ಗುರುವಾರ , ಅಕ್ಟೋಬರ್ 6, 2022
23 °C
11ನೇ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮುರುಗೇಶ ಶಿವಪೂಜೆ

ವಿತರಕರು ಪತ್ರಿಕಾರಂಗದ ಜೀವನಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಪತ್ರಿಕೆಗಳ ಮಾಲೀಕರಷ್ಟೇ ಪತ್ರಿಕಾ ವಿತರಕರು ಕೂಡ ಪ್ರಮುಖರಾಗಿದ್ದು, ಪತ್ರಿಕಾರಂಗದ ಜೀವನಾಡಿ ಎನಿಸಿದ್ದಾರೆ. ಅಸಂಘಟಿತರಾಗಿ ದುಡಿಯುತ್ತಿರುವ ಪತ್ರಿಕಾ ವಿತರಕರಿಗೆ ಇ–ಶ್ರಮ್‌ ಕಾರ್ಡ್‌ ವಿತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬೆಳಗಾವಿಯ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜೆ ತಿಳಿಸಿದರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ನಡೆದ 11ನೇ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 

‘ರಾಜ್ಯದಲ್ಲಿ ಕನಿಷ್ಠ 15ರಿಂದ 20 ಸಾವಿರ ಮಂದಿಯಷ್ಟು ಪತ್ರಿಕಾ ವಿತರಕರು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಪತ್ರಿಕಾ ವಿತರಕರೇ ಪ್ರತಿಕೆಗಳಿಗೆ ವರದಿಗಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟ ಪತ್ರಕರ್ತರ ಸಂಘ ರೂಪಿಸಿದ ಯೋಜನೆಗಳ ಫಲವನ್ನು ಪತ್ರಿಕಾ ವಿತರಕರು ಕೂಡ ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ. ಸಂಘದಿಂದ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗಿದ್ದು, ವಿಮೆ ಮೊತ್ತವನ್ನು ₹4 ಲಕ್ಷಕ್ಕೆ ಹೆಚ್ಚಿಸುವ ಯೋಚನೆ ಇದೆ’ ಎಂದು ಅವರು ತಿಳಿಸಿದರು.

‘ಕರ್ನಾಟಕ ಪತ್ರಕರ್ತರ ಸಂಘದ ಜತೆಗೆ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘವನ್ನು ಸಂಯೋಜಿತಗೊಳಿಸುವ ಯೋಚನೆ ಕೂಡ ಇದ್ದು, ಆ ಪ್ರಕ್ರಿಯೆ ಪೂರ್ಣಗೊಂಡರೇ ಪತ್ರಕರ್ತರ ಸಂಘದವರು ಪಡೆಯುವ ಎಲ್ಲ ಯೋಜನೆಗಳ ಲಾಭ ಪಡೆಯಲು ಅರ್ಹರಾಗುತ್ತಾರೆ’ ಎಂದು ಅವರು ಹೇಳಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗುರು ಕಂದಗಲ್‌ ಮಾತನಾಡಿ, ‘ಪತ್ರಿಕಾ ವಿತರಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಹಾಗೂ ಕೆಲವೊಂದು ಸವಲತ್ತುಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪತ್ರಿಕೆ ಹಂಚುವ ಹುಡುಗರಿಗೆ ಅಪಘಾತ ಆದರೆ ಚಿಕಿತ್ಸೆಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಎಲ್ಲರೂ ಸಂಘಕ್ಕೆ ಸದಸ್ಯರಾಗುವ ಮೂಲಕ ಸಂಘವನ್ನು ಬಲಪಡಿಸಬೇಕು’ ಎಂದು ಹೇಳಿದರು.

ಪತ್ರಿಕಾ ವಿತರಕರ ಸಂಘದ ಸದಸ್ಯ ಸತೀಶ್‌ ಮಾತನಾಡಿ, ‘ಗಡಿ ಕಾಯುವ ಯೋಧರಂತೆ ಪತ್ರಿಕಾ ವಿತರಕರು ಕೂಡ ಗಾಳಿ, ಮಳೆ ಚಳಿ ಎನ್ನದೇ ಎಲ್ಲ ಕಾಲದಲ್ಲೂ ನಿರಂತರವಾಗಿ ಕೆಲಸ ನಿರ್ವಹಿಸುತ್ತಾರೆ. ಪತ್ರಿಕೆಗಳ ಮಾಲೀಕರು ಪತ್ರಿಕಾ ವಿತರಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ್‌ ಕುದರಿಮೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಚ. ಅಂಗಡಿ ಜಾನಪದ ಗೀತೆ ಹಾಡಿದರು. ಸಂಗಮೇಶ ಮೆಣಸಗಿ, ಶಿವಪುತ್ರಯ್ಯ ಹಿರೇಮಠ, ಮಲ್ಲಿಕಾರ್ಜುನ ಕಳಸಾಪುರ, ನಾಗಪ್ಪ ಮ್ಯಾಗೇರಿ, ಹನಮಂತಪ್ಪ ಬೇರಗಣ್ಣವರ, ವೀರಬಸಯ್ಯ ವಿರಕ್ತಮಠ, ಸಿದ್ದು ಮಡಿವಾಳರ ಇದ್ದರು.

ಎನ್‌.ಭಾಂಡಗೆ, ರಮೇಶ್‌ ಭಜಂತ್ರಿ, ಸಂಗಮೇಶ ಮೆಣಸಗಿ, ಶಿಪುತ್ರಯ್ಯ ಹಿರೇಮಠ, ಮಲ್ಲಿಕಾರ್ಜುನ ಕಳಸಾಪುರ, ಗೋವಿಂದರಾಜ ಹೆಗ್ಗಾಳ, ನಾಗಪ್ಪ ಮ್ಯಾಗೇರಿ, ಹನಮಂತಪ್ಪ ಬೇರಗಣ್ಣವರ, ವೀರಣ್ಣ ಅಂಗಡಿ, ಕಿಶನ್‌ ಮೇರವಾಡೆ,, ಮುರುಗೇಶ ಶಿವಪೂಜೆ, ಸತೀಶ್‌ ಅವರನ್ನು ಸನ್ಮಾನಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.