ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಹಟ್ಟಿ | ಸೌಲಭ್ಯ ವಂಚಿತ ಶಿರಹಟ್ಟಿ ಬಸ್ ನಿಲ್ದಾಣ

Published 28 ಆಗಸ್ಟ್ 2023, 3:22 IST
Last Updated 28 ಆಗಸ್ಟ್ 2023, 3:22 IST
ಅಕ್ಷರ ಗಾತ್ರ

ನಿಂಗಪ್ಪ ಹಮ್ಮಿಗಿ

ಶಿರಹಟ್ಟಿ: ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಉತ್ತಮ ಶೌಚಾಲಯವಿಲ್ಲ. ‌ಸ್ವಚ್ಛತೆ ಎನ್ನುವುದು ಇಲ್ಲಿ ಮರೀಚಿಕೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು.

–ಇದು ಶಿರಹಟ್ಟಿ ಬಸ್‌ ನಿಲ್ದಾಣದಲ್ಲಿ ಕಂಡುಬರುವ ನಿತ್ಯದ ಗೋಳು.

ಪಟ್ಟಣದಲ್ಲಿರುವ ಕೇಂದ್ರ ಬಸ್‌ ನಿಲ್ದಾಣದಲ್ಲಿನ ಅವ್ಯವಸ್ಥೆಗಳಿಂದಾಗಿ ತಾಲ್ಲೂಕಿನ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವಾರು ಸಂಘಟನೆಗಳ ಹೋರಾಟದ ಫಲವಾಗಿ ದೊರೆತ ಸಾರಿಗೆ ಘಟಕದಿಂದ ಏನೇನೂ ಲಾಭ ಇಲ್ಲದಂತಾಗಿದೆ.

ನಿಲ್ದಾಣದಿಂದ ಪ್ರಯಾಣಿಸುವ ಬಸ್‌ಗಳು ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಸಮರ್ಪಕ ಸೇವೆ ದೊರೆಯದೇ ಪ್ರಯಾಣಿಕರ ಪರದಾಡುತ್ತಿದ್ದಾರೆ. ಬಸ್‌ನಿಲ್ದಾಣದಲ್ಲಿ ಮೂಲಸೌಕರ್ಯವಿಲ್ಲದೇ ಪ್ರಯಾಣಿಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ನಿಲ್ದಾಣದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರ ಹೊಸ ಬಸ್ ಖರೀದಿ ಮಾಡಿದ್ದು ನೂತನ ಘಟಕಕ್ಕೆ ಪ್ರಥಮ‌ ಆದ್ಯತೆ ನೀಡುವುದಾಗಿ ಭರವಸೆ ನೀಡಿದೆ. ಸುಮಾರು 10 ಬಸ್ ಬೇಡಿಕೆ ಇಟ್ಟಿದ್ದು ಪೂರೈಸುವ ಭರವಸೆ ಇದೆ.
ಶಾಂತಾಬಾಯಿ ಕದಾಂಪುರ ಶಿರಹಟ್ಟಿ ಡಿಪೋ ಮ್ಯಾನೇಜರ್

ಡಕೋಟಾ ಬಸ್ ಹಂಚಿಕೆ:  ಹಲವಾರು ಸಂಘಟನೆಗಳ ಹೋರಾಟದ ಫಲವಾಗಿ ಮಂಜೂರಾದ ನೂತನ ಸಾರಿಗೆ ಘಟಕ 2022ರ ಮಾರ್ಚ್‌ 13ರಂದು ಉದ್ಘಾಟನೆಯಾಯಿತು. ಹೊಸ ಘಟಕಕ್ಕೆ ಹಳೆ ಬಸ್‌ಗಳನ್ನು ನೀಡಿದ್ದರಿಂದ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಬಸ್‌ಗಳು ಕೆಟ್ಟು ನಿಲ್ಲುತ್ತಿದ್ದು, ತಾಲ್ಲೂಕಿನ ಜನರು ಪರದಾಡುವಂತಾಗಿದೆ.

19 ಶೆಡ್ಯೂಲ್

ಸದ್ಯ ಶಿರಹಟ್ಟಿಯ ಸಾರಿಗೆ ಘಟಕಕ್ಕೆ 19 ಶೆಡ್ಯೂಲ್ ನೀಡಲಾಗಿದೆ. ಒಟ್ಟು 21 ಬಸ್‌ಗಳು ಇದ್ದು, ಇದರಲ್ಲಿ ಬಹುತೇಕ ಬಸ್‌ಗಳು ರಿಪೇರಿ ಹಂತದಲ್ಲಿವೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ 50 ಗ್ರಾಮಗಳು ಬರಲಿದ್ದು, ಪ್ರಸ್ತುತ ಇರುವ 19 ಶೆಡ್ಯೂಲ್‌ಗಳಲ್ಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೂ ಸರಿಯಾದ ಸಮಯಕ್ಕೆ ಸಾರಿಗೆ ಸೌಲಭ್ಯ ಸಿಗದೇ ಇರುವುದು ತಾಲ್ಲೂಕಿನ ಗ್ರಾಮೀಣರ ದೌರ್ಭಾಗ್ಯವಾಗಿದೆ.

ಸೌಲಭ್ಯ ಕೊರತೆ

ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಸೌಲಭ್ಯ ಹಾಗೂ ಸ್ವಚ್ಛತೆ ಮರಿಚೀಕೆಯಾಗಿದೆ. ನಿಲ್ದಾಣದ ಕಾಂಪೌಂಡ್‌ಗೆ ಮೂತ್ರ ಮಾಡುವುದರಿಂದ ಆವರಣ ಗಬ್ಬುವಾಸನೆ ಬರುತ್ತಿದೆ. ಇರುವ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ಇಡೀ ಆವರಣವನ್ನು ಆಕ್ರಮಿಸಿಕೊಂಡಿದೆ. ಇದರಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡೆ ಶೌಚಾಲಯಕ್ಕೆ ತೆರಳುವ ಅನಿವಾರ್ಯತೆ ಇದೆ. ಬಸ್ ನಿಲ್ದಾಣದಲ್ಲಿನ ಒಂದು ಭಾಗವಂತೂ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ.

ಹೆಸರಿಗೆ ಮಾತ್ರ ಡಿಪೊ ಪ್ರಾರಂಭಿಸಲಾಗಿದ್ದು ಅಧಿಕಾರಿಗಳು ಸಹ ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ದೂರ ಪ್ರಯಾಣ ಬಸ್ ಸ್ಥಗಿತಗೊಳಿಸಿ ಡಿಪೋಗೆ ಕಡಿಮೆ ಆದಾಯ ತೋರಿಸುತ್ತಿದ್ದಾರೆ.
ರಫೀಕ್‌ ಕೆರಿಮನಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ

ಮಹಿಳೆಯರಿಗೆ ಸುರಕ್ಷತೆ ಇಲ್ಲ

ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇಲ್ಲ. ಬಸ್‌ಗಳು ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ಸಂಜೆ ಸಮಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಬೆರಳೆಣಿಕೆಯಷ್ಟು ಮಾತ್ರ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ರಾತ್ರಿ ವೇಳೆ ನಿಲ್ದಾಣದ ಸುತ್ತಲೂ ಕತ್ತಲು ಆವರಿಸುತ್ತದೆ. ಅಲ್ಲದೆ ನಿಲ್ದಾಣದಲ್ಲಿ ಎಲ್ಲಿ ಹುಡುಕಿದರೂ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ‌.

ನಡಾ ರಸ್ತೆದಾಗಾ ಬಸ್‌ ಕೆಡಾಕತ್ತವು. ನಮ್ಮೂರಿನ ರಸ್ತೆನೂ ಹಂಗಾ ಅದಾವು ಜೀವಾ ಕೈಯಾಗ ಹಿಡ್ಕೊಂಡ ಬಸ್ ಹತ್ತೊ ಪಾಳಿ ಬಂದೈತಿ. ಹೊಸ ಬಸ್ ಕೊಟ್ರ ಪುಣ್ಯ ಬರತೈತಿ ನೋಡ್ರೀ....
ಶೇಖಪ್ಪಜ್ಜ, ವೃದ್ಧ ಪ್ರಯಾಣಿಕ

ವಿದ್ಯಾರ್ಥಿಗಳ ಗೋಳು

ಗ್ರಾಮೀಣ ಪ್ರದೇಶದ ಬಸ್‌ಗಾಗಿ ಬಕ ಪಕ್ಷಿಯಂತೆ ಕಾಯುವ ಪ್ರಯಾಣಿಕರು ಗೋಳು ನಿರಂತರವಾಗಿದೆ. ಸಮರ್ಪಕವಾಗಿ ಬಸ್‌ ಸೇವೆ ಒದಗಿಸುವಂತೆ ವಿದ್ಯಾರ್ಥಿಗಳು ಆಗಾಗ ಪ್ರತಿಭಟನೆಗಳನ್ನು ನಡೆಸುತ್ತಿರುತ್ತಾರೆ. ತರಗತಿಯಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕಿಂತ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಬಸ್‌ ನಿಲ್ದಾಣದಲ್ಲೇ ಕಳೆಯುವ ದುಃಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ, ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್‌ಗಳನ್ನು ಓಡಿಸಿ, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಮುಖಂಡರು, ಪೋಷಕರು ಆಗ್ರಹಿಸಿದ್ದಾರೆ.

ಹದಗೆಟ್ಟ ರಸ್ತೆ

ಜನರ ಪರದಾಟ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು ಬಸ್‌ಗಳು ಕೇವಲ ಮಹಿಳೆಯರಿಗೆ ಸೀಮಿತ ಎನ್ನುವಂತಾಗಿದೆ. ಇದರಿಂದ ಪುರುಷ  ಪ್ರಯಾಣರ ಸಂಖ್ಯೆ ಕಡಿಮೆಯಾಗಿದೆ. ಇನ್ನೊಂದೆಡೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. 52 ಸೀಟುಗಳು ಇರುವ ಬಸ್‌ನಲ್ಲಿ 100ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿರುವುದರಿಂದ ಬಸ್‌ಗಳು ರಿಪೇರಿಗೆ ಬರುತ್ತಿವೆ ಎನ್ನುತ್ತಾರೆ ಡಿಪೊ ಮ್ಯಾನೇಜರ್. ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ಬಸ್‌ಗಳು ಹಾಳಾಗಿವೆ. ರಸ್ತೆಯಲ್ಲಿನ ಗುಂಡಿ ಮುಚ್ಚುವುದು ದುರಸ್ತಿ ಇಲ್ಲವೇ ಹೊಸ ರಸ್ತೆ ನಿರ್ಮಾಣ ಮಾಡಿ ಸುಗಮ ಸಂಚಾರಕ್ಕೆ ಜನಪ್ರತಿನಿಧಿಗಳು ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ವ್ಯವಸ್ಥಿತ ನಿಲುಗಡೆಗೆ ಕ್ರಮವಹಿಸಿ: ಶಿರಹಟ್ಟಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ.  ಬಸ್ ನಿಲ್ದಾಣದಲ್ಲಿ ವ್ಯವಸ್ಥಿತವಾಗಿ ಬಸ್‌ಗಳ ನಿಲುಗಡೆ ಮಾಡಬೇಕು.  ಬಸ್‌ ನಿಲ್ದಾಣದ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಮಾರ್ಗ ಮಧ್ಯೆ ಕೆಟ್ಟು ನಿಂತಿರುವ ಸಾರಿಗೆ ಬಸ್‌
ಮಾರ್ಗ ಮಧ್ಯೆ ಕೆಟ್ಟು ನಿಂತಿರುವ ಸಾರಿಗೆ ಬಸ್‌
ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಬಸ್ ನಿಲ್ದಾಣದಲ್ಲಿನ ಮಳಿಗೆಗಳ ಹಿಂಭಾಗದ ಆವರಣ ಗಬ್ಬು ನಾರುತ್ತಿದೆ
ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಬಸ್ ನಿಲ್ದಾಣದಲ್ಲಿನ ಮಳಿಗೆಗಳ ಹಿಂಭಾಗದ ಆವರಣ ಗಬ್ಬು ನಾರುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT