ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ: ಫೆ.26ರಂದು ಪಟ್ಟಾಧಿಕಾರ

ಬಸವತತ್ವಕ್ಕೆ ಮಾರುಹೋದ ರೋಣ ತಾಲ್ಲೂಕಿನ ದಿವಾನ್ ಶರೀಫ್‌
Last Updated 21 ಫೆಬ್ರುವರಿ 2020, 4:08 IST
ಅಕ್ಷರ ಗಾತ್ರ

ಗದಗ: ಬಸವ ತತ್ವಕ್ಕೆ ಮಾರುಹೋಗಿರುವ ಮುಸ್ಲಿಂ ಯುವಕನೊಬ್ಬ,ಲಿಂಗದೀಕ್ಷೆ ಪಡೆದು ಶಾಖಾ ಮಠವೊಂದರ ಪೀಠಾಧಿಪತಿಯಾಗುತ್ತಿರುವ ಅಪರೂಪದ ವಿದ್ಯಮಾನಕ್ಕೆ ರೋಣ ತಾಲ್ಲೂಕಿನ ಅಸೂಟಿ ಗ್ರಾಮ ಸಾಕ್ಷಿಯಾಗುತ್ತಿದೆ.

ಗ್ರಾಮದ ದಿವಾನ್ ರೆಹಮಾನ್‌ಸಾಬ್‌ ಶರೀಫ್‌(33) ಎಂಬುವರ ಪಟ್ಟಾಧಿಕಾರ ಮಹೋತ್ಸವ ಫೆ.26ರಂದು ಗ್ರಾಮದಲ್ಲಿ ನಿಗದಿಯಾಗಿದೆ. ಬಸವ ಭಕ್ತರಾಗಿರುವ ದಿವಾನ್ ಶರೀಫ್‌ ಅವರು, ಈಗಾಗಲೇ ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ಮಠದ ಮುರುಘೇಂದ್ರ ಕೋರಣೇಶ್ವರ ಶ್ರೀಗಳಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದಾರೆ.

ಪಟ್ಟಾಧಿಕಾರದ ಬಳಿಕ ದಿವಾನ್ ಶರೀಫ್‌ ಅವರು ಅಸೂಟಿ ಗ್ರಾಮದ ಖಜೂರಿ ಕೋರಣೇಶ್ವರ ಶಾಖಾ ಮಠದ ಪೀಠಾಧಿಪತಿಯಾಗಿ ಮುಂದುವರಿಯಲಿದ್ದಾರೆ.

‘ತಂದೆಯವರ ಕಾಲದಿಂದಲೇ ನಾವು ಖಜೂರಿ ಕೋರಣೇಶ್ವರ ಮಠದ ಭಕ್ತರು. ತಂದೆಯವರು ಮಠದ ಗಿರಣಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ನಿಧನರಾದರು. ಅವರ ನಿಧನದ ನಂತರ ಮಠದ ಜತೆಗಿನ ಒಡನಾಟವನ್ನು ಹಿರಿಯ ಮಗನಾದ ನಾನು ಮುಂದುವರಿಸಿದ್ದೇನೆ. ಬಸವತತ್ವದಿಂದ ಪ್ರಭಾವಿತನಾಗಿ ಸಮಾಜಸೇವೆ ಮಾಡುವ ಉದ್ದೇಶದಿಂದ ಇತ್ತೀಚೆಗೆ ಶ್ರೀಗಳಿಂದ ಲಿಂಗದೀಕ್ಷೆಯನ್ನೂ ಪಡೆದಿದ್ದೇನೆ’ ಎಂದು ದಿವಾನ್ ಶರೀಫ್‌ ಪ್ರತಿಕ್ರಿಯಿಸಿದರು.

‘ಮೂರನೆಯ ತರಗತಿವರೆಗೆ ಓದಿದ್ದೇನೆ. ಪತ್ನಿ ಹಾಗೂ ನಾಲ್ಕು ಮಕ್ಕಳಿದ್ದಾರೆ. ಜೀವನ ನಿರ್ವಹಣೆಗಾಗಿ ಗ್ರಾಮದಲ್ಲಿ ಆಟೊ ಓಡಿಸುತ್ತಿದ್ದೆ. ತಂದೆಯವರ ನಿಧನದ ನಂತರ ಈ ಕಾಯಕ ನಿಲ್ಲಿಸಿದ್ದೇನೆ. ಸಂಸಾರಿಯಾಗಿದ್ದುಕೊಂಡು ಸಮಾಜಸೇವೆ ಮಾಡಬೇಕು ಎಂಬ ತುಡಿತದಿಂದ, ಗುರುಗಳಿಂದ ಲಿಂಗದೀಕ್ಷೆ ಪಡೆದು, ಪೀಠಾಧಿಪತಿಯಾಗುತ್ತಿದ್ದೇನೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದು ದಿವಾನ್ ಶರೀಫ್‌ ಸ್ಪಷ್ಟಪಡಿಸಿದರು.

‘ಕುಟುಂಬ ಸದಸ್ಯರಿಂದ, ಸಮಾಜದಿಂದ ಸದ್ಯಕ್ಕೆ ವಿರೋಧ ವ್ಯಕ್ತವಾಗಿಲ್ಲ. ಕೋರಣೇಶ್ವರ ಶ್ರೀಗಳು ಧರ್ಮದ ಚೌಕಟ್ಟು ಬಿಟ್ಟು ನಡೆಯಬಾರದು ಎಂದು ಉಪದೇಶ ನೀಡಿದ್ದಾರೆ. ಅದನ್ನು ಪಾಲಿಸುತ್ತೇನೆ. ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ಸೇರಿದ್ದ 2 ಎಕರೆ ಜಮೀನನ್ನೂ ಮಠಕ್ಕೆ ದಾನವಾಗಿ ನೀಡಿದ್ದೇನೆ. ಅಲ್ಲಿ ಮಠದ ಕಟ್ಟಡ, ಧಾರ್ಮಿಕ ಕಾರ್ಯಚಟುವಟಿಕೆ ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ’ ಎಂದರು.

‘ನಮ್ಮದು ಬಸವ ತತ್ವ. ನಮ್ಮಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿದೆ. ಇದಕ್ಕೆ ಶರೀಫ್‍ ನಮ್ಮ ಅಸೂಟಿ ಮಠದ ಪೀಠಾಧಿಪತಿಯಾಗುತ್ತಿರುವುದೇ ಸಾಕ್ಷಿ. 12ನೇ ಶತಮಾನದಲ್ಲಿ ಬಸವೇಶ್ವರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಾ ಬಂದಿದ್ದೇವೆ’ ಎಂದು ಖಜೂರಿಮಠದ ಮುರುಘೇಂದ್ರ ಕೋರಣೇಶ್ವರ ಶ್ರೀಗಳು ಪ್ರತಿಕ್ರಿಯಿಸಿದರು.

ರವಿ ಚನ್ನಣ್ಣವರ ಸ್ಪೂರ್ತಿ: ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಅವರು ಪೊಲೀಸರಾಗಿದ್ದುಕೊಂಡೇ ಸಾಕಷ್ಟು ಸಮಾಜಸೇವೆ ಮಾಡುತ್ತಿದ್ದಾರೆ. ಅವರ ಮಾತುಗಳೇ ನನಗೆ ಸ್ಪೂರ್ತಿ. ಸಂಸಾರಿಯಾಗಿದ್ದುಕೊಂಡೇ, ಜನರ ಕಷ್ಟಗಳಿಗೆ ಸ್ಪಂದಿಸಬಹುದಲ್ಲಾ ಎಂಬ ಯೋಚನೆ ಬಂತು. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದಕ್ಕೆ ಸಮಾಜದ ಸಹಕಾರ ಬೇಕು ಎಂದು ದಿವಾನ್‌ ಶರೀಫ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT