ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ ಫಲ ಕೊಡುವ ತೋಟ: ವಕೀಲಿಕೆ, ರಾಜಕೀಯದ ಮಧ್ಯೆ ಕೃಷಿ ಪ್ರೀತಿ

ವಕೀಲ, ರಾಜಕೀಯದ ಜತೆಗೆ ಕೃಷಿಯತ್ತ ಒಲವು ಹರಿಸಿದ ದೊಡ್ಡಗೌಡ್ರ
Last Updated 6 ಜನವರಿ 2023, 6:16 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ವಕೀಲ ಹಾಗೂ ಪ್ರಗತಿಪರ ರೈತರಾದ ಎಂ.ಎಸ್. ದೊಡ್ಡಗೌಡ್ರ ರಾಜಕೀಯದೊಂದಿಗೆ ಇವರು ಕೃಷಿಯಲ್ಲೂ ಒಲುವು ಹೊಂದಿದ್ದಾರೆ. ಸಮೀಪದ ಶಿಗ್ಲಿಯಲ್ಲಿ ಒಂದೂವರೆ ಎಕರೆಯಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹತ್ತಾರು ತರದ ಗಿಡಮರಗಳು ಇವರ ತೋಟದಲ್ಲಿ ನಳನಳಿಸುತ್ತಿವೆ.

2021ರ ಜೂನ್‍ನಲ್ಲಿ ದೊಡ್ಡಗೌಡ್ರು ವಿವಿಧ ಸಸಿಗಳನ್ನು ಬೆಳೆಯಲು ಮುಂದಾದರು. ಸದ್ಯ ಇವರ ತೋಟದಲ್ಲಿ 300 ಶ್ರೀಗಂಧ, 300 ಚೊಗಚೆ, 300 ಸೀತಾಫಲ, 100 ಸೇಬು, 300 ಬೇವು, 100 ಬಿದಿರು, 100 ಬೀಟೆ, 100 ಸಿಲ್ವರ್ ಓಕ್, 30 ಮಹಾಗನಿ, 4 ಮೋಸಂಬಿ, 4 ಕಿತ್ತಳೆ, 10 ಮಾವು, ಆರು ಹಲಸುಗಳೊಂದಿಗೆ ನೇರಳೆ, ಅಂಜೂರ, ಚಿಕ್ಕು, ಬಾರೆ, ಬೆಣ್ಣೆ ಹಣ್ಣು, ಗೋಡಂಬಿ, ಏಲಕ್ಕಿ, ಮೆಣಸು, ಶುಂಠಿ, ಪಪ್ಪಾಯ, ಬಾಳೆ, ಕರಿಬೇವು, ನೆಲ್ಲಿ ಹೀಗೆ ಎಲ್ಲ ಜಾತಿಯ ಗಿಡಗಳನ್ನು ಬೆಳೆಯುತ್ತಿದ್ದಾರೆ.

ಸಾಲಿನಿಂದ ಸಾಲಿಗೆ ಹದಿನೈದು ಅಡಿ ಮತ್ತು ಗಿಡದಿಂದ ಗಿಡಕ್ಕೆ 12 ಅಡಿ ಅಂತರದಲ್ಲಿ ಶ್ರೀಗಂಧದ ಸಸಿಗಳನ್ನು ನಾಟಿ ಮಾಡಿದ್ದು ಉತ್ತಮ ಆರೈಕೆಯಿಂದಾಗಿ ಅವು ಈಗ ಹತ್ತಾರು ಅಡಿ ಎತ್ತರಕ್ಕೆ ಬೆಳೆದಿವೆ. ಇನ್ನು ಇವುಗಳ ಮಧ್ಯ ಒಂದು ಸೀತಾಫಲ ಮತ್ತು ಒಂದು ಸೇಬು ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಹಿಮಾಚಲ ಪ್ರದೇಶದಿಂದ ಸೇಬು ಸಸಿಗಳನ್ನು ಮೈಸೂರಿನಿಂದ ಬೆಣ್ಣೆ ಹಣ್ಣಿನ ಸಸಿ, ಕಾರವಾರದಿಂದ ಗಾಳಿ ಗಿಡದ ಸಸಿಗಳನ್ನು ತಂದು ನಾಟಿ ಮಾಡಿ ಬೆಳೆಸುತ್ತಿದ್ದಾರೆ. ಈವರೆಗೆ ಒಟ್ಟು ₹ 10 ಲಕ್ಷ ಖರ್ಚು ಮಾಡಿದ್ದಾರೆ.

ದೊಡ್ಡಗೌಡ್ರ ಪ್ರತಿದಿನ ತೋಟಕ್ಕೆ ಬಂದು ತಮ್ಮ ಪುತ್ರ ನಿಖಿಲ್ ಅವರೊಂದಿಗೆ ಗಿಡಗಳನ್ನು ಪ್ರ್ಯೂನಿಂಗ್ ಮಾಡುವುದು ಕಸಕಡ್ಡಿ ತೆಗೆಯುವುದು, ನೀರು ಹಾಯಿಸುವ ಕೆಲಸಗಳನ್ನು ಮಾಡುತ್ತಾರೆ. ಮಕ್ಕಳಂತೆ ಸಸಿಗಳನ್ನು ಬೆಳೆಸಿದ ಕಾರಣ ಎಲ್ಲ ಸಸಿಗಳು ಉತ್ತಮವಾಗಿ ಬೆಳೆದು ಗಿಡಗಳಾಗಿ ಇಡೀ ತೋಟ ಹಸುರಿನಿಂದ ಕಂಗೊಳಿಸುತ್ತಿದೆ.

ಸರ್ವಋತು ತೋಟ

‘ಒಂದೂವರೆ ವರ್ಷದಲ್ಲಿ ನಮ್ಮ ತೋಟದಲ್ಲಿ ನಾಟಿ ಮಾಡಿದ್ದ ಸಸಿಗಳು ಇಂದು ಗಿಡಗಳಾಗಿ ಬೆಳೆದು ನಿಂತಿವೆ. ವರ್ಷ ಪೂರ್ತಿ ಯಾವುದಾದರೊಂದು ಹಣ್ಣು ನಮ್ಮ ತೋಟದಲ್ಲಿ ಸಿಗಬೇಕು ಎಂಬ ಉದ್ದೇಶದಿಂದ ಸರ್ವಋತು ತೋಟ ಮಾಡಿದ್ದೇವೆ’ ಎಂದು ಎಂ.ಎಸ್. ದೊಡ್ಡಗೌಡ್ರ ಹೇಳುತ್ತಾರಲ್ಲದೆ, ‘ಇನ್ನು ಎರಡು ವರ್ಷಗಳಲ್ಲಿ ತೋಟದಿಂದ ಉತ್ತಮ ಆದಾಯ ಬರುವ ಭರವಸೆ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT