ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧೀಜಿ ನಿಸ್ವಾರ್ಥ ಸೇವೆ ಅವಿಸ್ಮರಣೀಯ: ಎಸ್.ವಿ.ಸಂಕನೂರ ಅಭಿಮತ

ಗಾಂಧಿ ಜಯಂತಿ ಆಚರಣೆ
Published : 2 ಅಕ್ಟೋಬರ್ 2024, 16:14 IST
Last Updated : 2 ಅಕ್ಟೋಬರ್ 2024, 16:14 IST
ಫಾಲೋ ಮಾಡಿ
Comments

ಗದಗ: ‘ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಗತ್ತು ಕಂಡ ಮಹಾನ್ ನಾಯಕರು. ಇವರು ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅಭಿಪ್ರಾಯಪಟ್ಟರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಗಾಂಧೀಜಿಯವರು ಸತ್ಯ, ಅಹಿಂಸೆ ಹಾಗೂ ಪ್ರೇಮ ಎಂಬ ಮೂರು ಅಸ್ತ್ರಗಳಿಂದ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ತಮ್ಮ ಇಡೀ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಮುಡಿಪಿಟ್ಟರು. ಯಾವುದೇ ಆಸೆ ಆಕಾಂಕ್ಷೆಗಳನ್ನು ಹೊಂದದೇ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು’ ಎಂದು ಬಣ್ಣಿಸಿದರು.

‘ಸಮಾಜದಲ್ಲಿನ ಅಸಮಾನತೆ ತೊಡೆದುಹಾಕುವುದು, ಸ್ತ್ರೀ ಸ್ವಾತಂತ್ರ್ಯ, ಸ್ವದೇಶಿ ವಸ್ತುಗಳ ಬಳಕೆ, ದಲಿತರ ಅಭಿವೃದ್ಧಿ, ಮದ್ಯಪಾನ ನಿಷೇಧ, ಗೋಹತ್ಯೆ ನಿಷೇಧ, ಅಸ್ಪೃಶ್ಯತೆ ನಿಷೇಧಕ್ಕಾಗಿ ಹೋರಾಡಿದರು. ಗಾಂಧೀಜಿ ಸ್ವಾತಂತ್ರ್ಯಾನಂತರ ರಾಮರಾಜ್ಯದ ಕನಸು ಕಂಡರು. ಪ್ರಾಮಾಣಿಕವಾಗಿ ಕೆಲಸ ಮಾಡುವುದು, ಅಸ್ಪೃಶ್ಯತೆ ಹೋಗಲಾಡಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಇವೆಲ್ಲವುಗಳು ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯಾಗಿದ್ದು ಅವರ ಸಂದೇಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡು ರಾಮರಾಜ್ಯ ಸ್ಥಾಪನೆಗೆ ಕೈಜೋಡಿಸಬೇಕು’ ಎಂದು ಹೇಳಿದರು.

‘ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಸರಳ ಜೀವಿ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸಮರ್ಪಿಸಿಕೊಂಡವರು. ಜೈ ಜವಾನ್ ಜೈ ಕಿಸಾನ್ ಸಂದೇಶದಿಂದ ದೇಶಕ್ಕೆ ಸೈನಿಕರು ಮತ್ತು ರೈತರ ಮಹತ್ವ ಬಹಳಷ್ಟಿದೆ ಎಂದು ತಿಳಿಸಿದರು’ ಎಂದು ಹೇಳಿದರು.

ಸಾಹಿತಿ ಐ.ಕೆ. ಕಮ್ಮಾರ ಉಪನ್ಯಾಸ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಭರತ್ ಎಸ್., ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ತಹಶೀಲ್ದಾರ್‌ ಶ್ರೀನಿವಾಸ ಕುಲಕರ್ಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಇದ್ದರು.

ವೆಂಕಟೇಶ ಅಲ್ಕೋಡ ಅವರು ಗಾಂಧೀಜಿ ಭಜನೆಗಳನ್ನು ಪ್ರಸ್ತುತಪಡಿಸಿದರು.

ಯುವಜನರು ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಅವರ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕು.
–ಎಸ್.ವಿ. ಸಂಕನೂರ ವಿಧಾನ ಪರಿಷತ್‌ ಸದಸ್ಯ
ಈಗಿನ ಯುವಕರು ಅರ್ಥಪೂರ್ಣ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ದೇಶದ ಋಣ ತೀರಿಸಲು ಸಾಧ್ಯ.
–ಐ.ಕೆ. ಕಮ್ಮಾರ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT