ಕೊಣ್ಣೂರಿನ ಹೊಳೆ ಮಣ್ಣಿನಲ್ಲಿ ಅರಳಿದ ಗಣಪ..!

7
1ಕೆ.ಜಿ ಮಣ್ಣಿಗೆ ₹8; ಮಣ್ಣಿನ ಮೂರ್ತಿ ತಯಾರಕರಿಗೆ ‘ಪಿಒಪಿ’ಯೇ ಸವಾಲು

ಕೊಣ್ಣೂರಿನ ಹೊಳೆ ಮಣ್ಣಿನಲ್ಲಿ ಅರಳಿದ ಗಣಪ..!

Published:
Updated:
Deccan Herald

ಗಜೇಂದ್ರಗಡ: ವಿಘ್ನನಿವಾರಕ ಗಣೇಶನ ಹಬ್ಬ ಸಮೀಪಿಸುತ್ತಿದೆ. ಸೆ.13ಕ್ಕೆ ಮನೆ–ಮನಗಳಲ್ಲಿ ಹಬ್ಬದ ಸಂಭ್ರಮ ಮೂಡಲಿದೆ. ಈಗಾಗಲೇ ಯುವಕ ಸಂಘಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆಸಿವೆ. ಪಟ್ಟಣದಲ್ಲಿ ಮಣ್ಣಿನ ಮೂರ್ತಿ ತಯಾರಕರಿಗೆ ಬಿಡುವಿಲ್ಲದ ಕೆಲಸ.

ಭಾವೈಕ್ಯತೆಯ ನೆಲೆಯಾಗಿರುವ ಗಜೇಂದ್ರಗಡದಲ್ಲಿ, ಎಲ್ಲ ಸಮುದಾಯದವರು ಸೇರಿ ಗಣೇಶೋತ್ಸವ ಆಚರಿಸುವುದು ವಿಶೇಷ.ಇಲ್ಲಿನ ಚಿತ್ರಗಾರ, ಗಾಯಕವಾಡ, ಬಡಿಗೇರ ಮನೆತನದವರು ಮಣ್ಣನಿಂದ ಅಂಗೈ ಅಗಲದ ಗಣೇಶನಿಂದ ಹಿಡಿದು, ಬೃಹತ್‌ ಗಾತ್ರದ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ರಾಸಾಯನಿಕ ಬಣ್ಣದ ಬದಲು ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದಾರೆ. ಸ್ಥಳೀಯವಾಗಿ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣು ಸಿಗದ ಹಿನ್ನೆಲೆಯಲ್ಲಿ ಕೆರೆದಂಡೆ, ಸಮೀಪದ ಕೊಣ್ಣೂರಿನಿಂದ ₨8ಕ್ಕೆ ಒಂದು ಕೆ.ಜಿ ಯಂತೆ ಮಣ್ಣು ತಂದು ಮೂರ್ತಿ ಮಾಡುತ್ತಿದ್ದಾರೆ.

‘ಸಮೀಪದ ಯಲಬುರ್ಗಾ ಕೆರೆಯಿಂದ ಮಣ್ಣು ತಂದು ಮೂರ್ತಿ ತಯಾರಿಸಿ ನೋಡಿದೆವು. ಆದರೆ, ಆ ಮೂರ್ತಿಗಳು ನೀರು ಬಿದ್ದರೆ ಅರಳುತ್ತಿದ್ದವು. ಹೀಗಾಗಿ ದೂರದ ಕೊಣ್ಣೂರಿನಿಂದ ಸಾಣಿಸಿ ಗಿರಣಿ ಹಾಕಿದ ಹೊಳೆ ಮಣ್ಣನ್ನು ಒಂದು ಕೆ.ಜಿಗೆ ₨8 ಕೊಟ್ಟು ತಂದು ಮೂರ್ತಿಗಳನ್ನು ಮಾಡುತ್ತಿದ್ದೇವೆ’ ಎಂದು ಮೂರ್ತಿ ತಯಾರಕ ಸುರೇಶ ಚಿತ್ರಗಾರ ಹೇಳಿದರು.

‘ಕಳೆದ ವರ್ಷ ಜಿಲ್ಲಾಡಳಿತ ಪಿಓಪಿ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಲಿಲ್ಲ. ತಯಾರಿಸಿದ ಮೂರ್ತಿಗಳನ್ನು ವಶಕ್ಕೆ ತೆಗೆದುಕೊಂಡಿತು.ಈ ಬಾರಿ ಸಂಪೂರ್ಣ ಮಣ್ಣಿನ ಮೂರ್ತಿಗಳನ್ನು ಮಾಡಿದ್ದೇವೆ. ಆದರೆ, ಸಮೀಪದ ಕೊಪ್ಪಳ ಜಿಲ್ಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ಮಾರಾಟ ಇದೆ. ಕೆಲವರು ಅಲ್ಲಿಂದ ಖರೀದಿಸುತ್ತಾರೆ. ಮಣ್ಣಿನ ಮೂರ್ತಿಗಳು ದುಬಾರಿ ಹಾಗೂ ಭಾರ ಇರುತ್ತವೆ ಎಂದು ಗ್ರಾಹಕರು ಅಲ್ಲಿಂದ ಮೂರ್ತಿಗಳನ್ನು ತರುತ್ತಿದ್ದಾರೆ. ಇದರಿಂದ ಮಣ್ಣಿನ ಮೂರ್ತಿ ತಯಾರಿಸಿದ ನಮಗೆ ವ್ಯಾಪಾರ ಕಡಿಮೆಯಾಗಿದ್ದು, ಆರ್ಥಿಕ ನಷ್ಟ ಅನುಭವಿಸುವಂತಾಗಿದೆ’ ಎಂದು ಪಟ್ಟಣದ ಮೂರ್ತಿ ತಯಾರಕ ಸುಜಯ್ ಚಿತ್ರಗಾರ ಹೇಳಿದರು.

‘ಮಳೆ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಚೆನ್ನಾಗಿ ಬೆಳೆ ಬಂದಿಲ್ಲ. ಹೀಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೂರ್ತಿಗಳನ್ನು ಮುಂಗಡ ಹಣ ನೀಡಿ ಕಾಯ್ದಿರಿಸುವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಮೂರ್ತಿ ತಯಾರಕ ಯಮನೂರಪ್ಪ ಗಾಯಕವಾಡ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !