ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಟ್ಟಾಳು ಉತ್ತಂಗಿ ಚನ್ನಪ್ಪ

ಶಿವಾನುಭವದಲ್ಲಿ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ
Last Updated 18 ಡಿಸೆಂಬರ್ 2020, 1:55 IST
ಅಕ್ಷರ ಗಾತ್ರ

ಗದಗ: ‘ಕ್ರೈಸ್ತ ಧರ್ಮೋಪದೇಶಕರಾಗಿ ಕಾರ್ಯನಿರ್ವಹಿಸಿದ ಉತ್ತಂಗಿ ಚನ್ನಪ್ಪನವರು ಕನ್ನಡದ ಕಟ್ಟಾ ಅಭಿಮಾನಿ. ಸರ್ವಜ್ಞನ ತ್ರಿಪದಿಗಳನ್ನು ಹುಡುಕಿ, ಸಂಪಾದಿಸಿ ಕನ್ನಡಿಗರಿಗೆ ಸಾಹಿತ್ಯ ಸುಧೆಯನ್ನು ಉಣಬಡಿಸಿದ ಕೀರ್ತಿ ಅವರದ್ದು’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ 2,515ನೇ ಶಿವಾನುಭವದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಆಂದೋಲದಲ್ಲಿ ಭಾಗವಹಿಸಿ ರಾಷ್ಟ್ರಪ್ರೇಮ ಮೆರೆದ ಅವರು, ಅನೇಕ ಮೌಲಿಕ ಕೃತಿಗಳನ್ನು ನೀಡಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ್ದಾರೆ. ಬಸವಾದಿಶರಣರ ವಿಚಾರಗಳಿಂದ ಪ್ರಭಾವಿತರಾಗಿದ್ದ ಅವರು ಶರಣ ತತ್ವದಡಿ ಬದುಕಿದ ಮಹಾನ್ ಚೇತನ’ ಎಂದು ಬಣ್ಣಿಸಿದರು.

‘ರೆವರೆಂಡ್ ಉತ್ತಂಗಿ ಚನ್ನಪ್ಪನವರ ಕೊಡುಗೆ’ ಎಂಬ ವಿಷಯವಾಗಿ ನರೇಗಲ್ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಎಂ.ಪವಾಡಿಗೌಡ್ರ ಉಪನ್ಯಾಸ ನೀಡಿ, ‘ಕನ್ನಡಿಗರಿಗೆ ಅಜ್ಞಾತವಾಗಿ ಉಳಿಸಿದ್ದ ಸರ್ವಜ್ಞನ ಕುರಿತು ಸಂಶೋಧನೆ ನಡೆಸಿ, ಆ ಸಾಹಿತ್ಯವನ್ನು ಪರಿಚಯಿಸಿದ್ದು ಉತ್ತಂಗಿಯವರ ಬದುಕಿನ ದೊಡ್ಡ ಸಾಧನೆ. ವಿಶ್ವದ ವಿವಿಧ ಧರ್ಮದ ಸಾರಗಳನ್ನು ಅರ್ಥೈಸಿಕೊಂಡರು. ವಚನಗಳ ವಿಚಾರಗಳನ್ನು ಗ್ರಹಿಸಿ ತಮ್ಮ ಬರಹದ ಮೂಲಕ ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಿದರು’ ಎಂದು ಹೇಳಿದರು.

‘ತಮ್ಮ ಬಹುಪಾಲು ಸಮಯವನ್ನು ಕನ್ನಡ ಸಾಹಿತ್ಯದ ಹಳೆಯ ಗ್ರಂಥಗಳ ಸಂಪಾದನೆಗಾಗಿ ಕಳೆದರು. ಕೈಬರಹ ಪ್ರತಿಗಳ ಸಂಪೂರ್ಣ ಸಂಗ್ರಹಣ, ಶುದ್ಧೀಕರಣ ಹಾಗೂ ಸಂಯೋಜನೆಯ ಕಾರ್ಯವನ್ನು ಮಾಡಿದರು. ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರ ಪರಿಣಾಮವಾಗಿ 1948ರಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದವು. ಉತ್ತಂಗಿ ಚನ್ನಪ್ಪನವರು ಶರಣರಂತೆ ಬದುಕಿದರು’ ಎಂದು ತಿಳಿಸಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಶ್ರೀನಿಕ್ ಬಸವರಾಜ ಉಳ್ಳಾಗಡ್ಡಿ ಹಾಗೂ ವಚನ ಚಿಂತನ ಸಹನಾ ಶಿವಪ್ರಕಾಶ ಮಡಿವಾಳರ ಪ್ರಸ್ತುತಪಡಿಸಿದರು.

ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಸಂಘದ ಅಧ್ಯಕ್ಷ ಎಂ.ಸಿ.ಐಲಿ ಸ್ವಾಗತಿಸಿದರು. ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ ರತ್ನಕ್ಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT