ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಾಡಿಗಳ ಸ್ವರ್ಗ ಮಾಗಡಿ ಕೆರೆ

‘ರಾಮ್‌ಸರ್‌’ ಜೌಗು ಪ್ರದೇಶ ಪಟ್ಟಿಗೆ ಸೇರ್ಪಡೆ: ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿ
ನಿಂಗಪ್ಪ ಹಮ್ಮಿಗಿ
Published 4 ಫೆಬ್ರುವರಿ 2024, 5:30 IST
Last Updated 4 ಫೆಬ್ರುವರಿ 2024, 5:30 IST
ಅಕ್ಷರ ಗಾತ್ರ

ಶಿರಹಟ್ಟಿ: ಬಾನಾಡಿಗಳ ತೂಗು ತೊಟ್ಟಿಲಿನ ಆಶ್ರಯ ತಾಣವಾದ ತಾಲ್ಲೂಕಿನ ಮಾಗಡಿ ಕೆರೆಯನ್ನು ರಾಮ್‌ಸರ್‌ (ಅಂತರರಾಷ್ಟ್ರೀಯ ಜೌಗು ಪ್ರದೇಶ) ಪಟ್ಟಿಗೆ ಸೇರಿಸಿದ್ದು, ಜಿಲ್ಲೆಯ ಜೀವ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ರಾಮ್‌ಸರ್‌ ಪಟ್ಟಿಗೆ ಐದು ಭಾರತೀಯ ತೇವ ಪ್ರದೇಶಗಳನ್ನು ಸೇರಿಸಲಾಗಿದ್ದು, ಅದರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶ ಆಯ್ಕೆಯಾಗಿದ್ದು, ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಮಾಗಡಿ ಕೆರೆಯು 134.15 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಮಾಗಡಿ ಹಾಗೂ ಹೊಳಲಾಪೂರ ಗ್ರಾಮದಲ್ಲಿ ಚಾಚಿಕೊಂಡಿದೆ. ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ. ಹಲವಾರು ಪ್ರಬೇಧಗಳ ಹಕ್ಕಿಗಳ ಆಶ್ರಯ ತಾಣದಿಂದ ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣವಾಗಿ ಮಾಗಡಿ ಕೆರೆ ರೂಪುಗೊಂಡಿದೆ.

ಜಮ್ಮು-ಕಾಶ್ಮೀರ, ಲಡಾಖ್, ಟಿಬೆಟ್, ಮಲೇಷ್ಯಾ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೀಯಾ, ನೇಪಾಳ, ಬಾಂಗ್ಲಾದೇಶ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಬಾನಾಡಿಗಳು, ಈ ಕೆರೆಯಲ್ಲಿ ಐದಾರು ತಿಂಗಳು ನೆಲೆಯೂರಿ ನಂತರ ತಮ್ಮ ತವರಿಗೆ ಮರಳುತ್ತವೆ.

ನೀರು ನಾಯಿಗಳ ವಾಸ:


ಅಪರೂಪದ ಪ್ರಾಣಿಯಾದ ನೀರುನಾಯಿಗಳು ಸಹ ಮಾಗಡಿ ಕೆರೆಯಲ್ಲಿವೆ. ಪ್ರಸ್ತುತ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರು ಕೊಂಚ ಕಡಿಯಾಗಿದ್ದು, ಕೆರೆಯ ನಡುಗಡ್ಡೆಯಲ್ಲಿ ನೀರುನಾಯಿಗಳು ಕಾಣುತ್ತವೆ. ನೀರಿನಲ್ಲಿ ಕೆಲವೊಮ್ಮೆ ತಲೆಎತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ಚಲಿಸುತ್ತವೆ. ಇಂತಹ ಅಪರೂಪದ ಪ್ರಾಣಿಗಳು  ವಾಸವಾಗಿರುವುದು ಮಾಗಡಿ ಕೆರೆಯ ಮತ್ತೊಂದು ವಿಶೇಷ.

ಜಗತ್ತಿಗೆ ಪರಿಚಯವಾದ ಮಾಗಡಿ ಕೆರೆ:


ಫೆ.2ರಂದು ಪ್ರತಿವರ್ಷ ವಿಶ್ವ ಜೌಗುಪ್ರದೇಶ ದಿನ ಆಚರಿಸಲಾಗುತ್ತದೆ. ಈ ವರ್ಷ ಮಧ್ಯ ಪ್ರದೇಶದ ಸಿರ್ಪೂರ್‌ ಸರೋವರದ ಪರಿಸರದಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಿತು. ವಿವಿಧ ದೇಶಗಳಲ್ಲಿ ಜೌಗು ಪ್ರದೇಶದ ಸಂರಕ್ಷಣೆಯಲ್ಲಿ ತೊಡಗಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು, ವಿಜ್ಞಾನಿಗಳು, ಪಕ್ಷಿ ವೀಕ್ಷಕರು, ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಘೋಷಣೆಯಾದ ಐದು ಪ್ರದೇಶಗಳ ಜೊತೆಯಲ್ಲಿ ಮಾಗಡಿ ಕೆರೆಯ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಿದೆ ಎಂಬುದು ಪಕ್ಷಿಪ್ರಿಯರ ಹೆಮ್ಮೆಯ ಮಾತುಗಳು.

ಮಾಗಡಿ ಕೆರೆಯಲ್ಲಿ ಕಂಡುಬಂದ ನೀರುನಾಯಿಗಳು
ಮಾಗಡಿ ಕೆರೆಯಲ್ಲಿ ಕಂಡುಬಂದ ನೀರುನಾಯಿಗಳು
ಕೆರೆಯನ್ನು ರಾಮ್‌ಸರ್‌ ಪಟ್ಟಿಗೆ ಪಟ್ಟಿಗೆ ಸೇರಿಸಿದ್ದು ಹೆಮ್ಮೆಯ ಸಂಗತಿ. ಗ್ರಾಮ ಪಂಚಾಯ್ತಿ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಕೆರೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು
- ಮೈಲಾರಪ್ಪ ಹಾದಿಮನಿ ಮಾಗಡಿ ಗ್ರಾ.ಪಂ ಅಧ್ಯಕ್ಷ
130ಕ್ಕೂ ಹೆಚ್ಚು ಜಾತಿಯ ವಿದೇಶಿ ಹಕ್ಕಿಗಳ ವಲಸೆ
ಮಾಗಡಿ ಕೆರೆಗೆ 130ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಇಲ್ಲಿಗೆ ವಲಸೆ ಬರುವುದಾಗಿ ಗುರುತಿಸಲಾಗಿದೆ. ಅವುಗಳಲ್ಲಿ 16 ಪ್ರಬೇಧದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಆ ಪೈಕಿ ಗೀರು ತಲೆಯ ಬಾತುಕೋಳಿ (ಬಾರ್ ಹೆಡೆಡ್ ಗೂಸ್) ಸಂಖ್ಯೆ ಅಧಿಕವಾಗಿವೆ. ನಂತರದ ಸ್ಥಾನದಲ್ಲಿ ಬ್ರಾಹ್ಮಿಣಿ ಡಕ್ ಬ್ಲಾಕ್ ಐಬಿಸ್ ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಜಾತಿಯ ಪಕ್ಷಿಗಳು ಕೆರೆಯನ್ನು ಆಶ್ರಯಿಸುತ್ತವೆ. ಕೇರಳದ ನಾರ್ದನ್ ಶೇಲ್ವರ್ ಲಿಟ್ಲ್ ಕಾರ್ಪೋರರ್ಲ್ ಅಟಲ್‌ರಿಂಗ್ ಪ್ಲೋವರ್ ಲೊಮನ್ ಡೆಲ್ ಪೈಪರ್ ಗ್ರಿವನ್ ಟೇಲ್ ಬ್ಲಾಕ್ ಡ್ರಾಂಗೋ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT