ ಎಂದು ಅಡರಕಟ್ಟಿ ಗ್ರಾಮದ ಗಂಗನಗೌಡ ಪಾಟೀಲ, ಬಸವರಾಜ ಕದಡಿ, ಹಾಲಪ್ಪ ಶಿರಹಟ್ಟಿ ಹೇಳಿದರು.

ಸದ್ಯ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈರುಳ್ಳಿ ಕೊಯ್ಲಿಗೆ ಬಂದಿದೆ. ಆದರೆ ಯೋಗ್ಯ ಬೆಲೆ ಸಿಗದೆ ರೈತರು ಅದನ್ನು ಕೀಳಲು ಹಿಂದೇಟು ಹಾಕುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು