ಶನಿವಾರ, ಜನವರಿ 25, 2020
29 °C
ಸೋಮೇಶ್ವರನ ಸನ್ನಿಧಿಯಲ್ಲಿ ಮೂರು ದಿನ ಸಂಗೀತ, ನೃತ್ಯ, ಕಲಾ ವೈಭವ

ಪುಲಿಗೆರೆ ಉತ್ಸವ: ಮನಸೂರೆಗೊಂಡ ಶಹನಾಯಿ ವಾದನ

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಪೂರ್ವ ದಿಗಂತದಲ್ಲಿ ಹೊಂಬಣ್ಣ ಚೆಲ್ಲುತ್ತಾ ಉದಯಿಸುತ್ತಿದ್ದ ಸೂರ್ಯ. ಬಾನಂಗಳದಲ್ಲಿ ಹಕ್ಕಿಗಳ ಹಿಂಡು. ಎಲ್ಲೆಡೆ ಪ್ರಶಾಂತ ವಾತಾವರಣ. ಇದೇ ಸಮಯದಲ್ಲಿ ತಂಗಾಳಿಯೊಡನೆ ತೇಲಿ ಪ್ರೇಕ್ಷಕರ ಕಿವಿಗೆ ಮಧುರವಾಗಿ ಅಪ್ಪಳಲಿಸುತ್ತಿದ್ದ ಶಹನಾಯಿಯ ಮಾಧುರ್ಯ.

ಸಂಗೀತದ ಈ ರಸಘಳಿಗೆಗೆ ಸಾಕ್ಷಿಯಾಗಿದ್ದು ಸೋಮೇಶ್ವರ ದೇವಸ್ಥಾನದ ಆವರಣ. ಶುಕ್ರವಾರ ಬೆಳಿಗ್ಗೆ 6:15ಕ್ಕೆ ಉದ್ಘಾಟನೆಗೊಂಡ ಪುಲಿಗೆರೆ ಉತ್ಸವದ ಮೊದಲ ದಿನದ ಮೊದಲ ಕಾರ್ಯಕ್ರಮದಲ್ಲಿ ಯುವ ಕಲಾವಿದ ಮಂಜುನಾಥ ಭಜಂತ್ರಿ ಶಹನಾಯಿ ನುಡಿಸಿ, ಸಂಗೀತ ಪ್ರೇಮಿಗಳು ಮನಸೂರೆಗೊಂಡರು.

ನಟ್‍ ಭೈರವ ರಾಗದೊಂದಿಗೆ ಶಹನಾಯಿ ನುಡಿಸಲು ಪ್ರಾರಂಭಿಸಿದ ಮಂಜುನಾಥ ಅವರು, ಅದರಲ್ಲಿ ಸಭಿಕರನ್ನು ಮಂತ್ರಮುಗ್ದಗೊಳಿಸಿದರು. ನಂತರ ರಾಗ ಬನಾರಸಿ ದೂನ್‍ನಲ್ಲಿಯೂ ತಮ್ಮ ಪ್ರತಿಭೆ ಮೆರೆದರು. ಕೊನೆಯಲ್ಲಿ ಸನಾದಿ ಅಪ್ಪಣ್ಣ ಚಲನಚಿತ್ರದ ‘ಕರೆದರೂ ಕೇಳದೆ’ ಹಾಡಿಗೆ ನುಡಿಸಿದ ಶಹನಾಯಿ ಉಸ್ತಾದ್ ಬಿಸ್ಮಿಲ್ಲಾಖಾನ್‍ರನ್ನು ಮತ್ತೆ ನೆನೆಯುವಂತೆ ಮಾಡಿತು. ತಬಲಾ ಸಾಥ್ ನೀಡಿದ ದೇಸಾಯಿ ಕಲ್ಲೂರಿನ ಮಲ್ಲೇಮಲ್ಲೇಶ ಅವರು ತಮ್ಮ ಕೈಚಳಕದಿಂದ ಗಮನ ಸೆಳೆದರು. ಶ್ರೀಧರ ಭಜಂತ್ರಿ ಅವರು ಸಾಥ್ ನೀಡಿದರು.

ಯುವ ಕಲಾವಿದೆ ರಾಜೇಶ್ವರಿ ಪಾಟೀಲ ಹಿಂದೂಸ್ತಾನಿ ಗಾಯನದ ಮೂಲಕ ಮೋಡಿ ಮಾಡಿದರು. ರಾಗ ಬಿಲಾಸ್‍ಕಾನ್ ಥೋಡಿಯಲ್ಲಿ ಬಡಾಕ್ಯಾಲ್ ಗಾಯನ ಪ್ರಸ್ತುತಪಡಿಸಿದ ಅವರು, ಧ್ವನಿ ಏರಿಳಿತದ ಮೂಲಕ ತಾವೊಬ್ಬ ಪರಿಪೂರ್ಣ ಕಲಾವಿದೆ ಎಂಬುದನ್ನು ಸಾಬೀತು ಮಾಡಿದರು.

ನಂತರ ಸುಗಮ ಸಂಗೀತಕ್ಕೆ ಮರಳಿದ ಅವರು ಗಜಮುಖನೇ ಜಯತು ಗಣನಾಥನೇ ಭಜನೆಯನ್ನು ಹಾಡಿ ನೆರೆದಿದ್ದ ಪ್ರೇಕ್ಷಕರಲ್ಲಿ ಭಕ್ತಿರಸ ಉಕ್ಕಿಸಿದರು. ನಂತರ ಪುರಂದರದಾಸರ ಬೇವು ಬೆಲ್ಲದೊಳಿಲೇನು ಫಲ, ಹಾವಿಗೆ ಹಾಲೆರೆದರೇನು ಫಲ, ಮತ್ತು ಚರಣ ಕಮಲದಲ್ಲಿ ನಮಿಸಿ ಬೇಡಿಕೊಳ್ಳುವೆನು ದೇವಾ ಎಂಬ ಭಾವಗೀತೆಯನ್ನೂ ಕೊನೆಯಲ್ಲಿ ಕನಕದಾಸರ ರಾಮ ಗೋವಿಂದ ಹರೇ ಹರೇ ಹಾಡನ್ನು ಹಾಡಿದರು.

ಉತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಇಸ್ರಾಜ್ ವಾದನದಲ್ಲಿ ಸಾಥ್ ನೀಡಿದ ಡಾ.ಅರುಣಕುಮಾರ ಮುನೇನ್ನಿ ಅವರ ಪ್ರತಿಭೆಗೆ ಎಲ್ಲರೂ ತಲೆದೂಗಿದರು. ಹಿರಿಯ ಕಲಾವಿದ ಅಲ್ಲಮಪ್ರಭು ಕಡಕೋಳರ ತಬಲಾ ಸಾಥ್ ಅಮೋಘವಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು