ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಸಮಸ್ಯೆಗೆ ಜಲಸಾಕ್ಷರತೆಯೇ ಪರಿಹಾರ; ರಾಜೇಂದ್ರಸಿಂಗ್‌

Last Updated 2 ಏಪ್ರಿಲ್ 2019, 13:36 IST
ಅಕ್ಷರ ಗಾತ್ರ

ಗದಗ: ‘ಜಲ ಸಾಕ್ಷರತೆಯ ಮೂಲಕವೇ ದೇಶವನ್ನು ಬರ ಮುಕ್ತಗೊಳಿಸಲು ಸಾಧ್ಯ’ಎಂದು ರಾಜಸ್ತಾನದ ಜಲತಜ್ಞ ರಾಜೇಂದ್ರಸಿಂಗ್‌ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೇಶದ 13 ರಾಜ್ಯಗಳ 327 ಜಿಲ್ಲೆಗಳು ಬರಪೀಡಿತವಾಗಿವೆ. ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳ ಕಂಡಿದೆ.ನೀರಿನ ಸಮಸ್ಯೆಯಿಂದ ಹಳ್ಳಿಗಳನ್ನು ತೊರೆದು ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ’ ಎಂದರು.

‘ನದಿ ಜೋಡಣೆಯಿಂದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಮಳೆನೀರು ಸಂರಕ್ಷಣೆ, ನದಿಗಳ ಪುನರುಜ್ಜೀವನವೇ ಇದಕ್ಕಿರುವ ಸರಳ ಪರಿಹಾರ. ಲಭ್ಯವಿರುವ ನೀರನ್ನು ಹೇಗೆ ಸಂರಕ್ಷಿಸಿ, ಹಂಚಿಕೊಂಡು ಬಳಸಬೇಕು ಎನ್ನುವುದನ್ನು ಆಯಾ ಗ್ರಾಮಗಳ ರೈತರೇ ನಿರ್ಣಯಿಸುವಂತಹ ಸಮುದಾಯ ವಿಕೇಂದ್ರೀಕೃತ ಜಲ ಸಂರಕ್ಷಣೆ ವ್ಯವಸ್ಥೆ ಜಾರಿಯಾಗಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಿಂತ ಮೊದಲು,ಇಡೀ ಗಂಗಾನದಿಯನ್ನೇ ಶುದ್ಧೀಕರಣಗೊಳಿಸುವುದಾಗಿ ಹೇಳಿದ್ದರು.ಆದರೆ, ಅದು ಶುದ್ಧೀಕರಣವಾಗುವ ಬದಲು ಇನ್ನಷ್ಟು ರೋಗಗ್ರಸ್ಥವಾಗಿದೆ. ದೊಡ್ಡ ದೊಡ್ಡ ಯೋಜನೆಗಳು ನದಿಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತವೆ. ಇದಕ್ಕಿಂತ ನದಿಯ ನೈಸರ್ಗಿಕ ಹರಿವಿಗೆ ಧಕ್ಕೆ ಉಂಟು ಮಾಡದ ಪುಟ್ಟ,ಪುಟ್ಟ ಕೆಲಸಗಳೇ ಮೇಲು’ ಎಂದರು.

‘ಮಳೆನೀರು ಸಂರಕ್ಷಣೆ, ನದಿಗಳ, ಪುರಾತನ ಕೆರೆಗಳ ಪುನರುಜ್ಜೀವನ, ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಜಲಮೂಲ ಸಂರಕ್ಷಣೆಯ ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರ ₹900 ಕೋಟಿ ಅನುದಾನದಲ್ಲಿ ಇದನ್ನು ಜಾರಿಗೊಳಿಸಿದೆ. ಚುನಾವಣೆ ನಂತರ ಈ ಕೆಲಸಗಳು ಚುರುಕು ಪಡೆಯುವ ವಿಶ್ವಾಸ ಇದೆ’ ಎಂದರು.

ಎರಡು ದಶಕದ ಹಿಂದೆ ಜಿಲ್ಲೆಯ ಹರ್ತಿ, ಅಸುಂಡಿ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ನಡೆಸಿದ ಮಳೆ ನೀರು ಇಂಗಿಸುವ ಕಾಮಗಾರಿಗಳನ್ನು ರಾಜೇಂದ್ರಸಿಂಗ್‌ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT