ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಸಾರ್ವಜನಿಕರಿಂದ ಸರಣಿ ಸತ್ಯಾಗ್ರಹ

ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಆಗ್ರಹ
Last Updated 9 ನವೆಂಬರ್ 2021, 4:43 IST
ಅಕ್ಷರ ಗಾತ್ರ

ಶಿರಹಟ್ಟಿ: ಇ-ಸ್ವತ್ತು ಉತಾರ ಹೊಂದಿರುವವರಿಗೆ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪರವಾನಗಿ ನೀಡುವಂತೆ ಆಗ್ರಹಿಸಿ 70ಕ್ಕೂ ಅಧಿಕ ಗ್ರಾಮಸ್ಥರು ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಎದುರು ಸತ್ಯಾಗ್ರಹ ನಡೆಸಿದರು.

ಪ್ರತಿಭಟನೆ ಕೈಗೊಂಡ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರದ ಹಿನ್ನಲೆಯಲ್ಲಿ ಹತಾಶರಾದ ಪ್ರತಿಭಟನಾಕಾರರು ಸೋಮವಾರದ ಒಳಗೆ ಕಟ್ಟಡ ಪರವಾನಗಿ ನೀಡದಿದ್ದರೆ ಸರಣಿ ಸತ್ಯಾಗ್ರಹ ನಡೆಸುವುದಾಗಿ ಈ ಮೊದಲೇ ಎಚ್ಚರಿಸಿದ್ದರು. ಅದರಂತೆ ಗ್ರಾಮ ಪಂಚಾಯ್ತಿಗೆ ಬಂದ ಸಾರ್ವಜನಿಕರು ಪರವಾನಗಿ ಸಿಗದ ಕಾರಣ ಗ್ರಾಮ ಪಂಚಾಯ್ತಿ ಎದುರು ಪೆಂಡಾಲ್‌ ಹಾಕುವುದರೊಂದಿಗೆ ಸರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಕಾರಣ ನ್ಯಾಯಾಲಯದ ಆದೇಶದಂತೆ ಲೋಕ ಅದಾಲತ್‌ನಲ್ಲಿ ಮಾಲೀಕ ಮತ್ತು ನಿವೇಶನ ಹೊಂದಿದವರ ಮಧ್ಯೆ ರಾಜಿ ಸಂಧಾನ ನಡೆಸಿ 2016-17ರಲ್ಲಿ ಅಂದಿನ ಪಿಡಿಒ ನಿವೇಶನ ಹೊಂದಿದ ಬಹುತೇಕರಿಗೆ ಇ-ಸ್ವತ್ತು ಉತಾರ ನೀಡಿದ್ದಾರೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಉಳಿದ ಫಲಾನುಭವಿಗಳಿಗೆ ಲೋಕ ಅದಾಲತ್‌ ಆದೇಶದಂತೆ ಇ-ಸ್ವತ್ತು ಉತಾರ ನೀಡಲು ನಿರಾಕರಿಸುತ್ತಿದ್ದು, ಕಟ್ಟಡ ಪರವಾನಗಿ ನೀಡುತ್ತಿಲ್ಲ. ಆದ್ದರಿಂದ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫಲಾನುಭವಿಗಳು ಆರೋಪಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ಸರಣಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ಪ್ರತಿಭಟನಕಾರರು, ‘ನಮಗೆ ನ್ಯಾಯ ಸಿಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲರೂ ಮಂಗಳವಾರ ಪೊಲೀಸ್‌ ಠಾಣೆಗೆ ಬನ್ನಿ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಪೊಲೀಸರು ಪ್ರತಿಭಟನಕಾರರಿಗೆ ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT