ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಶೈಲಿಯ ಮಾತಿನ ಮಾಂತ್ರಿಕ ಡಾ.ಶಂಭು ಬಳಿಗಾರಗೆ ರಾಜ್ಯೋತ್ಸವ ಪ್ರಶಸ್ತಿ

Published 31 ಅಕ್ಟೋಬರ್ 2023, 12:54 IST
Last Updated 31 ಅಕ್ಟೋಬರ್ 2023, 12:54 IST
ಅಕ್ಷರ ಗಾತ್ರ

ಗದಗ: ‘ತೊಗರಿ ತಿಪ್ಪ’ ನಾಟಕದ ಮೂಲಕ ರಾಜ್ಯದಲ್ಲಿಯೇ ಮನೆ ಮಾತಾಗಿರುವ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇಳಕಲ್ಲನ ವಿಜಯಮಹಾಂತೇಶ್ವರ ಕಲೆ, ವಿಜ್ಞಾನ, ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಶಂಭು ಬಳಿಗಾರ ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿ ಗ್ರಾಮದವರು.

1952 ಏಪ್ರಿಲ್ 1ರಂದು ಶಿಗ್ಲಿಯ ಬಳಿಗಾರ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿ ನಂತರ ಉನ್ನತ ವಿದ್ಯಾಭ್ಯಾಸವನ್ನು ಧಾರವಾಡ, ಹೈದರಾಬಾದ್ ಮತ್ತು ಕಲಬುರಗಿಯಲ್ಲಿ ಮುಗಿಸಿ ಇಳಕಲ್ಲಿನಲ್ಲಿ ಉಪನ್ಯಾಸಕರಾದವರು.

ಮೊದಲಿನಿಂದಲೂ ಇವರಿಗೆ ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಒಲವು. ಆಕರ್ಷಕವಾಗಿ ಮಾತನಾಡುವ ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಕನ್ನಡ ಜಾನಪದವನ್ನು ಇವರ ಮಾತಿನಲ್ಲೇ ಕೇಳಿ ಆನಂದಿಸಬೇಕು. ಜಾನಪದ ಸಾಹಿತ್ಯವನ್ನು ತಿಳಿ ಹಾಸ್ಯದೊಂದಿಗೆ ಜನರ ಹತ್ತಿರಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ.

ಹೆತ್ತವರಿಗೆ, ನಾಡಿನ ಜನರಿಗೆ ಗೌರವ ಸಮರ್ಪಣೆ:

‘2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದು ತುಂಬ ಖುಷಿ ತರಿಸಿದೆ’ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ತಿಳಿಸಿದ್ದಾರೆ.

‘ನಾನು ಕನ್ನಡ ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಅತೀವ ಸಂತೋಷ ಆಗಿದೆ. ಕನ್ನಡ ನೆಲದ ದೇಸಿ ಸಂಸ್ಕೃತಿ ಮತ್ತು ಸಾಹಿತ್ಯವನ್ನು ನಾಲ್ಕೂವರೆ ದಶಕಗಳ ಕಾಲ ದೇಶ ವಿದೇಶಗಳನ್ನು ಸುತ್ತಿ ಬರಹದ ಮೂಲಕ, ವಿಶೇಷವಾಗಿ ಉಪನ್ಯಾಸಗಳ ಮೂಲಕ ಜನಪದ ಹಾಡುಗಾರಿಕೆ ಮೂಲಕ ಪ್ರಸಾರ ಮಾಡಿದ ಶ್ರಮ ವ್ಯರ್ಥವಾಗಲಿಲ್ಲ ಎಂಬ ತೃಪ್ತಿ ತರಿಸಿದೆ’ ಎಂದು ತಿಳಿಸಿದ್ದಾರೆ.

‘ಜಾನಪದ ಜೀವನ ಹಾಗೂ ಸಾಹಿತ್ಯದಲ್ಲಿ ಅಡಗಿದ ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ. ನನಗಿಂದು ದೊರೆತ ಈ ಗೌರವ ನನ್ನ ಹೆತ್ತವರಿಗೆ, ಪ್ರೋತ್ಸಾಹ ನೀಡಿದ ನಾಡಿನ ಜನತೆಗೆ ಸಲ್ಲಬೇಕು. ಸುದೀರ್ಘ ಕಾಲಕ ಮೌಖಿಕ ಪರಂಪರೆಯ ಉಳಿವಿಗಾಗಿ ಶ್ರಮಿಸಿದ ನನ್ನ ಸೇವೆಯನ್ನು ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕರ್ನಾಟಕ ಸರ್ಕಾರಕ್ಕೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT