ಶನಿವಾರ, ಜನವರಿ 23, 2021
28 °C
ಖುಷಿಯಿಂದಲೇ ಶಾಲೆಗೆ ಬಂದ ವಿದ್ಯಾರ್ಥಿಗಳು, ತರಗತಿ ಆರಂಭ

ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಶುಕ್ರವಾರ ಆರಂಭಗೊಂಡ ಶಾಲೆಗಳಿಗೆ ಮಕ್ಕಳು ಖುಷಿಯಿಂದಲೇ ಹಾಜರಾದರು. ಆನ್‌ಕ್ಲಾಸ್‌ನಿಂದ ನೇರ ತರಗತಿಗಳಿಗೆ ಹಾಜರಾದ ಸಂಭ್ರಮ ಅವರಲ್ಲಿ ಮನೆಮಾಡಿತ್ತು. ಗದಗ ನಗರದ ವಿವಿಧ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂವು, ಚಾಕೊಲೆಟ್‌ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

‘ಶಾಲೆಯ ಆರಂಭಕ್ಕೆ 15 ದಿನಗಳ ಮುಂಚಿತವಾಗಿಯೇ ಸಿದ್ಧತೆ ನಡೆಸಲಾಗಿತ್ತು. ಜ.1ರಿಂದ ಶಾಲೆ ಆರಂಭಗೊಳ್ಳುತ್ತದೆ ಎಂಬ ವಿಷಯ ಮೊದಲೇ ತಿಳಿದಿದ್ದರಿಂದ ಮಕ್ಕಳು ಕೂಡ ತರಗತಿಗಳಿಗೆ ಹಾಜರಾಗಲು ಮಾನಸಿಕವಾಗಿ ಸಿದ್ಧರಾಗಿದ್ದರು. ಈ ದಿನ ಶಾಲೆಗೆ ಹಾಜರಾದ ಮಕ್ಕಳಿಗೆ ಕೋವಿಡ್‌–19 ಮಾರ್ಗಸೂಚಿಗಳ ಪಾಲನೆ ಕುರಿತಂತೆ ತಿಳಿವಳಿಕೆ ಮೂಡಿಸಲಾಯಿತು’ ಎಂದು ನಗರದ ಜೇಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಮಡಿವಾಳರ ತಿಳಿಸಿದರು.

‘ಜೇಸಿ ಶಾಲೆಯಲ್ಲಿ 35 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಅವರಲ್ಲಿ 27 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 6 ಮತ್ತು 7ನೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ತರಗತಿಗಳು ನಡೆಯಲಿದ್ದು, 6, 7 ಮತ್ತು 8, 9ನೇ ತರಗತಿ ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿಗಳು ನಡೆಯಲಿವೆ. ಅದರಂತೆ ವೇಳಾಪಟ್ಟಿ ರೂಪಿಸಲಾಗಿದೆ. ನಮ್ಮ ಶಾಲೆ ಈಗಾಗಲೇ ಆನ್‌ಲೈನ್‌ ಕ್ಲಾಸ್‌ಗಳ ಮೂಲಕವೇ ಪಠ್ಯ ಮುಗಿಸಲಾಗಿದೆ. ಇನ್ನು ಮುಂದೆ ಪುನರಾವರ್ತನೆ ನಡೆಯಲಿದೆ. ಹೆಚ್ಚಿನ ಪೋಷಕರು ಸೋಮವಾರದಿಂದ ಮಕ್ಕಳನ್ನು ಶಾಲೆಗೆ ಕಳಿಸುವುದಾಗಿ ತಿಳಿಸಿದ್ದಾರೆ. ಶಾಲೆ ಆರಂಭಿಸಿದ್ದು ಒಳ್ಳೆಯದೇ ಆಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.

ನಗರದ ವಿವಿಧೆಡೆ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಗಮ ಮತ್ತು ಹತ್ತನೇ ತರಗತಿ ಶಾಲಾರಂಭವನ್ನು ಸಡಗರದಿಂದ ಮಾಡಲಾಯಿತು. ಶಾಲಾ ಆವರಣವನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. 

ಶಾಲೆಗಳ ಆವರಣದಲ್ಲಿ ಕೊರೊನಾ ಜಾಗೃತಿ ಫಲಕಗಳು, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಫಲಕಗಳನ್ನು ತೂಗುಹಾಕಲಾಗಿತ್ತು. ಕೆಲವು ಶಾಲೆಗಳಲ್ಲಿ ಸರಸ್ವತಿ ಪೂಜೆ ಮಾಡಿ, ಮಕ್ಕಳನ್ನು ಮೊದಲ ದಿನದ ಶಾಲೆಗೆ ಬರಮಾಡಿಕೊಳ್ಳಲಾಯಿತು.

ಸಂಕನೂರ ಭೇಟಿ

9 ತಿಂಗಳ ನಂತರ ಪ್ರಾರಂಭವಾದ ನಗರದ ಶಾಲಾ-ಕಾಲೇಜುಗಳಿಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಭೇಟಿ ನೀಡಿ, ಕೋವಿಡ್–19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದರು.

ನಗರದ ಕೆ.ಜಿ.ಎಸ್.ನಂ-2, 5, 8 ಹಾಗೂ ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆ, ಬಸವೇಶ್ವರ ಪ್ರೌಢಶಾಲೆ, ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಚಾರ್ಯರ ಜತೆಗೆ ಚರ್ಚೆ ನಡೆಸಿದರು. ಶಾಲೆ ಪ್ರಾರಂಭದ ದಿನದಂದು ಪ್ರಾಥಮಿಕ ಶಾಲೆಯಲ್ಲಿಯ ವಿದ್ಯಾಗಮ ಕಾರ್ಯಕ್ರಮಕ್ಕೆ ಶೇ 65, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಶೇ 75ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇರುವುದು ಕಂಡುಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.