ಶುಕ್ರವಾರ, ಆಗಸ್ಟ್ 12, 2022
24 °C
ಲಸಿಕೆ ಅಭಿಯಾನ ಆರಂಭ, ಕುಟುಂಬದವರನ್ನೂ ಜತೆಗೆ ಕರೆತರುವ ಸಿಬ್ಬಂದಿ

ಗದಗ: ಆದ್ಯತಾ ವಲಯದವರಿಗೆ ಆಬಾಧಿತ, ಆರೋಗ್ಯ ಇಲಾಖೆಯಿಂದ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಬರುವ ವಲಯಗಳನ್ನು ಗುರುತಿಸಿ, ಅಲ್ಲಿ ಕೆಲಸ ಮಾಡುವವರಿಗೆ ಲಸಿಕೆ ನೀಡುವಂತೆ ಸೂಚಿಸಿದೆ. ಹೆಸ್ಕಾಂ, ಸಾರಿಗೆ ಇಲಾಖೆ, ಶಿಕ್ಷಕರು, ಕಾರ್ಮಿಕರು, ಗ್ಯಾಸ್ ವಿತರಕರು, ಎಪಿಎಂಸಿ ಹಮಾಲರು, ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಉಳಿದ ಆದ್ಯತಾ ವಲಯದ ಜನರಿಗೆ ಲಸಿಕೆ ಹಾಕಿಸುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಈ ಪ್ರಕ್ರಿಯೆಯು ಜಿಲ್ಲೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ಅಡೆತಡೆಗಳೊಂದಿಗೆ ನಿರಂತರವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ 30,940 ಮಂದಿಯನ್ನು ಆದ್ಯತಾ ವಲಯದವರು ಎಂದು ಗುರುತಿಸಲಾಗಿದ್ದು, ಗುರುವಾರದವರೆಗೆ 16,577 ಮಂದಿಗೆ ಲಸಿಕೆ ಹಾಕುವ ಮೂಲಕ ಶೇ 53.5ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12,600 ಮಂದಿ ಅಂಗವಿಕಲರು ಇದ್ದು, ಶೇ 32 ಮಂದಿಗೆ ಈವರೆಗೆ ಲಸಿಕೆ ಹಾಕಲಾಗಿದೆ.

‘ಆದ್ಯತಾ ವಲಯದವರಿಗೆ ಲಸಿಕೆ ಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಲಸಿಕೆಯ ಕೊರತೆ ಎಂದೂ ಕಾಡಿಲ್ಲ. ಆದರೆ, ಮೊದಲೇ ಸೂಚಿಸಿದಂತೆ ನಿಗದಿತ ಜನಕ್ಕಿಂತ ಹೆಚ್ಚು ಜನರು ಒಮ್ಮೆಲೆ ಬಂದಾಗ ಕೆಲವರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮೊಂದಿಗೆ ಕುಟುಂಬದವರನ್ನೂ ಕರೆತರುತ್ತಿದ್ದಾರೆ. ಇದರಿಂದಾಗಿಯೂ ಸಮಸ್ಯೆ ಆಗುತ್ತಿದೆ. ಸರ್ಕಾರ ಗುರುತಿಸಿರುವ ಆದ್ಯತಾ ವಲಯದವರಿಗೆ ಲಸಿಕೆ ಹಾಕಲು ಪ್ರತ್ಯೇಕವಾಗಿ ಕ್ಯಾಂಪ್‌ಗಳನ್ನೂ ನಡೆಸಲಾಗುತ್ತಿದೆ’ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ತಿಳಿಸಿದ್ದಾರೆ.

‘ಸರ್ಕಾರ ಜಿಲ್ಲೆಯಲ್ಲಿ ಗುರುತಿಸಿರುವ ಆದ್ಯತಾ ವಲಯದ ಒಟ್ಟು ಸಂಖ್ಯೆಯಲ್ಲಿ ಗದಗ ನಗರದಲ್ಲಿಯೇ ಅತಿ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ಅಂಗವಿಕರನ್ನು ಹೊರತುಪಡಿಸಿ ಉಳಿದ ವಲಯದವರು ನಮೂನೆ 3, ಗುರುತಿನ ಚೀಟಿ ಹಾಗೂ ದೃಢೀಕೃತ ಪ್ರಮಾಣಪತ್ರ ತೋರಿಸಿ ಲಸಿಕೆ ಪಡೆಯುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ
ವಾಗಿ ಲಸಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದರ ಜತೆಗೆ ಆದ್ಯತಾ ವಲಯದ ಒಂದೊಂದು ಗುಂಪಿಗೂ ಪ್ರತ್ಯೇಕವಾಗಿ ಲಸಿಕೆ ಕ್ಯಾಂಪ್‌ಗಳನ್ನು ನಡೆಸಲಾಗುತ್ತಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಸ್‌.ಎಸ್‌.ನೀಲಗುಂದ ತಿಳಿಸಿದ್ದಾರೆ.

ಲಸಿಕೆ ಪೂರೈಕೆಗಿಂತ ಬೇಡಿಕೆ ಹೆಚ್ಚು
ಮುಂಡರಗಿ:
ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಕೋವಿಡ್-19 ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿರುವ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಮೊದಲಾದ ಸಿಬ್ಬಂದಿಗೆ ಭಾಗಶಃ ಲಸಿಕೆಯನ್ನು ನೀಡಲಾಗಿದೆ.

ಇತ್ತೀಚೆಗೆ ಲಸಿಕೆ ಕೊರತೆ ಉಂಟಾಗಿದ್ದು, ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಲಸಿಕೆಗಾಗಿಅಲೆದಾಡಬೇಕಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ನಿಗದಿತ ಸಂಖ್ಯೆಯ ಲಸಿಕೆಗಳು ಬರುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಸರ್ಕಾರ ಆಸ್ಪತ್ರೆಗೆ ಸರಬರಾಜು ಮಾಡುವ ಲಸಿಕೆಗಳಿಗಿಂತ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಲಸಿಕೆ ಪಡೆದುಕೊಳ್ಳುವವರು ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಲಸಿಕೆ ಕೊರತೆಯ ಕಾರಣದಿಂದ 18ರಿಂದ 44ವರ್ಷದವರಿಗೆ ಲಸಿಕೆ ಕಾರ್ಯಕ್ರಮದ ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿದೆ.

ಈಗಲೂ ಕೆಲವು ಇಲಾಖೆಗಳ ಸಿಬ್ಬಂದಿ ಹಾಗೂ ಅಗತ್ಯ ಸೇವೆಯನ್ನು ಒದಗಿಸುತ್ರುವ ಕೆಲವು ಸಂಘಟನೆಗಳ ಕಾರ್ಯಕರ್ತರಿಗೆ ಈವರೆಗೂ ಲಸಿಕೆ ದೊರೆತಿಲ್ಲ. ನಿತ್ಯ ಆಸ್ಪತ್ರೆಗೆ ಅಲೆದಾಡುವುದು ಬೇಡ ಎಂದು ಕೆಲವರು ಲಸಿಕೆ ಹಾಕಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅವರನ್ನು ಗುರುತಿಸಿ ತಕ್ಷಣ ಅವರಿಗೆ ಲಸಿಕೆ ನೀಡುವ ಅಗತ್ಯವಿದೆ ಎಂದು ಆದ್ಯತಾ ವಲಯದ ಜನರು ಆಗ್ರಹಿಸಿದ್ದಾರೆ.

ಎಲ್ಲರಿಗೂ ಲಸಿಕೆ ಸಿಕ್ಕಿಲ್ಲ
ಲಕ್ಷ್ಮೇಶ್ವರ:
ತಾಲ್ಲೂಕಿನಲ್ಲಿ ಕೆಲವೊಂದಿಷ್ಟು ಇಲಾಖೆಗಳನ್ನು ಹೊರತುಪಡಿಸಿದರೆ ಆದ್ಯತಾ ವಲಯದ ಅನೇಕರಿಗೆ ಲಸಿಕೆ ಇನ್ನೂ ಸಿಕ್ಕಿಲ್ಲ.

ಹೆಸ್ಕಾಂ ಇಲಾಖೆಯ ಶೇ 75, ಸಾರಿಗೆ ಇಲಾಖೆಯ ಶೇ 80 ಹಾಗೂ ಶೇ 90ರಷ್ಟು ಶಿಕ್ಷಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಶೇ 10ರಷ್ಟು ಕಾರ್ಮಿಕರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನು ಸಿಲಿಂಡರ್ ವಿತರಕರು ಹೆಚ್ಚು ಕಡಿಮೆ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇನ್ನೂ ಶೇ 80ರಷ್ಟು ಇಲ್ಲಿನ ಎಪಿಎಂಸಿ ಹಮಾಲರಿಗೆ ಲಸಿಕೆ ಹಾಕಬೇಕಾಗಿದೆ.

ಕಾರ್ಮಿಕ ಇಲಾಖೆ ಅಧಿಕಾರಿಗಳು ಒಂದೆರಡು ದಿನ ಪಟ್ಟಣಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದನ್ನು ಬಿಟ್ಟರೆ ಮತ್ತೆ ಅವರು ಈ ಕಡೆ ಸುಳಿದಿಲ್ಲ. ಹೀಗಾಗಿ ಇನ್ನೂ ನೂರಾರು ಮಂದಿ ಕಾರ್ಮಿಕರಿಗೆ ಲಸಿಕೆ ನೀಡುವುದು ಬಾಕಿ ಉಳಿದಿದೆ. ಪುರಸಭೆಯ ಪೌರಕಾರ್ಮಿಕರು ಮಾತ್ರ ಎಲ್ಲರೂ ಲಸಿಕೆ ತೆಗೆದುಕೊಂಡಿದ್ದಾರೆ.

ಲಸಿಕೆ ಅಭಿಯಾನ
ರೋಣ:
ಸರ್ಕಾರ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಿ ಎಂದು ಆದೇಶ ಹೊರಡಿಸಿದ್ದರೂ ಮಾಹಿತಿ ಕೊರತೆ ಹಾಗೂ ಲಸಿಕೆ ಸುಲಭವಾಗಿ ಸಿಗದ ಕಾರಣ ಕೆಲವರು ರೋಣ ತಾಲ್ಲೂಕು ಆಸ್ಪತ್ರೆ ಹಾಗೂ ಹೊಳೆಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ಅಲೆದಾಡುತ್ತಿದ್ದಾರೆ.

ಈಚೆಗೆ ಎಪಿಎಂಸಿ ಆವರಣದಲ್ಲಿ ಲಸಿಕಾ ಅಭಿಯಾನ ನಡೆದ ಪರಿಣಾಮ ದಲ್ಲಾಳಿ, ಹಮಾಲರು ಮತ್ತು ಖರೀದಿದಾರರಿಗೆ ಸುಲಭ
ವಾಗಿ ಲಸಿಕೆ ದೊರೆಯಿತು. ಅದೇ ಮಾದರಿಯಲ್ಲಿ ಎಲ್ಲಾ ಆದ್ಯತಾ ವರ್ಗದವರಿಗೆ ಒಂದೊಂದು ದಿನ ಎಂದು ಮೀಸಲು ಮಾಡಿ ಲಸಿಕೆ ನೀಡಿದರೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಲಸಿಕೆ ಹಾಕಿಸಿಕೊಳ್ಳಲು ಕಾದಿರುವ ಆದ್ಯತಾ ವಲಯದ ಜನರು ಕೋರಿದ್ದಾರೆ.

ಪ್ರಮಾಣಪತ್ರ ನೀಡಿದವರಿಗೆ ಲಸಿಕೆ
ನರೇಗಲ್:‌
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಸ್ಕಾಂ, ನೀರು ಸರಬರಾಜು ಸಿಬ್ಬಂದಿ, ಪತ್ರಕರ್ತರು, ಖಾಸಗಿ ಆರೋಗ್ಯ ಸಿಬ್ಬಂದಿ, ಕಾರ್ಮಿಕರು, ಅಂಚೆ ಮತ್ತು ಬ್ಯಾಂಕ್ ನೌಕರರು, ಎಪಿಎಂಸಿ ಸಿಬ್ಬಂದಿಗೆ ಸಂಸ್ಥೆಯ ಪ್ರಮಾಣಪತ್ರ ಅಥವಾ ಸಂಘದ ಪ್ರಮಾಣಪತ್ರ ನೀಡಿದವರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

ಮೊದಲ ಲಸಿಕೆ ಪಡೆಯದೇ ಇರುವ ಮತ್ತು ಮೊದಲ ಲಸಿಕೆ ಪಡೆದುಕೊಂಡು ಎರಡನೇ ಲಸಿಕೆ ಹಾಕಿಸಿಕೊಳ್ಳದೇ ಇದ್ದರೂ ಕೆಲವರ  ಮೊಬೈಲ್‌ಗೆ ಲಸಿಕೆ ಹಾಕಿಸಿಕೊಂಡಿರುವಿರಿ ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಆಧಾರ್ ಸಂಖ್ಯೆ ದುರುಪಯೋಗ ಆಗಿರಬಹುದು ಎಂಬ ಆರೋಪಗಳು ಕೇಳಿಬರುತ್ತಿವೆ.

ಆದ್ಯತಾ ವಲಯದವರಿಗೆ ಆದ್ಯತೆ
ನರಗುಂದ:
ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ವಾರಿಯರ್ಸ್‌ ಹಾಗೂ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.

ಆದ್ಯತಾ ವಲಯದ ಹೆಸ್ಕಾಂ, ಶಿಕ್ಷಕರು, ನೀರು ಸರಬರಾಜು ಸಿಬ್ಬಂದಿ, ಪತ್ರಕರ್ತರು, ಸಾರಿಗೆ ಸಿಬ್ಬಂದಿ, ಆಟೊ- ಕ್ಯಾಬ್ ಚಾಲಕರು, ಕಾರ್ಮಿಕರು, ಅಂಚೆ- ಬ್ಯಾಂಕ್ ನೌಕರರು, ಗ್ಯಾಸ್ ಸಿಲಿಂಡರ್ ವಿತರಕರು, ಎಪಿಎಂಸಿ ಸಿಬ್ಬಂದಿ ಹಾಗೂ ಅಂಗವಿಕಲರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಲಾಗುತ್ತಿದೆ. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಲಸಿಕೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆದ್ಯತಾ ವಲಯದಲ್ಲಿರುವವರಿಗೆ 100ಕ್ಕೆ 100ರಷ್ಟು ಕೋವಿಡ್ ಲಸಿಕೆ ಹಾಕುವ ಗುರಿ ಸಾಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ. 45ರ ನಂತರದವರಿಗೆ ಶೇ 64ರಷ್ಟು ಗುರಿ ಸಾಧಿಸಲಾಗಿದೆ. 

ಲಸಿಕೆಗಾಗಿ ಕಾಯುವ ಸ್ಥಿತಿ
ಡಂಬಳ:
ಪತ್ರಕರ್ತರು, ಗ್ಯಾಸ್ ಸಿಲಿಂಡರ್‌ ವಿತರಕರು, ಅಂಗವಿಕಲರು, ಹೆಸ್ಕಾಂ ಸೇರಿದಂತೆ ಆದ್ಯತಾ ವಲಯದ ಜನರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಹಾಕಬೇಕು ಎಂದು ಸರ್ಕಾರ ಸೂಚನೆ ನೀಡಿದೆಯಾದರೂ ಆಸ್ಪತ್ರೆಗೆ ಹೋದರೆ ಸಮಯಕ್ಕೆ ಸರಿಯಾಗಿ ಲಸಿಕೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೊರೊನಾ ಸೇನಾನಿಗಳು ಆಸ್ಪತ್ರೆಗೆ ಹೋಗಿ ಲಸಿಕೆ ಹಾಕುವಂತೆ ವೈದ್ಯರನ್ನು ಕೇಳಿದರೆ, ‘ನಮ್ಮಲ್ಲಿ ಲಸಿಕೆ ಸಂಗ್ರಹವಿಲ್ಲ. ನಾಳೆ ಬನ್ನಿ’ ಎನ್ನುತ್ತಾರೆ.

‘ಒಂದು ಅಥವಾ ಎರಡನೇ ಹಂತದ ಲಸಿಕೆ ಪಡೆಯಲು ಕೊರೊನಾ ಸೇನಾನಿಗಳು ಕಾಯಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಡಂಬಳ ಗ್ರಾಮದ ಗ್ಯಾಸ್ ವಿತರಕ ಶರತ್ ಬಂಡಿಹಾಳ, ಅಂಗವಿಕಲ ಮಲಿಯಪ್ಪ ದೊಡ್ಡಮನಿ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌, ಡಾ. ಬಸವರಾಜ ಹಲಕುರ್ಕಿ, ಲಕ್ಷ್ಮಣ ಎಚ್ ದೊಡ್ಡಮನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು