ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತರಕರ ಸಂಘಕ್ಕೆ ನಿವೇಶನ ಒದಗಿಸಿ

ಪತ್ರಿಕಾ ವಿತರಕರ ದಿನಾಚರಣೆಯಯಲ್ಲಿ ಸಂಘದ ಅಧ್ಯಕ್ಷ ಶಂಕರ ಕಂದಗಲ್ಲ
Last Updated 4 ಸೆಪ್ಟೆಂಬರ್ 2021, 16:27 IST
ಅಕ್ಷರ ಗಾತ್ರ

ಗದಗ: ‘ನಾವು ಪತ್ರಿಕೆ ವಿತರಕರಾದರೂ ಪತ್ರಿಕಾ ಧರ್ಮ ಕಾಪಾಡುವ ಬದ್ಧತೆ ಹೊಂದಿದ್ದೇವೆ. ಪತ್ರಿಕಾ ವಿತರಕರಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು’ ಎಂದು ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಕರ ಕಂದಗಲ್ಲ ಹೇಳಿದರು.

ನಗರದ ರೋಟರಿ ಐ ಕೇರ್‌ ಸೆಂಟರ್‌ನಲ್ಲಿ ಶನಿವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂಘದ ಸದಸ್ಯರ ಚಟುವಟಿಕೆಗಳಿಗೆ ಒಂದು ಸ್ವಂತ ಕಚೇರಿ ಹೊಂದುವ ಉದ್ದೇಶ ಇದ್ದು, ಜಿಲ್ಲಾಡಳಿತ ನಿವೇಶನ ಒದಗಿಸಲು ಕ್ರಮವಹಿಸಬೇಕು. ಈ ಸಂಬಂಧ ನಾವು ನಗರಾಭಿವೃದ್ಧಿ ಪ್ರಾಧಿಕಾರವನ್ನೂ ಸಂಪರ್ಕಿಸಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ‘ಸುದ್ದಿ ಸಂಗ್ರಹದಿಂದ ಹಿಡಿದುಒಂದು ಪತ್ರಿಕೆಯನ್ನು ಓದುಗರಿಗೆ ತಲುಪಿಸುವರೆಗಿನ ಕಾರ್ಯ ಒಂದು ಸಾಂಘಿಕ ಪ್ರಯತ್ನ. ಇದರಲ್ಲಿ ಪತ್ರಿಕಾ ವಿತರಕರ ಪಾತ್ರವೂ ಮಹತ್ವದ್ದು’ ಎಂದು ಹೇಳಿದರು.

‘ಪತ್ರಿಕಾ ಕ್ಷೇತ್ರದಲ್ಲಿ ಪರಸ್ಪರ ಅವಲಂಬನೆ ಹೆಚ್ಚು. ನನ್ನಿಂದಲೇ ಎಂಬ ಅಹಂಕಾರ ಯಾರಿಗೂ ಇರಬಾರದು. ಸಂಘವು ಸಂಘದ ಸದಸ್ಯರ ಹಿತ ಕಾಪಾಡಲು ಬದ್ಧವಾಗಿರಬೇಕು’ ಎಂದು ಸಲಹೆ ನೀಡಿದರು.

ಯುವ ಮುಖಂಡ ಕಿಶನ್ ಮೇರವಾಡೆ ಮಾತನಾಡಿ, ‘ಪತ್ರಿಕೆ ಹಂಚುವ ಹುಡುಗರು ಕಷ್ಟ ಸುಖಗಳ ಅರಿವಿದೆ. ಪ್ರತಿನಿತ್ಯ ನಿಷ್ಠೆಯಿಂದ ದುಡಿಯುವ ವಿತರಕರಿಗೆ ಸರ್ಕಾರ ಬ್ಯಾಟರಿ ಚಾಲಿತ ವಾಹನ ನೀಡಬೇಕು. ಅದನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ಯುವ ಉದ್ಯಮಿ ರಾಜು ಮೃತ್ಯುಂಜಯ ಸಂಕೇಶ್ವರ ಮಾತನಾಡಿ, ‘ಕೋವಿಡ್ ಸಂಕಷ್ಟದಲ್ಲೂ ಜನತೆಗೆ ಮಾಹಿತಿ ಮನೆಬಾಗಿಲಿಗೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಕಾರ್ಯ ಅತ್ಯಂತ ಮಹತ್ವದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ವಿಶ್ವಾಸಾರ್ಹವಲ್ಲ. ಪತ್ರಿಕೆಯಲ್ಲಿನ ಮಾಹಿತಿ ಮಾತ್ರ ನಿಖರವಾದುದು’ ಎಂದು ಹೇಳಿದರು.

ಶಂಕರ ಕುದರಿಮೋತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೆಗಳೇ ನಮ್ಮ ಅನ್ನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.

ಅಜಿತ ಹೊಂಬಾಳಿ, ಟಿ.ಎನ್. ಭಾಂಡಗೆ ವೇದಿಕೆಯಲ್ಲಿದ್ದರು.

ಸಂಘದ ಕಾರ್ಯದರ್ಶಿ ಮಹಾದೇವ ಹದ್ದಣ್ಣವರ ಸ್ವಾಗತಿಸಿದರು. ವಿರಕ್ತಮಠ ನಿರೂಪಿಸಿದರು. ಸಿದ್ದು ಮಡಿವಾಳರ, ವಿನಾಯಕ ಬದಿ, ಮಂಜುನಾಥ ಕುಬನೂರ, ದಶರಥ ಹೊನ್ನಳ್ಳಿ, ಜೋಶಿ, ಈರಣ್ಣ ಮಳೇಕರ ಸೇರಿದಂತೆ ಎಲ್ಲ ಪತ್ರಿಕಾ ವಿತರಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT