ಗದಗ: ಸರ್ಕಾರದ ಸೂಚನೆಯಂತೆ 6ರಿಂದ 8ನೇ ತರಗತಿವರೆಗಿನ ಶಾಲೆಗಳು ಸೋಮವಾರದಿಂದ ಆರಂಭ
ಗೊಂಡವು. ಒಂದೂವರೆ ವರ್ಷದ ನಂತರ ಶಾಲಾ ಆವರಣಕ್ಕೆ ಕಾಲಿಟ್ಟಿದ್ದ ಚಿಣ್ಣರ ಮನದಲ್ಲಿ ಉತ್ಸಾಹದ ಬುಗ್ಗೆ ಎದ್ದಿತ್ತು.
ಮಕ್ಕಳನ್ನು ಸ್ವಾಗತಿಸಲು ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ವಿವಿಧ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದರು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಆರತಿ ಬೆಳಗಿ, ಹೂವು ನೀಡಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಮತ್ತೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ, ಹೂವಿನ ಕುಂಡ ಬೆಳಗಿಸಿ ಅದ್ಧೂರಿ ಸ್ವಾಗತ ಕೋರಲಾಯಿತು.
ಶಾಲೆಗಳ ಆರಂಭದ ಕಾರಣ ಕೊಠಡಿಗಳನ್ನು ಸಿಂಗರಿಸಲಾಗಿತ್ತು. ತಳಿರು ತೋರಣ, ಬಣ್ಣಬಣ್ಣದ ಬಲೂನ್‌ಗಳು ಕೊಠಡಿಗಳ ಮೆರುಗು ಹೆಚ್ಚಿಸಿದ್ದವು. ಶಾಲಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದಲೇ ಶಾಲೆಗೆ ಬಂದರು. ಮೊದಲದಿನದ ವಾತಾವರಣ ಕಂಡು ಮಕ್ಕಳ ಮನಸ್ಸು ಪ್ರಫುಲ್ಲಗೊಂಡಿತು.
‘ಗದಗ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಆರಂಭವಾಗಿವೆ. ಶಾಲೆಗಳ ಆರಂಭಕ್ಕೆ ಮುನ್ನ ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್ ಮಾಡಿಸಲಾಗಿದೆ. ಶಾಲಾರಂಭದ ನಂತರ ಕೋವಿಡ್–19 ಮಾರ್ಗಸೂಚಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳು ಸೇರಿಂದತೆ ಒಟ್ಟು 841 ಶಾಲೆಗಳಿವೆ. ಈ ಪೈಕಿ 674 ಶಾಲೆಗಳಲ್ಲಿ ಸೋಮವಾರದಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿವೆ. ಜಿಲ್ಲೆಯಲ್ಲಿ 2021–22ನೇ ಸಾಲಿಗೆ 6ರಿಂದ 8ನೇ ತರಗತಿಗೆ 56,144 ಮಕ್ಕಳು ದಾಖಲಾಗಿದ್ದಾರೆ. ಸೆ.6ರಂದು ಜಿಲ್ಲೆಯಲ್ಲಿ ಎಲ್ಲ ಶಾಲೆಗಳಿಂದ ವಿದ್ಯಾರ್ಥಿಗಳ ಒಟ್ಟು ಹಾಜರಾತಿ ಪ್ರಮಾಣ ಶೇ 80.14ರಷ್ಟಿತ್ತು’ ಎಂದು ಅವರು ತಿಳಿಸಿದ್ದಾರೆ.
ಪುಸ್ತಕ ನೀಡಿ ಸ್ವಾಗತ
ಲಕ್ಷ್ಮೇಶ್ವರ: ಬಟ್ಟೂರು ಹಿರಿಯ ಪ್ರಾಥಮಿಕ ಶಾಲೆಯ 6ರಿಂದ 8ನೇ ತರಗತಿ ಮಕ್ಕಳಿಗೆ ಸೋಮವಾರ ಶಾಸಕ ರಾಮಣ್ಣ ಲಮಾಣಿ ಅವರುಪುಸ್ತಕ ನೀಡುವ ಮೂಲಕ ಶಾಲೆಗೆ ಬರ ಮಾಡಿಕೊಂಡರು.
‘ಕೊರೊನಾ ಸೋಂಕಿನಿಂದ ಒಂದೂವರೆ ವರ್ಷದಿಂದಶಾಲೆಗಳು ನಡೆಯದೆ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ.ಹೀಗಾಗಿ, ಸರ್ಕಾರ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನ ನೀಡಬೇಕು’ ಎಂದರು.
ಬಿಇಒ ಆರ್.ಎಸ್. ಬುರುಡಿ, ಗ್ರಾಪಂ ಅಧ್ಯಕ್ಷ ಜಗದೀಶಗೌಡ ಪಾಟೀಲ, ಪರಮೇಶ ಹತ್ತಾಳ, ಕಲ್ಲಪ್ಪ ಹಡಪದ , ದೈಹಿಕ ಶಿಕ್ಷಣಾಧಿಕಾರಿ ಎಂ.ಎಂ. ಹವಳದ, ಮಾಲತೇಶ ಹೊಳಲಾಪುರ, ಮುಖ್ಯ ಶಿಕ್ಷಕ ಬಿ.ಎಸ್. ಕನವಳ್ಳಿ, ಪಿಡಿಒ ಎಂ.ಡಿ. ಮಾದರ, ಗೋಣೆಪ್ಪ ಹರಿಜನ ಹಾಗೂ ಗ್ರಾಪಂ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.