ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳು ಸರಿ ಇಲ್ಲದ ಕಾರಣ ಪ್ರವಾಸಿ ಬಸ್‌ ಸೀಜ್‌ ಮಾಡಿದ ಆರ್‌ಟಿಒ ಅಧಿಕಾರಿಗಳು

ದಿಕ್ಕು ತೋಚದೇ ಪರದಾಡಿದ 49 ಮಂದಿ ಪ್ರವಾಸಿಗರು
Published 22 ಮೇ 2024, 15:15 IST
Last Updated 22 ಮೇ 2024, 15:15 IST
ಅಕ್ಷರ ಗಾತ್ರ

ಗದಗ: ಆಂಧ್ರಪ್ರದೇಶದ ನೋಂದಣಿ ಇರುವ ಪ್ರವಾಸಿ ಬಸ್‌ನ ದಾಖಲೆಗಳು ಸರಿ ಇಲ್ಲದ ಕಾರಣ ಆರ್‌ಟಿಒ ಅಧಿಕಾರಿಗಳು ಬಸ್‌ ಸೀಜ್‌ ಮಾಡಿದ್ದರಿಂದ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರದ ಕಡಪ ಜಿಲ್ಲೆಯ ಪುಲಿವೆಂದುಲಾ ಪಟ್ಟಣದ 49 ಪ್ರವಾಸಿಗರು ಟೂರಿಸ್ಟ್‌ ಬಸ್‌ ಮಾಡಿಕೊಂಡು ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳಿಗೆ ಪ್ರವಾಸಕ್ಕೆ ಹೊರಟಿದ್ದರು. ಎಪಿ 03 ಟಿಇ 8520 ನಂಬರ್‌ನ ಖಾಸಗಿ ಬಸ್‌ ಆಂಧ್ರದಿಂದ ರಾಯಚೂರು ಮಾರ್ಗವಾಗಿ ಮಂಗಳವಾರ ಗದಗ ನಗರಕ್ಕೆ ಬರುತ್ತಿದ್ದ ವೇಳೆ ಆರ್‌ಟಿಒ ಅಧಿಕಾರಿಗಳು ತಪಾಸಣೆ ನಡೆಸಿದಾಗ ರಾಜ್ಯದ ರಸ್ತೆ ತೆರಿಗೆ ಕಟ್ಟದಿರುವುದು ಗೊತ್ತಾಗಿದೆ.

ಈ ವೇಳೆ ಆರ್‌ಟಿಒ ಅಧಿಕಾರಿಗಳು ಬಸ್‌ ಚಾಲಕನಿಗೆ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ, ಆತ ದಂಡ ತುಂಬುವ ಬದಲು ಅಧಿಕಾರಿಗಳ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಅಧಿಕಾರಿಗಳು ಬಸ್‌ನ ದಾಖಲಾತಿ ಪರಿಶೀಲಿಸಲಾಗಿ ಚಾರ್ಸಿ ನಂಬರ್‌ ಮತ್ತು ಎಂಜಿನ್‌ ನಂಬರ್‌ ಬೇರೆ ಬೇರೆ ಇರುವುದು ಗೊತ್ತಾಗಿದೆ. ಬಳಿಕ ಅವರು ಬಸ್‌ ಸೀಜ್‌ ಮಾಡಿದ್ದಾರೆ.

ಖಾಸಗಿ ಟೂರಿಸ್ಟ್‌ ಬಸ್‌ನ ದಾಖಲೆಗಳು ಸರಿ ಇಲ್ಲದ ಕಾರಣ ಬಸ್‌ ಸೀಜ್‌ ಆಗಿದ್ದರಿಂದ 49 ಮಂದಿ ಪ್ರವಾಸಿಗರು ದಿಕ್ಕು ತೋಚದೆ ಪರದಾಡಿದರು. ಈ ಬಸ್‌ ಮತ್ತೇ ಬಿಡಲು ಸಾಧ್ಯವಿಲ್ಲ ಎಂದು ಆರ್‌ಟಿಒ ಅಧಿಕಾರಿಗಳು ಹೇಳಿದರೂ ದಂಡ ಪಾವತಿಸಿಕೊಂಡು ವಾಹನ ಬಿಟ್ಟುಬಿಡಿ ಎಂದು ಅಂಗಲಾಚಿದರು. ಅಲ್ಲೀವರೆಗೂ ಆರ್‌ಟಿಒ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟುಹಿಡಿದರು.

‘ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಗೋವಾ ರಾಜ್ಯಗಳ 10 ದಿನಗಳ ಪ್ರವಾಸಕ್ಕೆ ಯೋಜನೆ ರೂಪಿಸಿ, 49 ಮಂದಿಯ ತಂಡ ಟೂರಿಸ್ಟ್ ಬಸ್‌ನ ಮಾಲೀಕರಿಗೆ ಮುಂಗಡವಾಗಿ ₹70 ಸಾವಿರ ಹಣ ಪಾವತಿಸಿದ್ದೆವು. ₹1.70 ಲಕ್ಷಕ್ಕೆ ಬಾಡಿಗೆ ಮಾತುಕತೆಯಾಗಿತ್ತು. ಈಗ ಮಾರ್ಗಮಧ್ಯೆ ಆರ್‌ಟಿಒ ಅಧಿಕಾರಿಗಳು ಬಸ್‌ ಸೀಜ್ ಮಾಡಿದ್ದರಿಂದ ದಿಕ್ಕು ತೋಚದಂತಾಗಿದೆ’ ಎಂದು ಪ್ರವಾಸಿಗರಾದ ರೇಣುಕಮ್ಮ ಅಲವತ್ತುಕೊಂಡರು.

ಇದೆಲ್ಲದರ ನಡುವೆ ಕೆಲವು ಪ್ರವಾಸಿಗರು ಟೂರಿಸ್ಟ್‌ ಸಂಸ್ಥೆಯ ಕಚೇರಿ ಸಂಪರ್ಕಿಸಿ ಸಮಸ್ಯೆ ತಿಳಿಸಿದ್ದಾರೆ. ಬದಲಿ ಬಸ್‌ ವ್ಯವಸ್ಥೆ ಮಾಡಿಸುವಂತೆ ಕೋರಿದ್ದಾರೆ. ಆದರೆ, ಟೂರಿಸ್ಟ್‌ ಸಂಸ್ಥೆಯವರು ಬಸ್‌ ವ್ಯವಸ್ಥೆ ಮಾಡದ ಕಾರಣ ಪ್ರವಾಸಿಗರು ಪರದಾಡುವಂತಾಯಿತು.

ಎಷ್ಟು ಬಾರಿ ಮನವರಿಕೆ ಮಾಡಿದರೂ ‍ಪಟ್ಟುಬಿಡದ ಪ್ರವಾಸಿಗರು ಆರ್‌ಟಿಒ ಕಚೇರಿ ಬಳಿಯೇ ಉಳಿದುಕೊಂಡಿದ್ದರು. ಬಳಿಕ ಆರ್‌ಟಿಒ ಅಧಿಕಾರಿಗಳು ಮಂಗಳವಾರ ತಡರಾತ್ರಿ ಪ್ರವಾಸಿಗರಿಗೆ ಊಟ ಹಾಗೂ ವಸತಿಗಾಗಿ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವ್ಯವಸ್ಥೆ ಕಲ್ಪಿಸಿದ್ದರು.

ಬುಧವಾರ ಬೆಳಿಗ್ಗೆ ಪುನಃ ತಮ್ಮ ಲಗೇಜುಗಳ ಸಮೇತ ಆರ್‌ಟಿಒ ಕಚೇರಿಗೆ ತೆರಳಿ ಬಸ್ ಬಿಟ್ಟುಕೊಡುವಂತೆ ಅಧಿಕಾರಿಗಳಿಗೆ ಒತ್ತಡ ಹಾಕಿದರು. ಅಲ್ಲದೇ, ಬಸ್‌ನ ಪಕ್ಕದಲ್ಲೇ ಟಿಕಾಣಿ ಹೂಡಿ ಅಡುಗೆ ತಯಾರಿಸಿ, ಊಟ ಮಾಡಿದರು.

ಅಧಿಕಾರಿಗಳು ಬುಧವಾರ ಕೂಡ ಈ ಬಸ್‌ ಅನ್ನು ಬಿಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರೂ ಪ್ರವಾಸಿಗರು ಮತ್ತೇ ಹಠ ಹಿಡಿದರು. ಬಳಿಕ ಪ್ರವಾಸಿಗರಿಗೆ ತಿಳಿವಳಿಕೆ ನೀಡಿ ಖಾಸಗಿ ಬಸ್‌ನ ಮೂಲಕ ವಾಪಸ್ ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸಿದರು. ಪ್ರವಾಸದ ಕನಸು ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಅವರೆಲ್ಲರೂ ನಿರಾಸೆಯಿಂದ ಹಿಂದಿರುಗಿದರು.

ಆರ್‌ಸಿ ರದ್ದುಪಡಿಸಲು ನ್ಯಾಯಾಲಯಕ್ಕೆ ಮನವಿ

‘ಕರ್ನಾಟಕ ಮೋಟಾರ್ ವೆಹಿಕಲ್‌ ಟ್ಯಾಕ್ಸೇಷನ್ ಆಕ್ಟ್ ಅಡಿ ಬಸ್‌ ಅನ್ನು ಸೀಜ್ ಮಾಡಲಾಗಿದೆ. ಈ ಬಸ್‌ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಲ್ಲದೇ ಬಸ್‌ನ ಎಂಜಿನ್, ಚಾರ್ಸಿ ನಂಬರ್ ಬದಲು ಮಾಡಿರುವುದರಿಂದ ಒಂದೇ ನಂಬರ್‌ನ ಎರಡು ಬಸ್ ಓಡಾಡುತ್ತಿರುವ ಸಾಧ್ಯತೆಗಳಿವೆ. ಆದ್ದರಿಂದ ಬಸ್‌ನ ಆರ್‌ಸಿ ರದ್ದುಪಡಿಸುವಂತೆ ಆದೇಶಿಸಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು’ ಎಂದು ಆರ್‌ಟಿಒ ಅಧಿಕಾರಿ ಲಕ್ಷ್ಮಿಕಾಂತ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT