ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ | ಜಿಟಿಟಿಸಿ ಕಟ್ಟಡ ಪೂರ್ಣ; ಜ. 22ಕ್ಕೆ ಕಾರ್ಯಾರಂಭ

Published 6 ಜನವರಿ 2024, 4:54 IST
Last Updated 6 ಜನವರಿ 2024, 4:54 IST
ಅಕ್ಷರ ಗಾತ್ರ

ನರಗುಂದ: ಬಂಡಾಯದ ನಾಡು ನರಗುಂದ ಈಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಅದರಲ್ಲೂ ತಾಂತ್ರಿಕ ಶಿಕ್ಷಣ ನೀಡಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಮಾದರಿ ಪಟ್ಟಣವಾಗುತ್ತಿರುವುದಕ್ಕೆ ಶೀಘ್ರ ಕಾರ್ಯಾರಂಭ ಮಾಡಲಿರುವ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಸಾಕ್ಷಿಯಾಗಿದೆ.

ಈಗಾಗಲೇ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಹೊಂದಿರುವ ನರಗುಂದ ಪಟ್ಟಣ ಈ ಜಿಟಿಟಿಸಿ ಕೇಂದ್ರದಿಂದ ಮತ್ತಷ್ಟು ಕೈಗಾರಿಕಾ ತರಬೇತಿ ಆಕಾಂಕ್ಷಿಗಳಿಗೆ ವರದಾನವಾಗಲಿದೆ. ಕರ್ನಾಟಕ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರತಿಷ್ಠಿತ ಅಂಗ ಸಂಸ್ಥೆಯಾದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ - ಜಿಟಿಟಿಸಿಯು ಪಟ್ಟಣದಲ್ಲಿ ನೂತನ ಶಾಖೆಯನ್ನು ತೆರೆಯುತ್ತಿದೆ. ಪಟ್ಟಣದ ಅಳಗವಾಡಿ ರಸ್ತೆಯಲ್ಲಿನ ಸ್ವಂತ ನಿವೇಶನದಲ್ಲಿ ಈಗಾಗಲೇ ವರ್ಕಶಾಪ್ ಕಟ್ಟಡ ನಿರ್ಮಾಣಗೊಂಡಿದ್ದು ತರಬೇತಿ ಆರಂಭಿಸುತ್ತಿದೆ. ಬೆಂಗಳೂರಿನ ಟೊಯೊಟ ಕಿರ್ಲೋಸ್ಕರ್ ಮೋಟರ್ಸ್ ಲಿಮಿಟೆಡ್ ಕಂಪೆನಿಯ ಸಹಯೋಗದಲ್ಲಿ 1+2 ವರ್ಷ ಅವಧಿಯ ‘ಅಟೊಮೋಟಿವ್ ವೆಹಿಕಲ್ ಅಸೆಂಬ್ಲಿ’ ವೃತ್ತಿ ತರಬೇತಿಯನ್ನು ಆರಂಭಿಸುತ್ತಿದೆ.

ಈ ತರಬೇತಿಯು ಜ. 22ರಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಸ್ವೀಕರಿಸಲಾಗುತ್ತಿದೆ. ಹತ್ತನೇ ತರಗತಿ ಪಾಸಾದ 17 ರಿಂದ 22 ವಯೋಮಿತಿಯೊಳಗಿನ ಯುವಕರು ಈ ತರಬೇತಿಗಳಿಗೆ ಅರ್ಹರಿರುತ್ತಾರೆ. ಮೂರು ವರ್ಷ ಅವಧಿಯ ಈ ತರಬೇತಿಯಲ್ಲಿ ಮೊದಲನೆಯ ವರ್ಷ ಪಟ್ಟಣದ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ನಂತರದ ಎರಡು ವರ್ಷ ಬೆಂಗಳೂರಿನ ಟೊಯೊಟಾ ಕಾರು ಉತ್ಪಾದನಾ ಕಂಪನಿಯಲ್ಲಿ ಪ್ರತಿ ತಿಂಗಳು ₹ 15 ಸಾವಿರ ಶಿಷ್ಯವೇತನದೊಂದಿಗೆ ಆನ್-ದ-ಜಾಬ್ ತರಬೇತಿ ನೀಡಲಾಗುವುದು. 3 ವರ್ಷದ ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳಿಗೆ ಟೊಯೊಟಾ ಸಮೂಹದಲ್ಲಿ ಉದ್ಯೋಗ ದೊರಕಲಿದೆ. ಈ ತರಬೇತಿ ಪಡೆದ ಟೆಕ್ನಿಷಿಯನ್‍ಗಳಿಗೆ ಅಟೊಮೊಬೈಲ್ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಜಿಟಿಟಿಸಿ ತರಬೇತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಜಿಟಿಟಿಸಿಯಲ್ಲಿ ಯಂತ್ರೋಪಕರಣಗಳನ್ನು ಮತ್ತು ಕ್ಯಾಡ್-ಕ್ಯಾಮ್ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಭರದಿಂದ ಸಾಗಿದೆ. ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಪ್ರಾಕ್ಟಿಕಲ್ ಇಂಟೆಗ್ರೇಟೆಡ್ ಆನ್‍ ಜಾಬ್ ತರಬೇತಿ ನೀಡುವ ಉದ್ದೇಶ ಹೊಂದಿರುವ ಕೇಂದ್ರ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಶತ ಪ್ರತಿ ಶತ ಉದ್ಯೋಗಾವಕಾಶ ಒದಗಿಸುವುದು ಜಿಟಿಟಿಸಿಯ ವಿಶೇಷತೆ.

ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಕೌಶಲ ತರಬೇತಿಗಳನ್ನು ಕೂಡ ಬರುವ ಮಾರ್ಚ್ ತಿಂಗಳಿನಿಂದ ಆರಂಭಿಸಲಾಗುವುದು. 2024-25 ನೇ ಸಾಲಿನಲ್ಲಿ ಗದಗ ಜಿಲ್ಲೆಯ 400 ಯುವಕ-ಯುವತಿಯರಿಗೆ ಉಚಿತ ಕೌಶಲ ತರಬೇತಿ ನೀಡಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ’ ಅಡಿ ನರಗುಂದದಲ್ಲಿ ಸಿ.ಎನ್.ಸಿ. ಪ್ರೊಗ್ರಾಮಿಂಗ್, ಸಿ.ಎನ್.ಸಿ. ಆಪರೇಟಿಂಗ್, ಕ್ಯಾಡ್-ಕ್ಯಾಮ್, ಎಲೆಕ್ಟ್ರಿಶಿಯನ್, ಮಶಿನಿಸ್ಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ವೃತ್ತಿಗಳಲ್ಲಿ ಉಚಿತ ಕೌಶಲ ತರಬೇತಿ ನೀಡಲಾಗುವುದು. ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ, ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ. ಜಿಟಿಟಿಸಿ ಈ ಕೌಶಲ ತರಬೇತಿಗಳನ್ನು ಪ್ರತಿ ತಿಂಗಳು ಆಯೋಜಿಸಲಿದೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲಿದೆ.
ಆಸಕ್ತರು ಜ‌. 19ರೊಳಗಾಗಿ ಜಿಟಿಟಿಸಿಯ ನರಗುಂದ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 7975762499 ಮತ್ತು 9902101010 ಸಂಪರ್ಕಿಸಬಹುದು.

‘ಸದ್ಯದಲ್ಲಿಯೇ ಬೋಧನಾ ಕೊಠಡಿಗಳು ಮತ್ತು ವಿದ್ಯಾರ್ಥಿನಿಲಯಗಳ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಸಂಪೂರ್ಣ ಕ್ಯಾಂಪಸ್ ನಿರ್ಮಾಣದ ನಂತರ ಜಿಟಿಟಿಸಿ ಕೇಂದ್ರದಲ್ಲಿ ಉದ್ಯೋಗಾಧಾರಿತ ತಾಂತ್ರಿಕ ಡಿಪ್ಲೊಮಾ ಕೋರ್ಸ್‍ಗಳನ್ನು ಆಯೋಜಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ಮಾರುತಿ ಭಜಂತ್ರಿ ಹೇಳಿದರು.

ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿ

ಪಟ್ಟಣದಲ್ಲಿ ಜಿಟಿಟಿಸಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ. ತಾಂತ್ರಿಕ ಹಾಗೂ ಅಲ್ಪಾವಧಿ ಕೈಗಾರಿಕಾ ತರಬೇತಿ ಆರಂಭಗೊಳ್ಳುತ್ತಿರುವುದು ಹರ್ಷದಾಯಕ. ಪೂರ್ಣ ಪ್ರಮಾಣದಲ್ಲಿ ಡಿಪ್ಲೊಮಾ ಕೋರ್ಸ್ ಬೇಗ ಆರಂಭವಾಗಬೇಕು- ಸಿದ್ದು ನಂದಿ ನರಗುಂದ, ನಾಗರಿಕರು

ನರಗುಂದ ದಲ್ಲಿ ನಿರ್ಮಾಣ ಗೊಂಡ ಕೈಗಾರಿಕಾ ತರಭೇತಿಯ ಜಿಟಿಟಿಸಿ ಕಟ್ಟಡ‌
ನರಗುಂದ ದಲ್ಲಿ ನಿರ್ಮಾಣ ಗೊಂಡ ಕೈಗಾರಿಕಾ ತರಭೇತಿಯ ಜಿಟಿಟಿಸಿ ಕಟ್ಟಡ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT