ಇದು ‘ಹೊಸ್ತಿಲು’ ನಡುಗಿಸುವ ಚಳಿ!

7
ಉಣ್ಣೆ ಬಟ್ಟೆ, ಹೊದಿಕೆ, ಕುರುಕಲು ತಿಂಡಿಗೆ ಹೆಚ್ಚಿದ ಬೇಡಿಕೆ

ಇದು ‘ಹೊಸ್ತಿಲು’ ನಡುಗಿಸುವ ಚಳಿ!

Published:
Updated:
Prajavani

ರೋಣ: ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ನಡುಗುವಷ್ಟು ಚಳಿ ಇರುತ್ತದೆ ಎಂಬುದು ಹಿರಿಯರ ಹೇಳಿಕೆ. ಆದರೆ, ಹೊಸ್ತಲ ಹುಣ್ಣಿಮೆಗಿಂತ ಮೊದಲೇ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಚಳಿ ಅಬ್ಬರಿಸುತ್ತಿದ್ದು, ಜನತೆ ತತ್ತರಿಸಿದ್ದಾರೆ.

ಮೈನಡುಗಿಸುವ ಚಳಿಯಿಂದ ಜನರು ದಪ್ಪನೆಯ ಉಣ್ಣೆ ಬಟ್ಟೆ, ಜಾಕೆಟ್, ಸ್ವೆಟರ್, ಟೋಪಿಗಳಿಗೆ ಮೊರೆ ಹೋಗಿದ್ದಾರೆ. ಕಂಬಳಿ, ಕೌದಿ, ರಗ್ಗು, ಬ್ಲಾಂಕೆಟ್‌ಗಳನ್ನು ಹೊದಿಕೆಯಾಗಿ ಬಳಸುತ್ತಿದ್ದಾರೆ.

ಗ್ರಾಮಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅಲ್ಲಲ್ಲಿ ಬೆಂಕಿ ಕಾಯಿಸುವ ದೃಶ್ಯ ಸಾಮಾನ್ಯವಾಗಿದೆ. ಕುರುಕುಲ ತಿಂಡಿ, ಹುರಿದ ಮತ್ತು ಕರಿದ ಶೇಂಗಾಕ್ಕೆ ಬೇಡಿಕೆ ಹೆಚ್ಚಿದೆ. ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಮುಲ್ಲಾನ ಬಾವಿ ವೃತ್ತ, ಸೂಡಿ ವೃತ್ತಗಳಲ್ಲಿರುವ ಅಂಗಡಿ ಮತ್ತು ತಳ್ಳುಗಾಡಿಗಳಲ್ಲಿ ಬಿಸಿ ಮೆಣಸಿನಕಾಯಿ ಭಜಿ, ಇಡ್ಲಿ, ವಡಾ, ಗಿರಮಿಟ್, ಬದನೆಕಾಯಿ ಭಜಿ ವ್ಯಾಪಾರ ಜೋರಾಗಿದೆ.

ಚಳಿ ವಿಪರೀತವಾಗಿರುವುದರಿಂದ ಉಣ್ಣೆ ಬಟ್ಟೆಗಳ ವ್ಯಾಪಾರ ಹೆಚ್ಚಿದೆ ಎಂದು ಪಟ್ಟಣದ ಜೊಡುರಸ್ತೆಯಲ್ಲಿ ಇರುವ ಅಂಗಡಿ ಮಾಲೀಕ ರಾಮದೇವ ತಿಳಿಸಿದರು.

ಈಗ ಹಗಲಿಗಿಂತ ರಾತ್ರಿ ಹೆಚ್ಚಾಗಿರುವುದರಿಂದ ಕೃಷಿ ಕಾರ್ಯವೂ ವಿಳಂಬವಾಗುತ್ತಿದೆ ಎನ್ನುತ್ತಾರೆ ಮಾಡಲಗೇರಿ ರೈತ ರಂಗನಗೌಡ ಗಿಡಮಣ್ಣವರ.

ಮನೆಮದ್ದಿನ ಮುನ್ನೆಚ್ಚರಿಕೆ
ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ನಿತ್ಯ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದು ಸೂಕ್ತ, ದೇಹದಲ್ಲಿ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಶೀತ ಕಂಡು ಬಂದರೆ ಕರಿಮೆಣಸು, ತುಳಸಿ, ಜೀರಿಗೆ, ಶುಂಠಿ ಕಷಾಯ ಕುಡಿಯುವುದು ಉತ್ತಮ. ಬಿಸಿ ಹಾಲಿಗೆ ಚಿಟಿಕೆ ಅರಿಸಿನ ಪುಡಿ ಸೇರಿಸಿ ಸೇವಿಸಿದರೆ ಶೀತ, ಅಲರ್ಜಿ ಕಡಿಮೆ ಆಗುತ್ತದೆ. ಆಸ್ತಮಾ ಇದ್ದವರು ಅಮೃತಬಳ್ಳಿ ಕಷಾಯ ಸೇವಿಸಿದರೆ ಉತ್ತಮ ಎನ್ನುತ್ತಾರೆ ಪಟ್ಟಣದ ಹಿರಿಯ ನಾಗರಿಕ ಬಸನಗೌಡ ಬಸನಗೌಡ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !