ಶುಕ್ರವಾರ, ಆಗಸ್ಟ್ 19, 2022
25 °C
ಕಟ್ಟಿಕೊಂಡ ಚರಂಡಿಗಳು; ರಸ್ತೆ ಮೇಲೆ ಚೆಲ್ಲಾಡಿದ ಚರಂಡಿ ತ್ಯಾಜ್ಯ

ಗದಗ: ಸಾಧಾರಣ ಮಳೆಗೆ ನಗರ ಅಸ್ತವ್ಯಸ್ತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯ ವಿವಿಧೆಡೆ ಶನಿವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಉತ್ತಮ ಮಳೆ ಸುರಿಯಿತು. ಗದಗ–ಬೆಟಗೇರಿ ಅವಳಿ ನಗರದಲ್ಲಿ ಮಳೆ ಸಾಧಾರಣವಾಗಿ ಸುರಿದರೂ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದಲ್ಲಿ ಮಧ್ಯಾಹ್ನ 12ಕ್ಕೆ ತುಂತುರು ಮಳೆ ಆರಂಭಗೊಂಡಿತು. ಬಳಿಕ ಬಿರುಸು ಪಡೆದುಕೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಸಮಯ ಜೋರಾಗಿ ಸುರಿಯಿತು. ನಂತರ, ಬಿಡುವು ನೀಡಿತು. ಸಂಜೆಯ ನಂತರ ಮಳೆ ಬಿಟ್ಟು ಬಿಟ್ಟೂ ಸುರಿಯಿತು. ಇಡೀದಿನ ವಾತಾವರಣ ತಂಪಾಗಿತ್ತು.

ನಗರದ ಬಹುತೇಕ ಚರಂಡಿಗಳು ಅವ್ಯವಸ್ಥೆಯಿಂದ ಕೂಡಿವೆ. ಕಸ ತುಂಬಿಕೊಂಡಿದ್ದರಿಂದ ಎಲ್ಲ ಚರಂಡಿಗಳು ಕಟ್ಟಿಕೊಂಡಿವೆ. ಹಾಗಾಗಿ, ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ರಸ್ತೆ ಮೇಲೆ ಕೊಳಚೆ ನೀರು ಹರಿಯಿತು. ಮಳೆ ನಿಂತ ನಂತರ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜೋರಾಗಿ ಸಾಗುವಾಗ ಆ ನೀರು ಪಾದಚಾರಿಗಳ ಬಟ್ಟೆಗೆ ಸಿಡಿಯಿತು. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳೆಲ್ಲವೂ ಕೆಂಪು ನೀರಿನಿಂದ ತುಂಬಿ ಹೋಗಿದ್ದವು. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ನಗರದ ಕೆಲವೆಡೆ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಸವನ್ನೆಲ್ಲಾ ರಸ್ತೆ ಬದಿಗೆ ಎತ್ತಿ ಹಾಕಲಾಗಿದೆ. ಮಧ್ಯಾಹ್ನ ಸುರಿದ ಮಳೆಯು ಚರಂಡಿಯ ಕೊಳಕು ತ್ಯಾಜ್ಯವನ್ನೆಲ್ಲಾ ರಸ್ತೆಗೆ ತಂದು ಬಿಟ್ಟಿತ್ತು. ಇದರಿಂದಾಗಿ ಆ ಪ್ರದೇಶದ ತುಂಬ ಕೆಟ್ಟ ವಾಸನೆ ತುಂಬಿಕೊಂಡಿತ್ತು.

ಜಿಲ್ಲೆ ಆಗಿ ಎರಡು ದಶಕಗಳು ಕಳೆದರೂ ಮೂಲಸೌಲಭ್ಯ ಕಲ್ಪಿಸಲು ಕಾಳಜಿ ತೋರದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತವನ್ನು ಬೈದುಕೊಂಡು ಜನತೆ ಮುಂದೆ ಸಾಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು