ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ನಗರಸಭೆ ಚುನಾವಣೆಯಲ್ಲಿ ಶೇ 60.30 ಮತದಾನ

ಉತ್ಸಾಹದಿಂದ ಪಾಲ್ಗೊಂಡ ಮತದಾರರು, ಪಾಲನೆಯಾಗದ ಕೋವಿಡ್‌ ನಿಯಮಗಳು
Last Updated 28 ಡಿಸೆಂಬರ್ 2021, 4:34 IST
ಅಕ್ಷರ ಗಾತ್ರ

ಗದಗ: ಕೆಲವೊಂದು ಸಣ್ಣ ಪುಟ್ಟ ವಾಗ್ವಾದಗಳನ್ನು ಹೊರತುಪಡಿಸಿದರೆ ಸೋಮವಾರ ನಡೆದ ಗದಗ ಬೆಟಗೇರಿ ನಗರಸಭೆ ಚುನಾವಣೆ ಶಾಂತಿಯುತವಾಗಿ ಜರುಗಿತು. ಎಂಟು ವರ್ಷಗಳ ಬಳಿಕ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದಲೇ ಭಾಗವಹಿಸಿ ಮತ ಚಲಾಯಿಸಿದರು.

‘1,41,542 ಮತದಾರರ ಪೈಕಿ 44,975 (ಶೇ 64) ಪುರುಷರು, 43,207 (ಶೇ 60.26) ಮಂದಿ ಮಹಿಳಾ ಮತದಾರರು ಸೇರಿ ಒಟ್ಟು 88,182 ಮತದಾರರು ಮತ ಚಲಾಯಿಸಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಶೇ 62.30ರಷ್ಟು ಮತದಾನ ಆಗಿದೆ’ ಎಂದು ತಹಶೀಲ್ದಾರ್‌ ಕಿಶನ್‌ ಕಲಾಲ್‌ ತಿಳಿಸಿದ್ದಾರೆ.

ಚುಮುಚುಮು ಚಳಿಯಲ್ಲಿ ಬೆಳಿಗ್ಗೆ 7ಕ್ಕೆ ಆರಂಭಗೊಂಡ ಮತದಾನ ಪ್ರಕ್ರಿಯೆ ಮೊದಲ ಎರಡು ಗಂಟೆಗಳ ಕಾಲ ಆಮೆಗತಿಯಲ್ಲಿ ಸಾಗಿತು. ಬೆಳಿಗ್ಗೆ 7ರಿಂದ 9ರ ನಡುವೆ ಶೇ 5.61ರಷ್ಟು ಮತದಾನ ಆಗಿತ್ತು. ಬಳಿಕದ ಎರಡು ಗಂಟೆಗಳಲ್ಲಿ ಮತದಾನ ಪ್ರಕ್ರಿಯೆ ಸ್ವಲ್ಪ ಚುರುಕುಗೊಂಡಂತೆ ಭಾಸವಾಯಿತು. ಬೆಳಿಗ್ಗೆ 11ರ ವೇಳೆ ಶೇ 16.73ರಷ್ಟು ಮತದಾನ ಆಯಿತು. ಮಧ್ಯಾಹ್ನ 1ರ ವೇಳೆಗೆ ಶೇ 31.15 ಹಾಗೂ ಮಧ್ಯಾಹ್ನ 3ರ ವೇಳೆಗೆ ಶೇ 45.23ರಷ್ಟು ಮತದಾನ ಆಗಿತ್ತು.

ಕೆಲವು ವಾರ್ಡ್‌ಗಳಲ್ಲಿ ಮತಗಟ್ಟೆ ಹೊರಗೆ ಕ್ರಮ ಸಂಖ್ಯೆ ನೀಡುವವರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ; ಚುನಾವಣಾ ಸಿಬ್ಬಂದಿ ಬಳಿ ಇದ್ದ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಕೆಲವು ಮತದಾರರನ್ನು ಗೊಂದಲಕ್ಕೀಡುಮಾಡಿತು.

25ನೇ ವಾರ್ಡ್‌ನ 94ರ ಮತಗಟ್ಟೆಯಲ್ಲಿ ಚುನಾವಣಾ ಸಹಾಯಕರೊ‌ಬ್ಬರನ್ನು ಬೇರೆಡೆಗೆ ಕಳಿಸಿದ ಘಟನೆ ಕೂಡ ನಡೆಯಿತು. ಮತ ಹಾಕಲು ಬಂದ ಮತದಾರರೊಬ್ಬರಿಗೆ ಚುನಾವಣಾ ಸಹಾಯಕ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಂದಾಲಿ ಅಧಿಕಾರಿಯ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಅವರನ್ನು ಆ ಮತಗಟ್ಟೆಯಿಂದ ಎತ್ತಂಗಡಿ ಮಾಡಲಾಯಿತು.

ಗದಗ-ಬೆಟಗೇರಿ ನಗರಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಮತಗಟ್ಟೆಯಲ್ಲಿ ಕೋವಿಡ್–19 ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗಲಿಲ್ಲ. ಮತದಾನದ ಸಂದರ್ಭದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಯಾರೂ ಪಾಲಿಸಲಿಲ್ಲ. ಕನಿಷ್ಠ ಪಕ್ಷ ಮಾಸ್ಕ್‌ ಕೂಡ ಧರಿಸಿರಲಿಲ್ಲ. ಮತಗಟ್ಟೆ ಮುಂದೆ ಆಶಾಕಾರ್ಯಕರ್ತೆಯರು ಸ್ಯಾನಿಟೈಸರ್‌ ನೀಡುತ್ತಿದ್ದರು. ಆದರೆ, ಹೆಚ್ಚಿನ ಕಡೆಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸದೇ ಹಾಗೆಯೇ ಮತ ಚಲಾಯಿಸಲು ಕಳಿಸುತ್ತಿದ್ದ ದೃಶ್ಯ ಕಂಡುಬಂದವು.

ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಮತದಾನವು ವಾರ್ಡ್ ನಂ. 8, 9ರ ಕೆಲವು ಮತಗಟ್ಟೆಗಳಲ್ಲಿ ಸಂಜೆ 5ರ ಬಳಿಕವೂ ಮತದಾನಕ್ಕೆ ಜನಜಂಗುಳಿ ಧಾವಿಸಿದ್ದು ಕಂಡುಬಂತು. ಹೀಗಾಗಿ ಚುನಾವಣೆಯ ಶೇಕಡಾವಾರು ಮತದಾನದ ನಿಖರ ಮಾಹಿತಿ ರಾತ್ರಿ 9ರವರೆಗೂ ಲಭ್ಯವಾಗಲಿಲ್ಲ.

45ನೇ ಮತಗಟ್ಟೆಯಲ್ಲಿ ವಾಗ್ವಾದ

ಗದಗ: ಕಾಂಗ್ರೆಸ್ ಕಾರ್ಯಕರ್ತರಿಗೆ ಮತಗಟ್ಟೆಯಲ್ಲಿ ಪ್ರಚಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಘಟನೆ ಬೆಟಗೇರಿಯ ವಾರ್ಡ್‌ ನಂಬರ್‌ 10ರ ಮತಗಟ್ಟೆ ಸಂಖ್ಯೆ 45ರಲ್ಲಿ ನಡೆಯಿತು.

ವಾರ್ಡ್ ನಂ. 10ರ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಕುಟುಂಬ ಪ್ರಚಾರ ಮಾಡಿದ್ದಾರೆಂದು ಆರೋಪಿಸಿ, ಬಿಜೆಪಿ ಅಭ್ಯರ್ಥಿ ಮಾಧವ್ ಗಣಾಚಾರಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮತಗಟ್ಟೆ ಅಂಗಳದಲ್ಲೇ ಬಿಜೆಪಿ– ಕಾಂಗ್ರೆಸ್‌ ಕಾರ್ಯಕರ್ತರು ಜೋರು ಧ್ವನಿಯಲ್ಲಿ ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಕಾರ್ಯಕರ್ತರನ್ನು ಮತಗಟ್ಟೆಯಿಂದ ಆಚೆಗೆ ಕಳುಹಿಸಿದರು.

ಮತದಾನ ಪ್ರಕ್ರಿಯೆ ವಿಳಂಬ

ಗದಗ: 15ನೇ ವಾರ್ಡ್‌ನಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದಾಗಿ ಮತದಾನ ಪ್ರಕ್ರಿಯೆ 45 ನಿಮಿಷ ತಡವಾಗಿ ಆರಂಭಗೊಂಡಿತು.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.6ರಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 62ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂತು. ಇದರಿಂದಾಗಿ ಬೆಳಿಗ್ಗೆ 7ಕ್ಕೆ ಆರಂಭಗೊಳ್ಳಬೇಕಿದ್ದ ಮತದಾನ ಪ್ರಕ್ರಿಯೆ ಮುಕ್ಕಾಲು ತಾಸು ತಡವಾಗಿ ಆರಂಭಗೊಂಡಿತು.

ತಾಂತ್ರಿಕ ಅಡಚಣೆಯಿಂದಾಗಿ ಮತದಾರರು ಕೆಲವು ಸಮಯ ಕಾದು ನಿಂತಿದ್ದರು. ಬಳಿಕ ಚುನಾವಣಾ ಅಧಿಕಾರಿಗಳು ವಿವಿ ಪ್ಯಾಟ್‌ ಬದಲಿಸಿ, ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

***

ಸೋಮವಾರ ನಡೆದ ಗದಗ ಬೆಟಗೇರಿ ನಗರಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ

- ಶಿವಾನಂದ ಪವಾಡಶೆಟ್ಟರ, ಗದಗ ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT