ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ಲ ಶ್ರೀಗುರುಕುಮಾರ: ಮರೆಯದ ಮಾಣಿಕ್ಯ

ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಚಿಂತನೆ, ಪ್ರೇರಣೆ
ಡಾ.ಅನ್ನದಾನೀಶ್ವರ ಶಿವಯೋಗಿಳು, ಸಂಸ್ಥಾನಮಠ, ಮುಂಡರಗಿ
Published : 14 ಸೆಪ್ಟೆಂಬರ್ 2024, 6:48 IST
Last Updated : 14 ಸೆಪ್ಟೆಂಬರ್ 2024, 6:48 IST
ಫಾಲೋ ಮಾಡಿ
Comments

ಲಿಂ. ಹಾನಗಲ್ಲ ಗುರುಕುಮಾರೇಶ್ವರರು ಸಮಾಜದ ಸಂಜೀವಿನಿಯಾಗಿದ್ದರು. ಜೀವನದುದ್ದಕ್ಕೂ ಸಾರ್ಥಕ ಬದುಕನ್ನು ಬಾಳಿದವರು. ಅಜ್ಞಾನ, ಅಂಧಕಾರದಿಂದ ಬಡವಾಗಿದ್ದ ಜೊತೆಗೆ ಜಡವಾಗಿದ್ದ ನಾಡನ್ನು ಶರಣ ಸಂಸ್ಕೃತಿಯ ನೆಲೆಯಲ್ಲಿ ಪುನಶ್ಚೇತನಗೊಳಿಸಿದವರು.

ರಾಣೆಬೆನ್ನೂರಿನ ಬಡ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆರೈಕೆಯಲ್ಲಿ ಬೆಳೆದು, ಅಜ್ಜನಿಂದ ಸಂಸ್ಕಾರ ಕಲಿತರು. 10ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಶಿಕ್ಷಕ ವೃತ್ತಿ ಆರಂಭಿಸಿದರು. ನಿಜಗುಣರ ಷಟ್‍ಶಾಸ್ತ್ರ ಚಿಂತನೆಯಲ್ಲಿ ಹುಬ್ಬಳ್ಳಿ ಸಿದ್ಧಾರೂಡರ ಆಶ್ರಯ ಪಡೆದು, ಇಷ್ಟಲಿಂಗದ ಅವಶ್ಯಕತೆಯಿಲ್ಲವೆಂಬ ವಿಚಾರವನ್ನು ತಿಳಿಯಲು ಎಮ್ಮಿಗನೂರಿನ ಜಡೆಯ ಸಿದ್ಧರನ್ನು ಸಂದರ್ಶಿಸಿದರು.

ಮುಂದೆ ಎಳಂದೂರು ಬಸವಲಿಂಗ ಯತಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರು. ಸಮಾಜ ಸುಧಾರಿಸಲು ಶರಣ ಸಂಸ್ಕೃತಿಯನ್ನು ಉಳಿಸಲು ಧರ್ಮವನ್ನು ಬೆಳೆಸಲು ಗುರುಗಳಿಂದ ಆದೇಶಿಸಲ್ಪಟ್ಟರು. ಗುರುಗಳ ವಿಯೋಗದಿಂದ ಖಿನ್ನರಾದರೂ ಧೈರ್ಯಗುಂದದೇ ಅನುಷ್ಠಾನ ಮಾಡಬಯಸಿದರು.

ಕೆಂಡಪ್ಪಗೌಡರ ಮಾರ್ಗದರ್ಶನದಿಂದ ಹಾನಗಲ್ಲ ವಿರಕ್ತಮಠದ ಫಕೀರಸ್ವಾಮಿಗಳ ದರ್ಶನ ಪಡೆದರು. ಬಯಸದೇ ಬಂದ ಮಠಾಧಿಕಾರವನ್ನು ಒಪ್ಪದೆ ಗುರುಸೇವೆಯ ಮೂಲಕ ಸ್ವೀಕರಿಸಿದರು. ಮಠದ ಜೀರ್ಣೋದ್ಧಾರಕ್ಕಿರಿಸಿದ 3,000 ಬೆಳ್ಳಿ ನಾಣ್ಯ, 800 ಚೀಲ ಬತ್ತವನ್ನು ಬರಗಾಲ, ರೋಗ ಪೀಡಿತ ಜನರಿಗಾಗಿ ದಾಸೋಹ ಮಾಡಿದರು. ಸ್ವತಃ ಸಂಚರಿಸಿ ರೋಗಿಗಳ ಉಪಚರಿಸಿದ ಕರುಣಾಳು ಇವರು.

ವೈರಾಗ್ಯ ಮೂರ್ತಿ ಮಲ್ಲಣಾರ್ಯರ ಪ್ರೇರಣೆಯಂತೆ ದೇಶ ಸಂಚಾರ ಮಾಡಿ ವೀರಶೈವರನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭೆಯನ್ನು 1904ರಲ್ಲಿ ಹಾಗೂ ವೀರಶೈವ ಶಿವಯೋಗ ಮಂದಿರವನ್ನು ರಚಿಸಿ ಮಠಾಧೀಶರಾಗುವ ಸಾಧಕರಿಗೆ ಧರ್ಮ-ಸಂಸ್ಕೃತಿಯ ಶಿಕ್ಷಣ ನೀಡಲು ಕಾರಣರಾದರು. ಇವರ ನೆರವಿನಿಂದ ನಾಡಿನ ಸಾವಿರಾರು ಸಾಧಕರು ರೂಪಗೊಂಡರು.

ಅಂಧನಾದ ಗದಿಗಯ್ಯನಿಗೆ ದಕ್ಷಿಣಾದಿ-ಉತ್ತರಾದಿ ಸಂಗೀತ ಶಿಕ್ಷಣ ಹಾಗೂ ತಮ್ಮ ಮಠದಿಂದ ₹ 12 ಸಾವಿರ ನೀಡಿದರು. ಗದುಗಿನಲ್ಲಿ ಸಂಗೀತ ತಜ್ಞ ಪಂ.ಪಂಚಾಕ್ಷರಿ ಗವಾಯಿ ಅವರಿಗೆ ವೀರೇಶ್ವರ ಪುಣ್ಯಾಶ್ರಾಮ ಸ್ಥಾಪಿಸಲು ಕಾರಣರಾದರು. ಅಂಧ-ಅನಾಥರ ಬಾಳಿಗೆ ಬೆಳಕು ನೀಡಲು ಪ್ರೇರಕರಾದರು. ಕುಮಾರ ಶಿವಯೋಗಿಗಳು ಕೈಗೊಳ್ಳದ ಕಾರ್ಯಗಳಿಲ್ಲ. ಕೃಷಿ-ವಾಣಿಜ್ಯ-ವೈದ್ಯಕೀಯ-ಸ್ತ್ರೀ ಸಬಲೀಕರಣ, ಖಾದಿ ಗ್ರಾಮೋದ್ಯೋಗ, ಯಾಂತ್ರೀಕರಣ ಹೀಗೆ ಹಲವು ಕ್ಷೇತ್ರಗಳ ಪ್ರಗತಿಗಾಗಿ ಪ್ರಯತ್ನಿಸಿದರು. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಚಿಂತಿಸಿದರು.

ದೇಶದಲ್ಲಿ ಖ್ಯಾತಿ ಪಡೆದ ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ, ಬಾಗಲಕೋಟೆಯ ಬಸವೇಶ್ವರ ವಿದ್ಯಾ ವರ್ಧಕ ಸಂಘ, ಬಳ್ಳಾರಿಯ ವೀರಶೈವ ವಿದ್ಯಾ ವರ್ಧಕ ಸಂಸ್ಥೆಗಳು ಹುಟ್ಟಿಕೊಳ್ಳುವಲ್ಲಿ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಅವರ ಪ್ರೇರಣೆ ಹಾಗೂ ಸಲಹೆಯಂತೆ ಮುಂಡರಗಿಯ ಮಠವೂ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆಯಿತು.

ಜಯಂತ್ಯುತ್ಸವ ಇಂದು
ಸೆ. 14ರಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಹಾನಗಲ್ಲಿನ ಗುರುಕುಮಾರೇಶ್ವರರ 157ನೇ ಜಯಂತ್ಯುತ್ಸವ ನಡೆಯಲಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 10 ದಿನಗಳ ಕಾಲ ಹಲವು ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಾರು ಮಠಾಧೀಶರು ಸಚಿವರು ಸಂಸದರು ಶಾಸಕರು ಹಾಗೂ ನಾಡಿನ ವಿವಿಧ ಭಾಗಗಳ ಗಣ್ಯರು ಚಿಂತಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT