ಶುಕ್ರವಾರ, ಜನವರಿ 17, 2020
26 °C
ಎಳ್ಳು–ಬೆಲ್ಲದ ಸವಿಯೊಂದಿಗೆ ಹಬ್ಬ ಆಚರಣೆ; ಬುತ್ತಿ ಊಟದ ಸಡಗರ

ಸಂಕ್ರಾಂತಿ: ಮೃಗಾಲಯಕ್ಕೆ ಜನ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ನಾಲ್ಕು ತಿಂಗಳ ಹಿಂದೆ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ಜನರು, ಬುಧವಾರ ಆ ನೋವನ್ನು ಮರೆತು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ‘ಬುತ್ತಿ ಊಟ’ ಕಟ್ಟಿಕೊಂಡು ಬಿಂಕದಕಟ್ಟಿ ಮೃಗಾಲಯಕ್ಕೆ ಬಂದಿದ್ದ ಸಾವಿರಾರು ಜನರು, ಮೃಗಾಲಯದ ಆವರಣದಲ್ಲಿ ಮರದ ನೆರಳಿನಲ್ಲಿ ಕುಳಿತು ಒಟ್ಟಾಗಿ ಹಬ್ಬದೂಟ ಸವಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಎತ್ತುಗಳ ಮೈ ತೊಳೆದು ಪೂಜೆ ಸಲ್ಲಿಸಿದರು. ಜಿಲ್ಲೆಯ ವಿವಿಧೆಡೆ ಹಿಂಗಾರು ಹಂಗಾಮಿನ ಕಡಲೆ ಮತ್ತು ಬಿಳಿಜೋಳ ಕಟಾವಿಗೆ ಬಂದಿದ್ದು, ಹಸಿರು ನಳನಳಿಸುತ್ತಿದೆ. ಈ ಬಾರಿ ಈರುಳ್ಳಿ ಮತ್ತು ಮೆಣಸಿನಕಾಯಿಗೆ ಉತ್ತಮ ಧಾರಣೆ ಬಂದಿರುವುದರಿಂದ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕೃಷಿ ಉಪಕರಣಗಳಾದ ಕುಂಟೆ, ನೇಗಿಲು, ನೊಗ ಸ್ವಚ್ಛಗೊಳಿಸಿದ ರೈತರು ಪೂಜೆ ಮಾಡಿದರು. ಬಳಿಕ ಎತ್ತುಗಳನ್ನು ಸಿಂಗರಿಸಿ, ಎತ್ತಿನ ಬಂಡಿಯಲ್ಲಿ ಹೊಲಕ್ಕೆ ಹೋಗಿ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಎಳ್ಳು ಹಚ್ಚಿದ ರೊಟ್ಟಿ, ಕೆಂಪು ಚಟ್ನಿ, ಕರಿಂಡಿ, ಮಾದ್ಲಿ, ಶೇಂಗಾ ಹೋಳಿಗೆ ಜತೆಗೆ ಊಟ ಸವಿದರು.

ನಗರದ ವಿವಿಧ ದೇವಾಲಯಗಳಲ್ಲಿ ಸಂಕ್ರಾಂತಿ ನಿಮಿತ್ತ ವಿಶೇಷ ಪೂಜೆಗಳು ನಡೆದವು. ಗದುಗಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸಂಕ್ರಾಂತಿ ಹಿನ್ನೆಲೆಯಲ್ಲಿ ದೇವರಿಗೆ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಎಳ್ಳು, ಬೆಲ್ಲ, ಕೊಬ್ಬರಿ ವಿನಿಮಯ ಮಾಡಿ ಒಳ್ಳೆ ಮಾತನಾಡುವ ಆಶಯ ವ್ಯಕ್ತಪಡಿಸಿದ ಜನರು, ವರ್ಷಪೂರ್ತಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪರಸ್ಪರ ಹಾರೈಸಿಕೊಂಡರು.

ನಗರ ಪ್ರದೇಶದ ಸಾಕಷ್ಟು ಜನರು ಹಳ್ಳಿಗಳತ್ತ ಮುಖ ಮಾಡಿದ್ದರು. ದಾರಿಯಲ್ಲಿ ಸಿಗುವ ಜಮೀನಿನ ಮರದ ನೆರಳಿನಡಿ ಸಂಕ್ರಾಂತಿ ಊಟ ಸವಿದರು. ನರಸಾಪುರ ದಂಡಿನ ದರ್ಗಮ್ಮ ದೇವಸ್ಥಾನ, ಲಕ್ಕುಂಡಿ, ಸಿಂಗಟಾಲೂರು ಕ್ಷೇತ್ರ, ಮುಂಡರಗಿ ತುಂಗಭದ್ರಾ ನದಿ, ಮದಲಗಟ್ಟಿ ಹನುಮಪ್ಪ ದೇವಸ್ಥಾನ, ಬಾದಾಮಿ ಬನಶಂಕರಿ, ಶಿವಯೋಗಿ ಮಂದಿರ, ಮಹಾಕೂಟ, ಕೊಪ್ಪಳದ ಕಿಷ್ಕಿಂದೆ ರೆಸಾರ್ಟ್‌ ಮುಂತಾದ ಸ್ಥಳಗಳಿಗೆ ತೆರಳಿ ರಜೆಯ ಖುಷಿ ಅನುಭವಿಸಿದರು. ಕೆಲವರು ಹಂಪಿ, ಹೊಸಪೇಟೆ ಪ್ರವಾಸಿ ತಾಣಗಳತ್ತ ಪ್ರಯಾಣ ಬೆಳಸಿದ್ದರು.

ಗದುಗಿನ ಭೀಷ್ಮಕೆರೆ ಅಂಗಳದಲ್ಲಿರುವ ಬಸವೇಶ್ವರ ಉದ್ಯಾನ ಮತ್ತು ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೂ ಜನರು ತಂಡೋಪತಂಡವಾಗಿ ಬಂದು ಮನೆಯಿಂದ ತಂದಿದ್ದ ಬುತ್ತಿ ಊಟವನ್ನು ಸವಿದರು. ಮಧ್ಯಾಹ್ನವಾಗುತ್ತಿದ್ದಂತೆ ಮರದ ನೆರಳಿನಲ್ಲಿ ಚಾಪೆ, ಬಟ್ಟೆಗಳನ್ನು ಹಾಸಿ ಕುಳಿತರು. ಗೆಳೆಯರು, ನೆರೆ ಮನೆಯವರು, ನೆಂಟರಿಷ್ಟರು ಎಲ್ಲರೂ ಒಂದಾಗಿದ್ದರು. ಜತೆಯಾಗಿ ಭೋಜನ ಸವಿದರು. ಬಿಂಕದಕಟ್ಟಿ ಮೃಗಾಲಯಕ್ಕೆ ಒಂದು ಸುತ್ತು ಹಾಕಿ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಂಡರು. ಮಕ್ಕಳು ಉದ್ಯಾನದಲ್ಲಿನ ಜೋಕಾಲಿ ಜೀಕಿ ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು