ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್‌: ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ- ಗ್ರಾಹಕರ ಪರದಾಟ

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸದ್ಯಕ್ಕಿರುವುದು ಇಬ್ಬರೇ ಸಿಬ್ಬಂದಿ
ಅಕ್ಷರ ಗಾತ್ರ

ನರೇಗಲ್:‌ ಪಟ್ಟಣದ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಸಿಬ್ಬಂದಿ ಕೊರತೆ ಪರಿಣಾಮ, ಗ್ರಾಹಕರು ಸಮರ್ಪಕ ಸೇವೆ ಲಭಿಸದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಅಂದಾಜು 25 ಸಾವಿರ ಜನಸಂಖ್ಯೆ ಹಾಗೂ ಸುತ್ತಮುತ್ತ ಇರುವ ಮಾರನಬಸರಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ಅಬ್ಬಿಗೇರಿ, ಹೊಸಳ್ಳಿ, ಕಳಕಾಪುರ, ನಿಡಗುಂದಿಕೊಪ್ಪ, ತೋಟಗಂಟಿ, ಕೋಚಲಾಪುರ, ದ್ಯಾಂಪುರ, ಬೂದಿಹಾಳ, ಮಲ್ಲಾಪುರ, ಸೇರಿದಂತೆ ವಿವಿಧ ಗ್ರಾಮಗಳ ಜನರು ನರೇಗಲ್‌ ಪಟ್ಟಣದ ಬ್ಯಾಂಕ್‌ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಇಲ್ಲಿನ ಶಾಖೆಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇರುವ ಕಾರಣ ಬ್ಯಾಂಕಿಂಗ್‌ ವ್ಯವಹಾರದ ವಿಳಂಬದಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಬ್ಯಾಂಕ್‌ನಲ್ಲಿ ಹಣಪಾವತಿ, ಹಿಂಪಡೆಯುವುದು, ಪಾಸ್‌ಬುಕ್‌ ವಿವರ ಮುದ್ರಣ, ಆಧಾರ್‌ ಜೋಡಣೆ, ಖಾತೆ ತೆರೆಯಲು ಅರ್ಜಿ ಸ್ವೀಕರಿಸಲು ಸಿಬ್ಬಂದಿ ಇಲ್ಲದೇ ಎಲ್ಲ ಕೌಂಟರ್‌ಗಳು ಖಾಲಿ, ಖಾಲಿಯಾಗಿ ಕಾಣುತ್ತಿವೆ. ಸದ್ಯ ಇರುವ ಇಬ್ಬರು ಸಿಬ್ಬಂದಿಯಲ್ಲಿ ಒಬ್ಬರು ಕ್ಯಾಶ್‌ ಕೌಂಟರ್‌ನಲ್ಲಿ ಹಾಗೂ ತಾತ್ಕಾಲಿಕ ವರ್ಗಾವಣೆ ಮೇಲೆ ಬಂದಿರುವ ಮತ್ತೊಬ್ಬರು ಬೆಳೆವಿಮೆ ಮಾಡಿಸುವಲ್ಲಿ ತೊಡಗಿದ್ದಾರೆ.

‘ದೊಡ್ಡ ಹೋಬಳಿಯಾಗಿದ್ದರೂ ಇಲ್ಲಿರುವುದು ಮಾತ್ರ ಎರಡೇ ಬ್ಯಾಂಕುಗಳು. ಅದರಲ್ಲೂ ಸಿಬ್ಬಂದಿ ಕೊರತೆ, ಕಂಪ್ಯೂಟರ್‌ ಸಮಸ್ಯೆ ಅಂದರೆ ಸ್ಥಳೀಯರು ತಮ್ಮ ಬ್ಯಾಂಕಿಂಗ್ ವಹಿವಾಟಿಗಾಗಿ ಗದಗ, ರೋಣ, ಗಜೇಂದ್ರಗಡಕ್ಕೆ ಹೋಗುತ್ತಿದ್ದಾರೆ. ಸೆಂಟ್ರಲ್‌ ಬ್ಯಾಂಕ್‌ನಲ್ಲಿ ಮೊದಲಿನಿಂದಲೂ ತೊಂದರೆ ಇದೆ. ಅದರಲ್ಲೂ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಇರುತ್ತದೆ. ಗ್ರಾಮೀಣ ಭಾಗದ ಗ್ರಾಹಕರಿಗಾಗಿ ಕನ್ನಡ ಗೊತ್ತಿರುವ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

‘ಕೈಗಾರಿಕಾ ಘಟಕ ಸ್ಥಾಪನೆಗೆ ಡಿ.ಡಿ ತೆಗೆಸಲು ಎರಡು ದಿನಗಳ ಅಲೆದಿದ್ದೇವೆ. ಸರ್ವರ್‌ ಸಮಸ್ಯೆ ಎಂದು ಕಾರಣ ನೀಡಿದ್ದಾರೆ. ಪ್ರಿಂಟರ್‌ ಸಮಸ್ಯೆ ಎಂದು ಡಿ.ಡಿ ಮೇಲೆ ಪೆನ್‌ನಿಂದ ಬರೆದುಕೊಟ್ಟಿದ್ದಾರೆ’ ಎಂದು ಶಿವು ಕೊಪ್ಪದ, ಅಲ್ಲಾಬಕ್ಷಿ ನದಾಫ್‌ ಹೇಳಿದರು.

‘ಜನರ ಈ ಪರದಾಟ ತಪ್ಪಿಸಿ ಬ್ಯಾಂಕಿಂಗ್‌ ವಹಿವಾಟು ಸರಿಯಾಗಿ ನಡೆಯಲು ಅಗತ್ಯವಿರುವಷ್ಟು ಸಿಬ್ಬಂದಿಯನ್ನು ತ್ವರಿತವಾಗಿ ನಿಯೋಜಿಸಬೇಕು’ ಎಂದು ಸ್ಥಳೀಯ ಉದ್ಯಮಿಗಳು, ವ್ಯಾಪಾರಸ್ಥರು, ಆಸ್ಪತ್ರೆ ಹಾಗೂ ಶಾಲಾ ಕಾಲೇಜು ನಿರ್ದೇಶಕರು ಆಗ್ರಹಿಸಿದ್ದಾರೆ.

ವ್ಯಾಪಾರ ಬಿಟ್ಟು ಬ್ಯಾಂಕಿಗೆ ಹೋದಾಗ ಸಿಬ್ಬಂದಿ ಕೊರತೆಯಿಂದ ಸೇವೆ ಸಿಗದೆ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ
ಅಂದಪ್ಪ ಕುಂಬಾರ, ಬೀದಿಬದಿ ವ್ಯಾಪರಿ

ಕಳೆದ ಬಾರಿ ಪಟ್ಟಣ ಪಂಚಾಯ್ತಿ ವತಿಯಿಂದ ಬೀದಿಬದಿ ವ್ಯಾಪರಿಗಳು ಕಿರು ಸಾಲಕ್ಕೆ 17 ಅರ್ಜಿಗಳನ್ನು ಕಳುಹಿಸಿದ್ದರೆ ಮೂವರಿಗೆ ಮಾತ್ರ ಸಾಲ ಮಂಜೂರಾಗಿದೆಕುಮಾರಸ್ವಾಮಿ ಕೋರಧಾನ್ಯಮಠ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT