ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಹೆಚ್ಚಿದ ಮಂಗನ ಬಾವು ಬಾಧೆ: ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ರೋಗ

Published 19 ಜನವರಿ 2024, 6:25 IST
Last Updated 19 ಜನವರಿ 2024, 6:25 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಒಂದು ತಿಂಗಳಿಂದ ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ರೋಗ ಉಲ್ಬಣವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

5ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಈ ವೈರಾಣು ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನಿತ್ಯ ಹಲವಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ.

ಪಟ್ಟಣದ 50ಕ್ಕೂ ಹೆಚ್ಚು ಜನರು ಸೇರಿದಂತೆ, ಕೊಡಗಾನೂರಿನ 25, ವೀರಾಪುರದ 10, ಕುಂಟೋಜಿಯ 10, ಮ್ಯಾಕಲಝರಿಯ 10, ಜಿಗೇರಿಯ 15 ಮಂದಿ ರೋಗಪೀಡಿತರು ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚಿದೆ.

‘ಸಾಮಾನ್ಯವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತವೆ. ಒಂದು ವಾರ ಬಾಧಿಸಲಿದ್ದು, ಪ್ರತ್ಯೇಕ ವಾಸ, ವಿಶ್ರಾಂತಿ ಜೊತೆಗೆ ವೈದ್ಯರಿಂದ ಅಗತ್ಯ ಚಿಕಿತ್ಸೆ ಪಡೆದರೆ ಗುಣಮುಖವಾಗುವುದರ ಜೊತೆಗೆ ರೋಗ ಹರಡುವುದನ್ನು ತಡೆಯಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್.ಎಸ್. ನೀಲಗುಂದ ಹೇಳಿದರು.

‘ಮಂಗನ ಬಾವು ಒಬ್ಬರಿಂದ ಮತ್ತೊಬ್ಬರಿಗೆ ಬಹು ಬೇಗ ಹರಡುತ್ತದೆ. ಈ ಕಾಯಿಲೆ ಬಂದವರಲ್ಲಿ ಜ್ವರ, ಕುತ್ತಿಗೆ ಎರಡು ಕಡೆಗಳಲ್ಲಿ ಊದಿಕೊಳ್ಳುತ್ತವೆ. ಕೆಲವರಿಗೆ ಎಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರೋಗಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅನಿಲಕುಮಾರ ತೋಟದ ಮಾಹಿತಿ ನೀಡಿದರು.

ಬಾಲಕನೊಬ್ಬನಿಗೆ ಮಂಗನ ಬಾವು ಕಾಯಿಲೆಗೆ ಬಂದಿರುವುದು
ಬಾಲಕನೊಬ್ಬನಿಗೆ ಮಂಗನ ಬಾವು ಕಾಯಿಲೆಗೆ ಬಂದಿರುವುದು
‘ಭಯಪಡುವ ಅಗತ್ಯವಿಲ್ಲ’
‘ಮಂಗನ ಬಾವು ಮಮ್ಸ್‌ ಎಂಬ ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಭಯಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ತಂಡದಿಂದ ಸಮೀಕ್ಷೆ ನಡೆಸಿ ಮಾಹಿತಿ ಪಡೆಯುತ್ತೇನೆ. ರೋಣ ಭಾಗದ ಬೆಳವಣಿಕಿ ಭಾಗದಲ್ಲಿ ಮಮ್ಸ್‌ ವೈರಸ್‌ ಕಂಡುಬಂದಿತ್ತು. ಗಜೇಂದ್ರಗಡ ಭಾಗದಲ್ಲಿ ವೈರಸ್‌ ಪತ್ತೆಯಾದ ಕುರಿತು ಮಾಹಿತಿಯಿಲ್ಲ. ಅಲ್ಲಿಗೆ ನಮ್ಮ ತಂಡ ಕಳುಹಿಸಿ ಮಾಹಿತಿ ಸಂಗ್ರಹಿಸುತ್ತೇನೆ’ ಎಂದು ಗದಗ ಡಿ.ಎಚ್.ಒ ಎಸ್‌.ಎಸ್‌. ನೀಲಗುಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT