ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ಬಯಲಿನಲ್ಲೇ ಪಾಠ, ವಿದ್ಯಾರ್ಥಿಗಳಿಗೆ ತೊಂದರೆ

ಹಲವು ತಿಂಗಳುಗಳಿಂದ ದುರಸ್ತಿಯಾಗದ ಶಾಲಾ ಕೊಠಡಿಗಳು
Last Updated 3 ಜೂನ್ 2022, 4:46 IST
ಅಕ್ಷರ ಗಾತ್ರ

ಮುಂಡರಗಿ: ಶಾಲಾ ಕಟ್ಟಡವನ್ನು ದುರಸ್ತಿಗೊಳಿಸದ ಕಾರಣ ಶಾಲಾ ಮಕ್ಕಳು ದಿನನಿತ್ಯ ಬಯಲಿನಲ್ಲಿ ಕುಳಿತು ಪಾಠ, ಕೇಳಬೇಕಾದ ಪರಿಸ್ಥಿತಿ ತಾಲ್ಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ. ಸಣ್ಣ ಮಕ್ಕಳು ನಿತ್ಯ ಬಯಲಿನಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಶಾಲೆಯಲ್ಲಿ ಒಟ್ಟು 11ಕೊಠಡಿಗಳಿದ್ದು, 1ರಿಂದ 8ನೇ ತರಗತಿಯ 201 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ಮೊದಲಿದ್ದ 11 ಕೊಠಡಿಗಳಲ್ಲಿ 5 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದವು. ಅವುಗಳನ್ನು ದುರಸ್ತಿಗೊಳಿಸುವ ಸಲುವಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 5 ಕೊಠಡಿಗಳ ಚಾವಣಿಯನ್ನು ಕಿತ್ತು ಹಾಕಲಾಗಿತ್ತು. ಅಂದಿನಿಂದ ಇಂದಿನವರೆಗೂ ಶಾಲಾ ಕೊಠಡಿಗಳು ದುರಸ್ತಿಗೊಳ್ಳದೇ ಇರುವುದರಿಂದ ಶಾಲಾ ಚಟುವಟಿಕೆಗಳಿಗೆ ಕೊಠಡಿಗಳಿಲ್ಲದಂತಾಗಿದೆ.

ಲಭ್ಯವಿದ್ದ 6 ಕೊಠಡಿಗಳಲ್ಲಿ ಎರಡು ಕೊಠಡಿಗಳಲ್ಲಿ ಶಾಲಾ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಇನ್ನುಳಿದ 4 ಕೊಠಡಿಗಳಲ್ಲಿ ಒಂದು ಶಾಲಾ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿಗೆ ಮೀಸಲಿದೆ. ಇನ್ನುಳಿದ ಕೇವಲ ಎರಡು ಕೊಠಡಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿದೆ. ಸಾಕಷ್ಟು ಕೊಠಡಿಗಳು ಇಲ್ಲದೆ ಇರುವುದರಿಂದ ಬೋಧನೆ ಹಾಗೂ ಮತ್ತಿತರ ಶಾಲಾ ಚಟುವಟಿಕೆ ಕೈಗೊಳ್ಳಲು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಲಿದೆ.

ಕೊಠಡಿಗಳು ಲಭ್ಯವಿಲ್ಲದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆಯ 2 ಕೊಠಡಿಗಳನ್ನು ಪಡೆದುಕೊಂಡು ಅಲ್ಲಿ ಏಳು ಹಾಗೂ ಎಂಟನೇ ತರಗತಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. 1ರಿಂದ 6ನೇ ತರಗತಿಯ ಮಕ್ಕಳು ಮಾತ್ರ ಶಾಲಾ ಆವರಣದಲ್ಲಿ ಪಾಠಗಳನ್ನು ಕೇಳಬೇಕಾಗಿದೆ.

ಕಟ್ಟಡದ ತ್ಯಾಜ್ಯವನ್ನು ಶಾಲಾ ಆವರಣದಲ್ಲಿಯೇ ಸಂಗ್ರಹಿಸಿರುವುದರಿಂದ ಮಕ್ಕಳ ಆಟೋಟಕ್ಕೆ ಹಾಗೂ ಪಾಠ ಪ್ರವಚನಗಳಿಗೆ ತೀವ್ರ ತೊಂದರೆಯಾಗುತ್ತಲಿದೆ. ತುಂಬ ಇಕ್ಕಟ್ಟಾದ ಸ್ಥಳದಲ್ಲಿ ಕುಳಿತು ಮಕ್ಕಳು ಪಾಠ ಕೇಳಬೇಕಾಗಿದೆ. ಮಳೆ ಬಂದರೆ ತರಗತಿಗಳನ್ನು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆ ಬಗೆಹರಿಯುವುದೇ?
‘ಕೆ.ಆರ್.ಐ.ಡಿ.ಎಲ್. ಶಾಲಾ ಕಟ್ಟಡದ ದುರಸ್ತಿ ಗುತ್ತಿಗೆಯನ್ನು ಪಡೆದುಕೊಂಡಿದೆ. ವಾರ್ಷಿಕ ಸಿಮೆಂಟ್ ಟೆಂಡರ್ ತಡವಾಗಿರುವುದರಿಂದ ಕಾಮಗಾರಿ ಕೈಗೊಳ್ಳುವುದು ತಡವಾಗಿದೆ ಎಂದು ತಿಳಿದು ಬಂದಿದೆ. ಇನ್ನೊಂದು ವಾರದಲ್ಲಿ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಲಭ್ಯವಿರುವ ಕೊಠಡಿಗಳಲ್ಲಿ ಮಕ್ಕಳ ಬೋಧನೆಗೆ ಅನಕೂಲ ಮಾಡಿಕೊಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಡಿ.ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ ಕೊಠಡಿಗಳಿಲ್ಲದ್ದರಿಂದ ಮಕ್ಕಳು ಬಯಲಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ತಕ್ಷಣ ಕೊಠಡಿಗಳನ್ನು ದುರಸ್ತಿಗೊಳಿಸದಿದ್ದರೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಮೌನೇಶ ಬಡಿಗೇರ, ಹೆಸರೂರು ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT