ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಬಂಡಾಯ ಎಲ್ಲ ಕಡೆ ಪರಿಣಾಮ ಬೀರಲಿದೆ: ಅರುಣ ಅಣ್ಣಿಗೇರಿ ಎಚ್ಚರಿಕೆ

Published 24 ಮಾರ್ಚ್ 2024, 16:03 IST
Last Updated 24 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ಗದಗ: ‘ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಕ್ಕಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಅವರ ನಿರ್ಧಾರವನ್ನು ನಾವು ಬೆಂಬಲಿಸುತ್ತಿದ್ದು, ಅವರ ಗೆಲುವಿಗಾಗಿ ನಾವೆಲ್ಲರೂ ಶ್ರಮಿಸುವೆವು’ ಎಂದು ಬಿಜೆಪಿ ಮುಖಂಡ ಹಾಗೂ ಕೆ.ಎಸ್.ಈಶ್ವರಪ್ಪ ಬೆಂಬಲಿಗ ಅರುಣ ಅಣ್ಣೀಗೇರಿ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕುರುಬ ಸಮುದಾಯದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವುದರ ಪರಿಣಾಮ ಕೇವಲ ಶಿವಮೊಗ್ಗಕ್ಕಷ್ಟೇ ಅಲ್ಲ; ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ಅದಕ್ಕೆ ಗದಗ-ಹಾವೇರಿ ಕ್ಷೇತ್ರವೂ ಹೊರತಾಗಲ್ಲ. ಇನ್ನೂ ಯಾರಿಗೂ ‘ಬಿ’ ಫಾರಂ ಕೊಟ್ಟಿಲ್ಲ. ಬಿಜೆಪಿ ವರಿಷ್ಠರು ಕೂಡಲೇ ಸಮಸ್ಯೆ ಬಗೆಹರಿಸಿ, ಈಶ್ವರಪ್ಪನವರ ಪುತ್ರ ಕಾಂತೇಶ ಅವರಿಗೆ ಹಾವೇರಿಯಲ್ಲಿ ಟಿಕೆಟ್ ನೀಡಿದರೆ ಒಳ್ಳೆಯದಾಗತ್ತದೆ. ಹಠಕ್ಕೆ ಬಿದ್ದಂತೆ ಮಾಡಿದರೆ ಬಿಜೆಪಿಯವರು ಅದರ ಪ್ರತಿಫಲ ಉಣ್ಣುವುದು ನಿಶ್ಚಿತ’ ಎಂದು ಎಚ್ಚರಿಸಿದರು.

‘ಹಾಲಿ ಸಂಸದ ಶಿವಕುಮಾರ ಉದಾಸಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಆಗ ಈಶ್ವರಪ್ಪನವರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಪುತ್ರ ಕಾಂತೇಶಗೆ ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಯಡಿಯೂರಪ್ಪನವರು, ಆರು ತಿಂಗಳು ಮುಂಚೆಯೇ ಕ್ಷೇತ್ರದಲ್ಲಿ ಓಡಾಡಿ, ಸಂಘಟನೆ ಮಾಡು. ಟಿಕೆಟ್ ಕೊಡಿಸುವುದಷ್ಟೇ ಅಲ್ಲ, ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ಯಡಿಯೂರಪ್ಪನವರು ಕೆ.ಇ.ಕಾಂತೇಶ ಅವರಿಗೆ ಟಿಕೆಟ್ ನೀಡದೇ ವಂಚನೆ ಮಾಡಿ, ಮಾತು ಕೊಟ್ಟಂತೆ ನಡೆದುಕೊಳ್ಳಲಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿ ವರಿಷ್ಠರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹ ಕೆ.ಎಸ್.ಈಶ್ವರಪ್ಪ ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ  ಮಾಡಿದ್ದರು. ಬಳಿಕ ಮಗನಿಗೆ ಟಿಕೆಟ್ ಕೇಳಿದ್ದರೂ ನೀಡಿರಲಿಲ್ಲ. ಆದರೆ, ಪ್ರಧಾನಿ ಮೋದಿ ಅವರು ಈಶ್ವರಪ್ಪನವರಿಗೆ ಕರೆ ಮಾಡಿ, ತಾಳ್ಮೆಯಿಂದ ಇರಿ. ಮುಂದಿನ ದಿನಗಳಲ್ಲಿ ಸುವರ್ಣ ಅವಕಾಶ ಸಿಗಲಿದೆ ಎಂದಿದ್ದರು. ಆದರೆ, ಯಾವುದೇ ಸ್ಥಾನಮಾನ ನೀಡದೇ ಬದಿಗೆ ಸರಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೆ.ಎಸ್‌.ಈಶ್ವರಪ್ಪ ಅವರು ಹಿಂದುಳಿದ ವರ್ಗದ ಧೀಮಂತ ನಾಯಕ. ಅವರಿಗೆ ಆಗಿರುವ ನೋವು, ಅನ್ಯಾಯಕ್ಕೆ ಅವರು ತೆಗೆದುಕೊಂಡ ತೀರ್ಮಾನಕ್ಕೆ ನಾವೂ ಬದ್ಧರಾಗಿದ್ದೇವೆ. ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ. ಗದಗ ಜಿಲ್ಲೆಯಿಂದ ಕನಿಷ್ಠ ಐನೂರು ಮಂದಿ ಕಾರ್ಯಕರ್ತರು ಶಿವಮೊಗ್ಗ ಮತಕ್ಷೇತ್ರಕ್ಕೆ ತೆರಳಿ, ಅವರ ಪರ ಪ್ರಚಾರ ಮಾಡಿ, ಅವರ ಗೆಲುವಿಗೆ ಹೋರಾಡುತ್ತೇವೆ’ ಎಂದು ಹೇಳಿದರು.

ರಾಯಣ್ಣ ಬ್ರಿಗೇಡ್ ನಾಯಕಿ ಸುಜಾತಾ ಕಡೆಮನಿ, ಅರುಣ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT