ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ: ಶಾಲೆಗಳ ಅಂದ ಹೆಚ್ಚಿಸಲು ‘ನಿಸ್ವಾರ್ಥ ಸೇವಾ ತಂಡ’ದ ವಿಭಿನ್ನ ಪ್ರಯತ್ನ

Published 7 ಜುಲೈ 2024, 6:21 IST
Last Updated 7 ಜುಲೈ 2024, 6:21 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಮನಸ್ಕ ಶಿಕ್ಷಕರು ಒಂದಾಗಿ ‘ನಿಸ್ವಾರ್ಥ ಸೇವಾ ತಂಡ’ವನ್ನು ರಚಿಸಿಕೊಂಡಿದ್ದು, ಅದರ ಅಡಿಯಲ್ಲಿ ಪ್ರತಿ ತಿಂಗಳು ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಉಚಿತವಾಗಿ ಬಣ್ಣ ಹಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವನಾಥ ಉಳ್ಳಾಗಡ್ಡಿ, ಎಸ್.ವಿ.ಅರಿಷಣದ, ನಾಗರಾಜ ಹಳ್ಳಿ, ಎಸ್.ಜೆ.ಪವಾರ, ಮಹೇಶ ಪಾಟೀಲ, ಶರಣಪ್ಪ ಕಲಾಲ, ಈರಣ್ಣ ಸೊರಟೂರ, ಮಹಾಂತೇಶ ಬಡಪ್ಪನವರ, ಸಂಗಮೇಶ ನಿಡಗುಂದಿ, ಎಲ್.ರಮೇಶ, ಎಚ್.ಮಹೇಶ, ಜೆ.ಎನ್.ಕಮ್ಮಾರ, ಎಂ.ಡಿ.ಕಮ್ಮಾರ ಮೊದಲಾದವರೆಲ್ಲ ಸೇರಿ 'ನಿಸ್ವಾರ್ಥ ಸೇವಾ ತಂಡ'ವನ್ನು ರಚಿಸಿಕೊಂಡಿದ್ದಾರೆ.

ತಂಡದ ಸದಸ್ಯರೆಲ್ಲ ಪ್ರತಿ ತಿಂಗಳ ಒಂದು ಭಾನುವಾರ ತಾಲ್ಲೂಕಿನ ಯಾವುದಾದರೂ ಅಂದಗೆಟ್ಟ ಶಾಲೆಯನ್ನು ಆಯ್ದುಕೊಳ್ಳುತ್ತಾರೆ. ತಾವು ಶಾಲೆಗೆ ಬಣ್ಣ ಬಳಿಯಲು ಬರುವ ನಿಗದಿತ ದಿನವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸುತ್ತಾರೆ. ಅಂದು ಮುಂಜಾನೆ ತಂಡದ ಎಲ್ಲ ಸದಸ್ಯರು ಆಯ್ದ ಶಾಲೆಗೆ ತೆರಳಿ ಉಚಿತವಾಗಿ ಬಣ್ಣ ಬಳಿದುಕೊಡುತ್ತಾರೆ.

ಶಾಲೆಗೆ ಬೇಕಾಗಿರುವ ಬಣ್ಣವನ್ನು ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಅಥವಾ ಶಾಲಾ ಮುಖ್ಯಶಿಕ್ಷಕ ಖರೀದಿಸಿಕೊಡುತ್ತಾರೆ. ತಂಡದ ಸದಸ್ಯರು ಇಡೀ ದಿನ ಶಾಲೆಯ ಎಲ್ಲ ಕೊಠಡಿಗಳಿಗೆ ಬಣ್ಣ ಬಳಿಯುತ್ತಾರೆ. ಬಣ್ಣ ಬಳಿಯಲು ಅಗತ್ಯವಿರುವ ಬ್ರಷ್, ಬಕೀಟು, ಕೈಗವಸು ಮೊದಲಾದವುಗಳನ್ನು ತಂಡದ ಸದಸ್ಯರೇ ತರುತ್ತಾರೆ.

ಸಾಮಾನ್ಯವಾಗಿ ಆರೇಳು ಕೊಠಡಿಗಳನ್ನು ಹೊಂದಿರುವ ಒಂದು ಶಾಲಾ ಕಟ್ಟಡಕ್ಕೆ ಕೇವಲ ಬಣ್ಣ ಬಳಿಯಲು ವೃತ್ತಿಪರ ಕಾರ್ಮಿಕರು (ಪೆಂಟರ್) ಸುಮಾರು ₹18ಸಾವಿರದಿಂದ ₹20ಸಾವಿರ ಕೂಲಿ ಪಡೆದುಕೊಳ್ಳುತ್ತಾರೆ. ನಿಸ್ವಾರ್ಥ ಸೇವಾ ತಂಡದ ಸದಸ್ಯರು ಉಚಿತವಾಗಿ ಬಣ್ಣ ಹಚ್ಚಿಕೊಡುವುದರಿಂದ ಶಾಲೆಗೆ ಅಷ್ಟು ಹಣ ಉಳಿತಾಯವಾಗುತ್ತದೆ.

ತಂಡದ ಸದಸ್ಯರು ಈಗಾಗಲೇ ತಾಲ್ಲೂಕಿನ ಹಲವು ಶಾಲೆಗಳಿಗೆ ಉಚಿತವಾಗಿ ಬಣ್ಣ ಬಳಿದುಕೊಟ್ಟಿದ್ದು, ಇನ್ನು ಹಲವು ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ತಮ್ಮ ಶಾಲೆಗೂ ಉಚಿತವಾಗಿ ಬಣ್ಣ ಬಳಿದುಕೊಡುವಂತೆ ತಂಡದ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಬಿಇಒ ಎಚ್.ಎಂ.ಫಡ್ನೇಸಿ, ಕ್ಷೇತ್ರ‌ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ ಇವರ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಸೇವಾ ತಂಡದ ಕಾರ್ಯಕರ್ತರು ಅಗತ್ಯವಿರುವ ಶಾಲೆಗಳಿಗೆ ತೆರಳಿ ಉಚಿತವಾಗಿ ಬಣ್ಣ ಬಳಿಯುವ ಸೇವೆ ಮಾಡುತ್ತಿದ್ದೇವೆ. ಮುಂದೆ ಅಗತ್ಯವೆನಿಸಿದರೆ ಆಯಾ ಶಾಲೆಗಳ ಗ್ರಾಮದ ದಾನಿಗಳನ್ನು ಸಂಪರ್ಕಿಸಿ ಅವರಿಂದ ಬಣ್ಣ ಖರೀಧಿಸಿ ಸಂಪೂರ್ಣವಾಗಿ ಉಚಿತ ಬಣ್ಣ ಹಚ್ಚುವ ಕಾರ್ಯ ಕೈಕೊಳ್ಳಲಾಗುವುದು’ ಎಂದು ತಂಡದ ಸದಸ್ಯ ವಿಶ್ವನಾಥ ಉಳ್ಳಾಗಡ್ಡಿ ತಿಳಿಸಿದರು.

ತಾಲ್ಲೂಕಿನ ಕೆಲವು ಶಿಕ್ಷಕರು ಒಂದಾಗಿ ಸೇವಾ ತಂಡವನ್ನು ಕಟ್ಟಿಕೊಂಗೊಂಡಿರುವುದು ಶ್ಲಾಘನೀಯ. ಶಿಕ್ಷಕರ ಇಂತಹ ಸೇವಾ ಮನೋಭಾವ ಇತರರಿಗೂ ಪ್ರೇರಣೆಯಾಗುತ್ತದೆ ಮತ್ತು ಇದರಿಂದ ಸರ್ಕಾರದ ಹೊರೆ ಕಡಿಮೆಯಾಗುತ್ತಿದೆ
–ಎಚ್.ಎಂ.ಫಡ್ನೇಶಿ ಬಿಇಒ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT