ಗದಗ: ‘ಮಹಾತ್ಮ ಗಾಂಧಿ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಗಾಂಧೀಜಿ ಪ್ರತಿಯೊಬ್ಬ ಭಾರತೀಯನ ಮನಸಿನಲ್ಲಿ ಸದಾ ಜಾಗೃತವಾಗಿರುವ ಒಂದು ಶಕ್ತಿ’ ಎಂದು ಕನಕದಾಸ ಶಿಕ್ಷಣ ಸಮಿತಿಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಿ.ಎಫ್. ದಂಡಿನ ಹೇಳಿದರು.
ನಗರದ ಕೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಐ.ಕ್ಯು.ಎ.ಸಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಕೆ.ವಿ.ಎಸ್.ಆರ್. ಮತ್ತು ಸಂಕೇತ ಪದವಿ ಪೂರ್ವ ಮಹಾವಿದ್ಯಾಲಯಗಳ, ಬಿ.ಎಸ್.ಡಬ್ಲ್ಯು ಕಾಲೇಜಿನ ಆಶ್ರಯದಲ್ಲಿ ನಡೆದ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸತ್ಯ, ಶಾಂತಿ, ಅಹಿಂಸಾ ಸಿದ್ಧಾಂತದಿಂದಲೇ ಜಗದ ಹೃದಯ ಗೆದ್ದ ಗಾಂಧೀಜಿ ಮಹಾನ್ ಚೇತನ’ ಎಂದು ಹೇಳಿದರು.
ಗದಗ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಕುಂತಲಾಬಾಯಿ ದಂಡಿನ, ‘ಮಹಾತ್ಮ ಗಾಂಧಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಸರಳ ವ್ಯಕ್ತಿತ್ವ, ಉನ್ನತ ವಿಚಾರಧಾರೆಗಳನ್ನು ಇಂದಿನ ಯುವಜನರು ಜೀವನದಲ್ಲಿ ಅಳವಡಿಸಿಕೊಂಡು ಸತ್ಯ ಮಾರ್ಗದಲ್ಲಿ ನಡೆಯಬೇಕು’ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಬಿ. ಗವಾನಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರಮದಾನ ನಡೆಯಿತು.
ಪ್ರಾಚಾರ್ಯ ಉಮೇಶ ಹಿರೇಮಠ, ಉಪ ಪ್ರಾಚಾರ್ಯ ಜಿ.ಸಿ. ಜಂಪಣ್ಣನವರ, ಐಕ್ಯುಎಸಿ ಸಂಯೋಜಕ ಎಸ್.ಎಸ್. ರಾಯ್ಕರ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಎಸ್.ಬಿ. ಪಲ್ಲೇದ, ಶಿವಾನಂದ ಕೊರವರ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಧಿಕಾರಿ ಎ.ಕೆ.ಪೂಜಾರ ಇದ್ದರು.