ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್‌ | ಜಿಂಕೆಗಳಿಂದ ಬೆಳೆ ರಕ್ಷಿಸಲು ವಿವಿಧ ರಾಜಕೀಯ ಪಕ್ಷಗಳ ಧ್ವಜ ಬಳಕೆ

Published 8 ಆಗಸ್ಟ್ 2023, 18:29 IST
Last Updated 8 ಆಗಸ್ಟ್ 2023, 18:29 IST
ಅಕ್ಷರ ಗಾತ್ರ

ನರೇಗಲ್: ಹೋಬಳಿಯ ವ್ಯಾಪ್ತಿಯಲ್ಲಿ ರೈತರ ಹೊಲದಲ್ಲಿ ಬೆಳೆದು ನಿಂತಿರುವ ಬೆಳೆಗಳ ನಡುವೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌, ಎಎಪಿ ರಾಜಕೀಯ ಪಕ್ಷದ ಧ್ವಜಗಳು ರಾರಾಜಿಸುತ್ತಿವೆ. ಜಿಂಕೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಪಕ್ಷದ ಧ್ವಜಗಳನ್ನು ಬಳಕೆ ಮಾಡಿಕೊಂಡು ಬೆದರು ಗೊಂಬೆಗೆ ಕಟ್ಟುವ ಮೂಲಕ ವಿನೂತನ ಉಪಾಯವನ್ನು ರೈತರು ಕಂಡುಕೊಂಡಿದ್ದಾರೆ.

ಜಿಲ್ಲೆಗೆ ವಿಶಾಲವಾದ ಕಪ್ಪು ಮತ್ತು ಕೆಂಪು ಮಣ್ಣಿನ (ಎರೆ ಮತ್ತು ಮಸಾರಿ) ಭೂಮಿಯನ್ನು ನರೇಗಲ್‌ ಹೋಬಳಿ ಹೊಂದಿದೆ. ಅದರಲ್ಲೂ ಮಳೆಯಾಶ್ರಿತ ಜಮೀನುಗಳು ಹೆಚ್ಚಾಗಿ ಇರುವ ಕಾರಣ ಕೃಷಿ ಚಟುವಟಿಕೆಗಳು ಇದ್ದಾಗ ಮಾತ್ರ ಹೊಲಗಳಲ್ಲಿ ರೈತರು ಕಾಣ ಸಿಗುತ್ತಾರೆ. ಉಳಿದ ಅವಧಿಯಲ್ಲಿ ಮನುಷ್ಯರ ಸುಳಿವು ಇರುವುದಿಲ್ಲ.

ಜತೆಗೆ ಇಲ್ಲಿ ಕೃಷಿ ಹೊಂಡಗಳು, ಹಳ್ಳಗಳು ಹೆಚ್ಚು ಇರುವುದರಿಂದ ಸದಾ ನೀರಿನ ಲಭ್ಯತೆ ಇರುತ್ತದೆ. ಹೀಗಾಗಿ ಈ ಭಾಗದಲ್ಲಿ ಜಿಂಕೆ, ಮೊಲಗಳ ವಾಸಕ್ಕೆ ಅನುಕೂಲಕರ ವಾತಾವರಣವಿದೆ. ಉಳಿದೆಡೆಗಿಂತ ಇಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿರುತ್ತದೆ. ಹಿಂಡು ಹಿಂಡಾಗಿ ಹೊಲಕ್ಕೆ ನುಗ್ಗುವ ಬೆಳೆದು ನಿಂತಿರುವ ಹೆಸರು, ಜೋಳ, ತೊಗರಿ ಬೆಳೆಗಳನ್ನು ನಿಮಿಷಗಳಲ್ಲಿ ತಿಂದು ಮುಗಿಸುತ್ತಿವೆ.

ಜಿಂಕೆ ಹಾವಳಿ ತಡೆಗೆ ಹಲವು ಪ್ರಯೋಗಗಳನ್ನು ನಡೆಸಿ ಬೇಸೆತ್ತ ರೈತರು ಕಡಿಮೆ ಖರ್ಚಿನ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸದಸ್ಯರು ಬಳಸಿ ಎಸೆದ ಪಕ್ಷದ ಧ್ವಜ, ಬ್ಯಾನರ್‌ಗಳೇ ನೆರವಿಗೆ ಬಂದಿವೆ.

ಯಾವುದೇ ಪಕ್ಷದ ಮೇಲಿನ ಅಭಿಮಾನದಿಂದ ಹೊಲದಲ್ಲಿ ಧ್ವಜವನ್ನು ಬೆದರುಗೊಂಬೆಗೆ ಕಟ್ಟಿಲ್ಲ. ಇದರ ಸದ್ದಿಗೆ ಜಿಂಕೆಗಳು ಜಮೀನಿನತ್ತ ಬರಲು ಹೆದರುತ್ತವೆ. ಕಷ್ಟಪಟ್ಟು ಬೆಳೆದ ಬೆಳೆ ಸಂರಕ್ಷಣೆಯಾದರೆ ಸಾಕು.
ಮುದಕಪ್ಪ ಗಾಣದಾಳ, ರೈತ

ಅಬ್ಬಿಗೇರಿ, ನರೇಗಲ್‌, ದ್ಯಾಂಪುರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಬೂದಿಹಾಳ, ಜಕ್ಕಲಿ, ತೋಟಗಂಟಿ, ಮಲ್ಲಾಪುರ, ದ್ಯಾಂಪುರ, ಹೊಸಳ್ಳಿ ಮಾರ್ಗದ ಹೊಲಗಳಲ್ಲಿ ರಾಜಕೀಯ ಪಕ್ಷಗಳ ಬೆದರುಗುಂಬೆಗಳು, ಕಟ್ಟಿಗೆಗೆ ಕಟ್ಟಿದ ಪಕ್ಷದ ಧ್ವಜಗಳು ಕಾಣಿಸುತ್ತವೆ. ಹೀಗಾಗಿ ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಧ್ವಜಗಳೇ ಬೆಳೆ ಕಾಯುತ್ತಿವೆ.

ವೇಗವಾಗಿ ಗಾಳಿ ಬೀಸಿದಾಗ ಈ ಧ್ವಜಗಳು ಒಂದೇ ಸಮನೆ ಸದ್ದು ಮಾಡುತ್ತದೆ. ಈ ಸದ್ದಿಗೆ ಬೆದರುವ ಜಿಂಕೆಗಳು ಹೊಲದತ್ತ ಸುಳಿಯುವುದಿಲ್ಲ. ಅಷ್ಟೇ ಅಲ್ಲದೆ ಪಕ್ಷದ ಧ್ವಜಗಳು ಬಣ್ಣಬಣ್ಣದ್ದಾಗಿರುವ ಕಾರಣ ಪ್ರಾಣಿಗಳು ಹೆದರುವ ಸಂಭವ ಇರುತ್ತದೆ ಎಂಬುವುದು ರೈತರ ನಂಬಿಕೆಯಾಗಿದೆ. ಗ್ರಾಮಗಳಲ್ಲಿ ಈ ಪ್ರಯೋಗ ನಡೆದಿದ್ದು, ಜಿಂಕೆ ಹಾವಳಿಗೆ ತುಸು ಕಡಿವಾಣ ಬಿದ್ದಂತಾಗಿದೆ.

ನರೇಗಲ್‌ ಹೋಬಳಿಯ ಕರಿಯಮ್ಮನ ಕಲ್ಲು ವ್ಯಾಪ್ತಿಯ ಹೊಲದಲ್ಲಿ ಬೆದರುಗೊಂಬೆಯ ಕೈಯಲ್ಲಿ ನೆಟ್ಟಿರುವ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಧ್ವಜ ಹಿಡಿದಿರುವ ಬೆದರು ಬೊಂಬೆ
ನರೇಗಲ್‌ ಹೋಬಳಿಯ ಕರಿಯಮ್ಮನ ಕಲ್ಲು ವ್ಯಾಪ್ತಿಯ ಹೊಲದಲ್ಲಿ ಬೆದರುಗೊಂಬೆಯ ಕೈಯಲ್ಲಿ ನೆಟ್ಟಿರುವ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಧ್ವಜ ಹಿಡಿದಿರುವ ಬೆದರು ಬೊಂಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT