ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೆಎಣ್ಣೆ ಸಿಗದೇ ಗ್ರಾಮೀಣರಿಗೆ ತೊಂದರೆ

ಅಡುಗೆಗೆ ಆಸರೆಯಾದ ‘ಉಜ್ವಲ’ ಯೋಜನೆ; ಅಲೆಮಾರಿಗಳು, ಕುರಿಗಾಹಿಗಳಿಗೆ ತೊಂದರೆ
Last Updated 17 ಜನವರಿ 2022, 5:11 IST
ಅಕ್ಷರ ಗಾತ್ರ

ಗದಗ: ಹೊಗೆರಹಿತ ವಾತಾವರಣ, ಇಂಧನದಲ್ಲಿ ಕಲಬೆರಕೆ, ವಾಯು ಮಾಲಿನ್ಯ ತಡೆ ಹಾಗೂ ಬೆಂಕಿ ಅನಾಹುತ ತಡೆಗಟ್ಟುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಘೋಷಿಸಿರುವ ‘ಸೀಮೆಎಣ್ಣೆ ಮುಕ್ತ ಭಾರತ’ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 340 ನ್ಯಾಯಬೆಲೆ ಅಂಗಡಿಗಳು ಇದ್ದು, ಕಳೆದ ಮೂರು ತಿಂಗಳಿನಿಂದ ಸೀಮೆಎಣ್ಣೆ ವಿತರಣೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ.

ಪಡಿತರ ವಿತರಣೆ ಕೇಂದ್ರಗಳಲ್ಲಿ ಸೀಮೆಎಣ್ಣೆ ವಿತರಣೆ ಬಂದ್ ಆಗಿರುವುದರಿಂದ ಗ್ರಾಮೀಣ ಭಾಗದ ಬಡ ಜನರಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಸೀಮೆಎಣ್ಣೆಯನ್ನು ಒಲೆ ಹೊತ್ತಿಸಲು, ವಿದ್ಯುತ್ ಕೈ ಕೊಟ್ಟಾಗ ದೀಪ ಹಚ್ಚಲು ಸೀಮೆಎಣ್ಣೆ ಬಳಸುತ್ತಿದ್ದರು. ಆದರೆ ಸೀಮೆಎಣ್ಣೆ ವಿತರಣೆ ಸ್ಥಗಿತಗೊಂಡಿರುವುದರಿಂದ ವಿದ್ಯುತ್ ಕೈಕೊಟ್ಟಾಗ ಜನರು ಮಾರುಕಟ್ಟೆಯಲ್ಲಿ ಸಿಗುವ ಬ್ಯಾಟರಿಗಳನ್ನು ಬಳಸುತ್ತಿದ್ದಾರೆ. ಹೊಲಗಳಲ್ಲಿ ವಾಸವಿರುವ ಹಲವು ರೈತ ಕುಟುಂಬಗಳು ರಾತ್ರಿ ವಿದ್ಯುತ್ ಕೈಕೊಟ್ಟಾಗ ಇಂದು ಲ್ಯಾಟಿನ್ ಬದಲಾಗಿ ಬ್ಯಾಟರಿ ಬಳಸುತ್ತಾರೆ.

‘ಉಜ್ವಲ ಯೋಜನೆ ಅಡಿಯಲ್ಲಿ ಬಹುತೇಕ ಎಲ್ಲ ಕುಟುಂಬಗಳಿಗೂ ಅಡುಗೆ ಅನಿಲ ವಿತರಣೆಯಾಗುತ್ತಿದೆ. ಇದರಿಂದಾಗಿ ಅನೇಕ ಕುಟುಂಬಗಳಿಗೆ ಅನುಕೂಲ ಆಗಿದೆ. ಕರಾವಳಿ ಹೊರತು ಪಡಿಸಿ ಇನ್ನಿತರ ಕಡೆಗಳಲ್ಲಿ ಸೀಮೆಎಣ್ಣೆ ವಿತರಣೆ ಸ್ಥಗಿತಗೊಂಡಿದೆ’ ಎಂದು ಗದಗ ಜಿಲ್ಲಾ ಆಹಾರ, ನಾಗರಿಕ ಪೂರೈಕೆ ಇಲಾಖೆಯ ಸಿಬ್ಬಂದಿ ಗಿರಿಜಮ್ಮ ಹಿರೇಮಠ ತಿಳಿಸಿದ್ದಾರೆ.

ಒಲಿ ಹಚ್ಚಾಕ ಸೀಮೆಎಣ್ಣೆ ಕೊಡಸ್ರಿ...

ನರಗುಂದ: ‘ಚಿಮಣಿ ಎಣ್ಣೆ ಇಲ್ಲದೇ ಜೀವನ ದುಬಾರಿ ಆಗೇತಿ. ಒಲಿ ಹಚ್ಚಾಕರ ಸೀಮೆ ಎಣ್ಣೆ ಕೊಡಸ್ರಿ. ಗ್ಯಾಸ್ ಸಿಲಿಂಡರ್ ರೊಕ್ಕ ಬಾಳ ಆಗೇತಿ’ ಎಂಬುದು ತಾಲ್ಲೂಕಿನ ಬಹುತೇಕ ಮಹಿಳೆಯರ ಅಳಲು ಆಗಿದೆ.

ಸೀಮೆಎಣ್ಣೆ ಸ್ಥಗಿತಗೊಂಡು ವರ್ಷ ಸಮೀಪಿಸುತ್ತಿದೆ. ಇದರಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಜನರು ಪರದಾಡುವಂತಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಶೇ 90ರಷ್ಟು ಹಳ್ಳಿ ಜನರು ಒಲೆಯ ಮೇಲೆ ಅವಲಂಬನೆ ಆಗಿರುತ್ತಾರೆ. ಆದರೆ ಸೀಮೆಎಣ್ಣೆ ಇಲ್ಲದೇ ಚಳಿಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಶವಸಂಸ್ಕಾರಕ್ಕೂ ಸೀಮೆಎಣ್ಣೆ ಸಿಗದೇ ಇರುವುದರಿಂದ ದುಬಾರಿ ಬೆಲೆ ಕೊಟ್ಟು ಡೀಸೆಲ್ ಬಳಸಬೇಕಿದೆ.

ವಿದ್ಯುತ್ ಕೈಕೊಟ್ಟಾಗ ಕೆಲವು ಮನೆಗಳಲ್ಲಿ ಸೀಮೆಎಣ್ಣೆ ದೀಪ, ಚಿಮಣಿಗಳಿಗೆ ಮೊರೆ ಹೋಗುವುದು ಇತ್ತು. ಆ ಸಂಸ್ಕೃತಿ ಈಗ ಮರೆಯಾಗುತ್ತಿದೆ. ಎಲ್ಲದಕ್ಕೂ ಬಿಲ್ ಎಂಬಂತೆ ಗ್ಯಾಸ್‌ಗೆ ಹೆಚ್ಚಿನ ಹಣ, ವಿದ್ಯುತ್‌ಗೆ ಹೆಚ್ಚಿನ ಬಿಲ್ ಕೊಡಬೇಕಾಗಿದೆ. ಇದರಿಂದ ಬದುಕು ದುಸ್ತರವಾಗಿದೆ. ತಿಂಗಳಿಗೆ ಕನಿಷ್ಠ 1 ಲೀಟರ್ ಸೀಮೆಎಣ್ಣೆ ಪೂರೈಸಿ ಬಡ ಜನರಿಗೆ ಸರ್ಕಾರ ಆಸರೆಯಾಗಬೇಕಿದೆ ಎಂದು ಅಲವತ್ತುಕೊಂಡಿದ್ದಾರೆ.

‘ನಮ್ಗ ಸೀಮೆಎಣ್ಣೆ ಇದ್ದರ ಯಾವ ಗ್ಯಾಸ್, ಚಾರ್ಜ್‌ ಬ್ಯಾಟಿರಿ ಕೂಡ ಬ್ಯಾಡ.. ಅದರ ಮೂಲಕ ಒಲಿ ಹಚ್ಚಗೊಂಡ, ಚಿಮಣಿ ಬೆಳಗಿ ಕಡಿಮೆ ರೊಕ್ಕದಾಗ ಜೀವನ ಮಾಡತೇವಿ..’ ಎಂದು ಸುರಕೋಡದ ಮುದಕವ್ವ ಗೋಲಪ್ಪನವರ ಹೇಳಿದರು.

ಬಾಧಿಸದ ಸೀಮೆಎಣ್ಣೆ ಕೊರತೆ

ಮುಂಡರಗಿ: ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿದೆ. ಜೊತೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುರುಚಲು ಗಿಡಿಗಳು ಹೇರಳವಾಗಿ ಲಭಿಸುತ್ತಿವೆ. ಹೀಗಾಗಿ ತಾಲ್ಲೂಕಿನ ಭಾಗಶಃ ಬಡ ಮತ್ತು ಮಧ್ಯಮ ವರ್ಗದ ಜನರು ನಿತ್ಯ ಉರುವಲಿಗಾಗಿ ಕಟ್ಟಿಗೆ, ಕುಳ್ಳು ಹಾಗೂ ಮತ್ತಿತರ ಕೃಷಿ ತ್ಯಾಜ್ಯವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಇಲ್ಲಿಯ ಜನತೆಗೆ ಸೀಮೆಎಣ್ಣೆಯ ಕೊರತೆ ಅಷ್ಟಾಗಿ ಬಾಧಿಸುತ್ತಿಲ್ಲ.

ಪಟ್ಟಣದಲ್ಲಿ ವಾಸಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರು ಹಾಗೂ ಸಣ್ಣ ಪುಟ್ಟ ಹೋಟೆಲ್ ಮಾಲೀಕರು ಸೀಮೆಎಣ್ಣೆ ದೊರೆಯದೇ ಪರದಾಡುತ್ತಿದ್ದಾರೆ. ಸಕಾಲದಲ್ಲಿ ವಾಣಿಜ್ಯಾಧಾರಿತ ಅಡುಗೆ ಸಿಲಿಂಡರ್ ದೊರೆಯದ ಸಮಯದಲ್ಲಿ ಬಹುತೇಕ ಸಣ್ಣ ಪುಟ್ಟ ಹೋಟೆಲ್ ಮಾಲೀಕರು ಸೀಮೆಎಣ್ಣೆಯನ್ನು ಅವಲಂಬಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರೆಲ್ಲ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ.

ಗ್ರಾಮೀಣ ಜನರಿಗೆ ತೊಂದರೆ

ಗಜೇಂದ್ರಗಡ: ನಗರ ಪ್ರದೇಶದ ಬಹುತೇಕ ಎಲ್ಲ ಕುಟುಂಬಗಳಿಗೂ ಗ್ಯಾಸ್ ಸೌಲಭ್ಯವಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕುಟುಂಬಗಳು ಅಡುಗೆ ಮಾಡಲು ಇನ್ನೂ ಸಹ ಒಲೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಒಲೆ ಹೊತ್ತಿಸಲು ಸೀಮೆಎಣ್ಣೆ ಇಲ್ಲದ ಕಾರಣ ಪ್ಲಾಸ್ಟಿಕ್, ಪೇಪರ್ ಬಳಸುತ್ತಿದ್ದಾರೆ.

ಎಲ್ಲ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿರುವುದರಿಂದ ಪಡಿತರ ಕೇಂದ್ರಗಳ ಮೂಲಕ ವಿತರಿಸುತ್ತಿದ್ದ ಸೀಮೆಎಣ್ಣೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಸೀಮೆಎಣ್ಣೆಯನ್ನು ಪಡಿತರ ಕೇಂದ್ರಗಳ ಮೂಲಕ ವಿತರಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿಯಾದರು ಪೂರೈಸಿದರೆ ಅಗತ್ಯವಿರುವವರು ಕೊಂಡುಕೊಳ್ಳುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ನೇಪಥ್ಯಕ್ಕೆ ಸರಿದ ಸ್ಟೌವ್, ಚಿಮಣಿ ದೀಪಗಳು

ಮುಳಗುಂದ: ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಆಗುತ್ತಿದ್ದ ಸೀಮೆಎಣ್ಣೆ ನಗರ, ಪಟ್ಟಣಗಳಲ್ಲಿ ಕಳೆದ ನಾಲ್ಕು ವರ್ಷಗ ಹಿಂದೆಯೇ ಬಂದ್ ಮಾಡಲಾಗಿದ್ದು, ಗ್ರಾಮೀಣ ಪ್ರದೇಗಳಲ್ಲಿ ಕನಿಷ್ಠ 1 ಲೀ. ವಿತರಣೆ ಆಗುತಿತ್ತು. ಆದರೆ ಈಗ ಹಳ್ಳಿಗಳಿಗೂ ಸೀಮೆಎಣ್ಣೆ ಸ್ಥಗಿತಗೊಂಡಿದೆ.

ಇದರಿಂದಾಗಿ ರಾತ್ರಿ ವೇಳೆ ಬಡವರು ಉಪಯೋಗಿಸುತ್ತಿದ್ದ ಸ್ಟೌವ್, ಬುಡ್ಡಿ (ಚಿಮಣಿ) ದೀಪಗಳು ನೇಪಥ್ಯಕ್ಕೆ ಸರಿದಿವೆ. ವಿದ್ಯುತ್ ಕೈ ಕೊಟ್ಟಾಗ ಮನೆಯಲ್ಲಿ ಸೀಮೆ ಎಣ್ಣೆ ದೀಪ ಬೆಳಗುತ್ತಿದ್ದವು. ತುರ್ತು ಸಂದರ್ಭದಲ್ಲಿ ಅಡುಗೆ ಮಾಡಲು ಬಳಸುತ್ತಿದ್ದ ಬರ್ನಲ್ ಸ್ವನ್‌ಗಳಿಗೂ ಸೀಮೆಎಣ್ಣೆ ಇಲ್ಲದೇ ಅವು ಕೂಡ ಮೂಲೆ ಸೇರಿವೆ. ಇದರಿಂದ ದುಬಾರಿ ಮೊತ್ತದ ಬ್ಯಾಟರಿ ಚಾಲಿತ್ ಲೈಟ್‌ಗಳ ಬಳಕೆ ಆಗುತ್ತಿದೆ. ಆದರೆ ಅಡುಗೆ ಮಾಡಲು ಸೌದೆ ಇಲ್ಲದೆ ಇದ್ದಾಗ ಸ್ವವ್ ಬಳಸಲು ಸಾಧ್ಯವಾಗುತ್ತಿಲ್ಲ.

ಆಹಾರ ಇಲಾಖೆ ಪ್ರಕಾರ ಎಲ್ಲ ಮನೆಗಳಿಗೂ ಇನ್ನೂ ಅಡುಗೆ ಅನಿಲ ಸಿಲಿಂಡರ್ ವಿತರಣೆ ಆಗಿಲ್ಲ ಹೀಗಾಗಿ ಬಹುತೇಕರು ಇಂದಿಗೂ ಸೌದೆ ಒಲೆ ಮತ್ತು ಬರ್ನಲ್ ಸ್ಟವ್ ಬಳಸುತ್ತಿದ್ದಾರೆ.

‘ನಗರ, ಪಟ್ಟಣಗಳಿಗಿಂತ ಹೆಚ್ಚಾಗಿ ಹಳ್ಳಿಗಳಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಕೈ ಕೊಡುತ್ತದೆ. ಇದರಿಂದ ಬೆಳಕಿನ ವ್ಯವಸ್ಥೆ ಇಲ್ಲದೇ ಸಾಕಷ್ಟು ಬಡ ಕುಟುಂಬಗಳು ಕತ್ತಲಲ್ಲೇ ಕಲಾ ಕಳೆಯುವ ಸ್ಥಿತಿ ಇದೆ. ಇನ್ನೂ ಶವ ಸುಡುವುದಕ್ಕೂ ಸೀಮೆಎಣ್ಣೆ ಸಿಗುತ್ತಿಲ್ಲ. ಪರ್ಯಾಯವಾಗಿ ದುಬಾರಿ ಬೆಲೆಯ ಡೀಸೆಲ್‌ ಬಳಸುವುದು ಅನಿವಾರ್ಯವಾಗಿದೆ. ಹಳ್ಳಿಗಳ ಬಿಪಿಎಲ್ ಪಡಿತರ ಚೀಟಿ ಹೊಂದಿವರಿಗೆ ಕನಿಷ್ಠ 1 ಲೀ. ಸೀಮೆಎಣ್ಣೆ ವಿತರಿಸಬೇಕು’ ಎಂದು ಚಿಂಚಲಿ ಗ್ರಾಮಸ್ಥ ಮಂಜು ಹೂಗಾರ ಹೇಳಿದರು.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಡಾ. ಬಸವರಾಜ ಹಲಕುರ್ಕಿ, ಕಾಶೀನಾಥ ಬಿಳಿಮಗ್ಗದ, ಚಂದ್ರಶೇಖರ ಭಜಂತ್ರಿ, ಶ್ರೀಶೈಲ ಎಂ. ಕುಂಬಾರ, ಚಂದ್ರು ಎಂ.ರಾಥೋಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT