ಗದಗ: ನರಸಾಪೂರ ಕೈಗಾರಿಕಾ ಪ್ರದೇಶದಲ್ಲಿ ಸರಣಿ ಕಳ್ಳತನ

ಗದಗ: ಬೆಟಗೇರಿ ಸಮೀಪದ ನರಸಾಪೂರ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ಕಳ್ಳರು ₨28 ಸಾವಿರ ನಗದು ಕಳ್ಳತನ ಮಾಡಿದ್ದಾರೆ.
ನರಸಾಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೈಗಾರಿಕಾ ಪ್ರದೇಶದಲ್ಲಿರುವ ಸೋಮನಾಥ ಸೀಡ್ಸ್, ಗೊಡಚಿ ದಾಲ್ ಮಿಲ್, ಡಾಂಬರ್ ಫ್ಯಾಕ್ಟರಿ, ಗಣೇಶ ಟ್ರೇಡರ್ಸ್ ಹಾಗೂ ಕಬಾಡರ ಅಗ್ರೋ ಪೈಪ್ಸ್ ಇಂಡಸ್ಟ್ರೀಸ್‌ನ ಕಟ್ಟಡಗಳಲ್ಲಿ ಕಳ್ಳತನ ನಡೆದಿದೆ.
ಗರುವಾರ ಬೆಳಗಿನ ಜಾವ,2:30ರ ಸುಮಾರಿಗೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ನುಗ್ಗಿದ ಆರರಿಂದ ಎಂಟು ಮಂದಿ ಇದ್ದ ದುಷ್ಕರ್ಮಿಗಳ ತಂಡ, ಇಬ್ಬರು ಭದ್ರತಾ ಸಿಬ್ಬಂದಿಗೆ ಥಳಿಸಿ, ಪ್ರಾಚಾರ್ಯರ ಕೊಠಡಿಯ ಬೀಗ ಮುರಿದು, ಒಳಗೆ ಪ್ರವೇಶಿಸಿ,ತಿಜೂರಿಯಲ್ಲಿ ಹಣಕಕ್ಕಾಗಿ ಹುಡುಕಾಡಿದ್ದಾರೆ.ಅಲ್ಲಿ ಹಣ ಸಿಗದ ನಂತರ ಅಲ್ಲಿಂದ ಹೊರಬಂದು, ಕಾಲೇಜಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ. ಜತೆಗೆ ಕೊಠಡಿಯಲ್ಲಿ ತಾವು ಸ್ಪರ್ಶಿಸಿದ್ದ ವಸ್ತುಗಳ ಮೇಲೆ ಮೂಡಿದ್ದ ಬೆರಳಚ್ಚು ನಾಶಪಡಿಸಲು, ಅವುಗಳ ಮೇಲೆ ನೀರು ಎರಚಿಸಿದ್ದಾರೆ.
ಬಳಿಕ ಈ ಕಾಲೇಜಿನಿಂದ ಸ್ವಲ್ಪ ದೂರದಲ್ಲೇ ಇರುವ ಸೋಮನಾಥ ಸೀಡ್ಸ್ ಸಂಸ್ಥೆಯ ಕಟ್ಟಡಕ್ಕೆ ನುಗ್ಗಿ ಅಲ್ಲಿಂದ ₨10 ಸಾವಿರ ದೋಚಿದ್ದಾರೆ. ಪಕ್ಕದ ಡಾಂಬರ್ ತಯಾರಿಕಾ ಘಟಕದ ಲಾರಿ ಚಾಲಕನನ್ನು ಥಳಿಸಿ ಅವರ ಬಳಿ ಇದ್ದ ₨3 ಸಾವಿರ ನಗದು ಲೂಡಿ ಮಾಡಿದ್ದಾರೆ. ಸಮೀಪದ ಕಬಾಡರ ಅಗ್ರೋ ಪೈಪ್ಸ್ ಇಂಡಸ್ಟ್ರೀಸ್‌ನ ಕಚೇರಿಗೆ ನುಗ್ಗಿ ಅಲ್ಲಿಂದಲೂ ₨15 ಸಾವಿರ ನಗದು ದೋಚಿದ್ದಾರೆ. ಈ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ನ್ನು ಕದ್ದು, ಅದನ್ನು ಸಮೀಪದ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ.
ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಟಿ. ವಿಜಯಕುಮಾರ, ಸಿಪಿಐ ವೆಂಕಟೇಶ ಯಡಹಳ್ಳಿ ಹಾಗೂ ನಗರ ಪಿಎಸ್‌ಐ ಎಸ್.ಬಿ. ಪಾಲಬಾವಿ, ಬೆಟಗೇರಿ ಪಿಎಸ್‌ಐ ಶಿವಕುಮಾರ ಎಂ, ಬಡಾವಣೆ ಠಾಣೆ ಪಿಎಸ್‌ಐ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.