ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ವಂಚಿತ ಮಕ್ಕಳಿಗಾಗಿ ‘ಇಂದ್ರಧನುಷ್‌’

ಇಂದ್ರಧನುಷ್‍ ಲಸಿಕಾ ಅಭಿಯಾನಕ್ಕೆ ಸಚಿವ ಎಚ್.ಕೆ.ಪಾಟೀಲ ಚಾಲನೆ
Published 7 ಆಗಸ್ಟ್ 2023, 15:35 IST
Last Updated 7 ಆಗಸ್ಟ್ 2023, 15:35 IST
ಅಕ್ಷರ ಗಾತ್ರ

ಗದಗ: ‘0-5 ವಯೋಮಾನದ ಮಕ್ಕಳಿಗೆ ನಿಗದಿಪಡಿಸಿದ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಒಂದು ವೇಳೆ ಲಸಿಕೆ ಹಾಕಿಸದಿದ್ದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಿದ್ದು, ಈ ಸಮಯದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳನ್ನು ರೋಗಗಳಿಂದ ಮುಕ್ತರಾಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ದುಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಇಂದ್ರಧನುಷ್‍ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದ್ರಧನುಷ್ ಲಸಿಕಾ ಅಭಿಯಾನದಡಿ ಪೊಲಿಯೋ, ಡಿಪ್ತೀರಿಯಾ, ನಾಯಿಕೆಮ್ಮು, ಧನುರ್ವಾಯು, ಕ್ಷಯರೋಗ, ದಡಾರ, ಮೇನಿಂಜೈಟಿಸ್, ಹೆಪಟೈಟಿಸ್ ಬಿ, ರುಬೇಲಾ ಲಸಿಕೆಗಳನ್ನು ಹಾಕಲಾಗುತ್ತಿದೆ. 0-5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು. ಇದರಿಂದ ವಿವಿಧ ರೋಗಗಳಿಂದ ಮಕ್ಕಳನ್ನು ರಕ್ಷಿಸುವುದು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ಪೊಲಿಯೋದಂತಹ ಮಹಾಮಾರಿ ದೇಶದಲ್ಲಿ ಅನೇಕ ದುಷ್ಪರಿಣಾಮಗಳನ್ನು ಮಾಡಿದ್ದು, ಅದಕ್ಕೆ ಲಸಿಕೆ ಕಂಡುಹಿಡಿದು ನಿರಂತರವಾಗಿ ಲಸಿಕಾ ಅಭಿಯಾನ ನಡೆಸುವ ಮೂಲಕ ಇಂದು ದೇಶದಲ್ಲಿ ಪೊಲಿಯೋ ನಿರ್ಮೂಲನೆ ಮಾಡಲಾಗಿದೆ. ಇದನ್ನು ಅರಿತು ಮಕ್ಕಳಿಗೆ ಸಮಯಕ್ಕೆ ಅನುಗುಣವಾಗಿ ಲಸಿಕೆಗಳನ್ನು ತಪ್ಪದೇ ಕೊಡಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ‘ದೇಶದಲ್ಲಿ 2014ರಿಂದ ಮಿಷನ್ ಇಂದ್ರಧನುಷ್‌ ಕಾರ್ಯಕ್ರಮ ಆರಂಭವಾಗಿದೆ. ಲಸಿಕಾ ವಂಚಿತ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಯನ್ನು ಆರೋಗ್ಯ ಸಿಬ್ಬಂದಿ, ವೈದ್ಯಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳು, ಸಂಘ ಸಂಸ್ಥೆಗಳು ಮತ್ತು ಆಶಾ ಕಾರ್ಯಕರ್ತೆಯರ ಸಹಯೋಗದಲ್ಲಿ ಹಾಕಿಸುವ ಮೂಲಕ ನಿಗದಿತ ಗುರಿ ತಲುಪಬೇಕು’ ಎಂದು ಸೂಚಿಸಿದರು.

‘ಲಸಿಕೆ ಹಾಕಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದರ ಜತೆಗೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಜಗದೀಶ ನುಚ್ಚಿನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಸಿ.ಕರಿಗೌಡರ, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ ಗೊಜನೂರ, ಡಿಎಂಒ ಡಾ.ಎಸ್.ಎಸ್.ನೀಲಗುಂದ, ಡಾ.ಜಿ.ಎಸ್.ಪಲ್ಲೇದ, ಡಾ. ಪ್ರೀತ್‌ ಖೋನಾ, ಡಾ. ಸೋಮಶೇಖರ ಬಿಜ್ಜಳ, ಡಾ.ವೆಂಕಟೇಶ ರಾಠೋಡ ಇದ್ದರು.

ರೋಗ ನಿರೋಧಕ ಹೆಚ್ಚಳಕ್ಕೆ ಲಸಿಕೆ ಅವಶ್ಯ

ಲಕ್ಷ್ಮೇಶ್ವರ: ಮಕ್ಕಳು ಮತ್ತು ಗರ್ಭೀಣಿಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಇಂದ್ರ ಧನುಷ್‌ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಸೋಮವಾರ ಇಲ್ಲಿನ ಬಸ್ತಿಬಣದ ಬನಶಂಕರಿ ದೇವಸ್ಥಾನದಲ್ಲಿ ಕೆಸಿಸಿ ಬ್ಯಾಂಕಿನ ನಿರ್ದೇಶಕ ಸುನಿಲ್ ಮಹಾಂತಶೆಟ್ಟರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ‘ಕೊರೊನಾ ನಂತರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿರುವುದು ಆತಂಕಕಾರಿ ವಿಷಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ತಂದಿರುವುದು ಖುಷಿ ಸಂಗತಿ. ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಬೇಕು’ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ ಮಾನತಾಡಿ, ‘2018ರಿಂದಲೇ ಈ ಲಸಿಕೆ ನೀಡಲಾಗುತ್ತಿದೆ. ಇಂದ್ರ ಧನುಷ್ಯ ಲಸಿಕೆ ಹಾಕಿಸುವುದರಿಂದ ಏಳು ರೋಗಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಈ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಪಾಲಕರು ಆಸ್ತತ್ರೆಗೆ ಬಂದು ಪಡೆದುಕೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಸಿಡಿಪಿಒ ಮೃತ್ಯುಂಜಯಪ್ಪ ಗುಡ್ಡದನ್ವೇರಿ, ತಾಲ್ಲೂಕಾ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್. ಹಿರೇಮಠ ಮಾತನಾಡಿದರು. ಪುರಸಭೆ ಸದಸ್ಯ ಮಹಾದೇವಪ್ಪ ಅಣ್ಣಿಗೇರಿ, ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ, ರೂಪಾ ಕಟ್ಟಿಮನಿ ಇದ್ದರು.

Cut-off box - ಮೂರು ಹಂತಗಳಲ್ಲಿ ಲಸಿಕಾ ಅಭಿಯಾನ ಶಿರಹಟ್ಟಿ: ಮಕ್ಕಳ ಉತ್ತಮ ಬೆಳವಣಿಗೆಗೆ ಲಸಿಕೆಗಳು ಉಪಯುಕ್ತವಾಗಿದ್ದು ತಾಯಂದಿರು ಕಾಲಕಾಲಕ್ಕೆ ತಕ್ಕಂತೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ಅನಿಲ ಬಡಿಗೇರ ಹೇಳಿದರು. ಸ್ಥಳೀಯ ಕೆಳಗೇರಿ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಹಾಗೂ ತಾಲ್ಲೂಕು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಇಂದ್ರಧನುಷ್ ಲಸಿಕಾ ಅಭಿಯಾನ 5.0ಗೆ ಚಾಲನೆ ನೀಡಿ ಮಾತನಾಡಿದರು. 2018ರಲ್ಲಿ ಪ್ರಾರಂಭವಾದ ಇಂದ್ರ ಧನುಷ್ ಲಸಿಕಾ ಅಭಿಯಾನ 2023ರ ಅಂತ್ಯದೊಳಗೆ ದೇಶಾದ್ಯಂತ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳಿಂದ ವಂಚಿತರಾದ ಗರ್ಭಿಣಿಯರು ಮತ್ತು 0 ಯಿಂದ 5 ವರ್ಷದ ಮಕ್ಕಳಿಗೆ ಇಂದ್ರಧನುಷ್ ಅಭಿಯಾನದ ಮೂಲಕ ಲಸಿಕೆ ನೀಡಲಾಗುತ್ತಿದ್ದು ತಾಯಂದಿರು ಮತ್ತು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಸುಭಾಷ್ ದಾಯಗೊಂಡ ಮಾತನಾಡಿ ಲಸಿಕೆ ಪಡೆಯದ ಹಾಗೂ ಕಾರಣಾಂತರಗಳಿಂದ ಲಸಿಕೆ ಬಿಟ್ಟುಹೋದ ಮಕ್ಕಳನ್ನು ಹಾಗೂ ಟಿಡಿ ಲಸಿಕೆ ಪಡೆಯದ ಗರ್ಭಿಣಿಯರನ್ನು ಸಮೀಕ್ಷೆ ಮೂಲಕ ಗುರುತಿಸಿ ಅವರಿಗೆ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ಮೂಲಕ ತಾಲ್ಲೂಕಿನಲ್ಲಿ ಒಟ್ಟು ಮೂರು ಸುತ್ತಿನ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ (7ರಿಂದ 12ರವರೆಗೆ) ಸೆಪ್ಟೆಂಬರ್ (11 ರಿಂದ 16ರವರೆಗೆ) ಮತ್ತು ಅಕ್ಟೋಬರ್ (9 ರಿಂದ 14 ರವರೆಗೆ) ಒಟ್ಟು ಮೂರು ತಿಂಗಳುಗಳಲ್ಲಿ ಅಭಿಯಾನ ನಡೆಯಲಿದ್ದು ಪ್ರತಿ ತಿಂಗಳಲ್ಲಿ 6 ದಿನ ಲಸಿಕಾ ಪ್ರಕ್ರಿಯೆ ನಡೆಯಲಿದೆ. ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ 7 ಮಾರಕ ರೋಗಗಳ ವಿರುದ್ಧ ಪ್ರಸ್ತುತ ಲಸಿಕೆ ಪ್ರಾರಂಭಿಸಲಾಗಿದೆ. ತಾಲ್ಲೂಕಿನಲ್ಲಿ 280 ಮಕ್ಕಳು ಹಾಗೂ 52 ತಾಯಂದಿರು ಲಸಿಕೆ ಪಡೆಯಲಿದ್ದಾರೆ. ಮಕ್ಕಳ ಹಾಗೂ ತಾಯಂದಿರ ಆರೋಗ್ಯ ದೃಷ್ಟಿಯಿಂದ ಕೈಗೊಳ್ಳಲಾದ ಪ್ರಸ್ತುತ ಯೋಜನೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಆರೋಗ್ಯ ಇಲಾಖೆ ಜೊತೆಗೆ ಕೈಜೋಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಂ.ಜಿ.ಚೆನ್ನಮ್ಮನವರ ಜಗದೀಶ ಕೊಂಡಿಹಳ್ಳಿ ಬಿ.ಎಸ್.ಹಿರೇಮಠ ವಿ.ಪಿ.ಪಾಟೀಲ ಸೇರಿದಂತೆ ಸಾರ್ವಜನಿರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT