ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಪಾಠಕ್ಕೂ ಸೈ.. ವಿಜ್ಞಾನಕ್ಕೂ ಜೈ...

ಸುಸಜ್ಜಿತ ವಿಜ್ಞಾನ ಹಾಲ್, ವಿಜ್ಞಾನ ಪಾರ್ಕ್ ಹೊಂದಿರುವ ಕೀರ್ತಿ
Last Updated 2 ಏಪ್ರಿಲ್ 2021, 6:40 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇಲ್ಲಿನ ಚಂದನ ಶಾಲೆ ಮಕ್ಕಳು ಪಾಠ, ಆಟ ಮತ್ತು ವಿಜ್ಞಾನ ಪ್ರಯೋಗ, ಸಂಗೀತ ಹೀಗೆ ಹಲವಾರು ವಿಷಯಗಳಲ್ಲಿ ಮುಂದಿದ್ದಾರೆ. ಈ ಶಾಲೆ ಸುಸಜ್ಜಿತ ವಿಜ್ಞಾನ ಹಾಲ್ ಮತ್ತು ವಿಜ್ಞಾನ ಪಾರ್ಕ್ ಹೊಂದಿದ ಕೀರ್ತಿಗೆ ಪಾತ್ರವಾಗಿದೆ.

ಈ ಶಾಲೆ ಮಕ್ಕಳು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. 2017ರಲ್ಲಿ ಇಸ್ರೋ ಮಾದರಿಯಲ್ಲೇ ಕೃತಕ ರಾಕೆಟ್ ಸಿದ್ಧಪಡಿಸಿ ಯಶಸ್ವಿಯಾಗಿ ಚಂದ್ರಯಾನ ಪ್ರಾತ್ಯಕ್ಷಿಕೆ ಮಾಡಿದ್ದರು. ಇದನ್ನು ಕಣ್ಣಾರೆ ಕಂಡ ಪ್ರೊ.ಸಿಎನ್‍ಆರ್ ರಾವ್ ಅವರು ಮಕ್ಕಳ ಪ್ರಯೋಗಕ್ಕೆ ಬೆರಗಾಗಿ ಇಲ್ಲಿ ವಿಜ್ಞಾನ ಕೇಂದ್ರ ನಿರ್ಮಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಿದರು. ಅವರ ಪ್ರಯತ್ನದ ಫಲವಾಗಿ ಇಂದು ಶಾಲೆ ಆವರಣದಲ್ಲಿ ಪ್ರೊ. ಸಿಎನ್‍ಆರ್ ರಾವ್ ಹೆಸರಿನ ವಿಜ್ಞಾನ ಕೇಂದ್ರ ತಲೆ ಎತ್ತಿ ನಿಂತಿದೆ.

ಗ್ರಾಮೀಣ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚೆಚ್ಚು ಬೆಳೆಸಬೇಕು ಎಂಬ ಮಹದಾಸೆ ಪ್ರೊ.ರಾವ್ ಅವರದು. ಹೀಗಾಗಿ ವಿಜ್ಞಾನ ಹಾಲ್‍ಗೆ ತಮಗೆ ಬಂದ ಪ್ರಶಸ್ತಿಗಳನ್ನು ಕೊಟ್ಟಿದ್ದಾರೆ. ಅಷ್ಟಲ್ಲದೇ ಶಾಲಾ ಆವರಣದಲ್ಲಿ ಸುಸಜ್ಜಿತ ವಿಜ್ಞಾನ ಪಾರ್ಕ್‌ ನಿರ್ಮಿಸುವಂತೆ ಸಲಹೆ ಸೂಚನೆ ನೀಡಿದ್ದಾರೆ.

ಪಾರ್ಕ್‍ನಲ್ಲಿ ಬೆಳಕಿನ ವಕ್ರೀಭವನ ಕ್ರಿಯೆ, ಪ್ರತಿಧ್ವನಿ ಉಂಟಾಗುವ ಮಾದರಿ, ಕಡಿಮೆ ಶಕ್ತಿಯಿಂದ ಹೆಚ್ಚಿನ ಭಾರವನ್ನು ಸರಳವಾಗಿ ಎತ್ತುವುದು, ಬೆಳಕಿನ ಪ್ರತಿಫಲನ, ನೀರಿನಲ್ಲಿ ಉಂಟಾಗುವ ತರಂಗಗಳು ಹೀಗೆ ಪ್ರತಿಯೊಂದು ಘಟನೆಗೂ ಸಂಬಂಧಿಸಿದ ಪ್ರಯೋಗಗಳ ಮಾದರಿಗಳು ಪಾರ್ಕ್‍ನಲ್ಲಿ ಕಾಣ ಸಿಗುತ್ತವೆ. ಶಾಲೆಯ ಪ್ರತಿ ಮಗುವೂ ವಿಜ್ಞಾನ ವಸ್ತುಗಳ ಬಗ್ಗೆ ನಿಖರವಾಗಿ ಹೇಳಬಲ್ಲಷ್ಟು ಪ್ರಬುದ್ಧತೆ ಗಳಿಸಿದೆ.

ಕೇವಲ ಪಾಠ ಅಲ್ಲದೆ ಆಟೋಟ, ಸಂಗೀತದಲ್ಲೂ ಮಕ್ಕಳು ಪ್ರಾವೀಣ್ಯ ಸಾಧಿಸಿದ್ದಾರೆ. ಮಕ್ಕಳ ಬ್ರಾಸ್‍ಬ್ಯಾಂಡ್ ಪ್ರಖ್ಯಾತವಾಗಿದೆ. ಇದರೊಂದಿಗೆ ಚಂದನ ಮಕ್ಕಳ ಸಂಗೀತ ಆಸ್ಥಾನವಂತೂ ಸಂಗೀತ ಕಲಾವಿದರಲ್ಲಿ ಅಚ್ಚರಿ ಮೂಡಿಸುತ್ತದೆ.

ಶಿಕ್ಷಣದ ಜೊತೆಗೆ ಸಂಗೀತವನ್ನೂ ಹೇಳಿಕೊಡಲಾಗುತ್ತಿದೆ. ಮಕ್ಕಳೇ ತಬಲಾ, ಹಾರ್ಮೋನಿಯಂ, ಕೊಳಲು ಹೀಗೆ ಸಂಗೀತದ ಹಲವಾರು ಪರಿಕರಗಳನ್ನು ಬಳಸಿಕೊಂಡು ಸುಶ್ರಾವ್ಯವಾಗಿ ಹಾಡುವುದನ್ನು ಆಲಿಸಿದಾಗ ಸಂಗೀತದ ಬಗ್ಗೆ ಅವರಿಗಿರುವ ಪ್ರಾವೀಣ್ಯ ಮನದಟ್ಟಾಗುತ್ತದೆ. ಪುರಂದರದಾಸರ ಪದ, ವಚನಗಳು ಕೇಳುಗರಲ್ಲಿ ಆನಂದದ ಅಲೆಗಳನ್ನು ಸೃಷ್ಟಿಸುತ್ತವೆ. ಮಕ್ಕಳ ಕನ್ನಡ ವ್ಯಾಕರಣ ಚಾತುರ್ಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅತಿಥಿಗಳೊಂದಿಗೆ ಮಕ್ಕಳು ಸಂವಾದ ನಡೆಸಿ ಅವರಿಂದ ಹೆಚ್ಚಿನ ವಿಷಯ ತಿಳಿದುಕೊಳ್ಳುವ ಪರಿ ಮಕ್ಕಳಲ್ಲಿನ ಕುತೂಹಲವನ್ನು ಬಿಂಬಿಸುತ್ತದೆ. ಪ್ರತಿವರ್ಷ ಪ್ರೊ.ರಾವ್ ಮತ್ತು ಇಂದುಮತಿ ರಾವ್ ಹಾಗೂ ಬೆಂಗಳೂರಿನ ವಿಜ್ಞಾನ ಕೇಂದ್ರದ ಖ್ಯಾತನಾಮ ವಿಜ್ಞಾನಿಗಳು ಇಲ್ಲಿಗೆ ಬಂದು ಮಕ್ಕಳಿಗೆ ವಿಜ್ಞಾನದ ಕುರಿತು ಹೆಚ್ಚಿನ ಬೋಧನೆ ಮಾಡುತ್ತಾರೆ.

ಗ್ರಾಮೀಣ ಭಾಗದ ಮಕ್ಕಳು ವಿಜ್ಞಾನದಲ್ಲಿ ಸಾಧನೆ ಮಾಡಬೇಕು ಎಂಬುದೇ ನಮ್ಮ ಉದ್ಧೇಶ. ಈ ನಿಟ್ಟಿನಲ್ಲಿ ನಮ್ಮ ಶಾಲೆ ಮಕ್ಕಳು ಮುಂದುವರಿಯುತ್ತಿದ್ದಾರೆ
ಟಿ.ಈಶ್ವರ, ಶಾಲೆ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT