ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಬಿಟ್ಟು ಬೇರೇನೂ ಕಾಣಿಸಲ್ಲ: ಶ್ರೀರಾಮುಲು ಲೇವಡಿ

Last Updated 13 ಫೆಬ್ರುವರಿ 2021, 1:43 IST
ಅಕ್ಷರ ಗಾತ್ರ

ಗದಗ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಬೇರೇನೂ ಕಾಣಿಸುವುದಿಲ್ಲ’ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಡಿದರು.

ಗದುಗಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ ಮಾಡುವ ಅವರಿಗೆ ಸರ್ಕಾರ ಬಾದಾಮಿ ಕ್ಷೇತ್ರ ಒಂದರಲ್ಲೇ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಕಾಣಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಆದರೆ, ಅವರು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಮುಖ್ಯಮಂತ್ರಿ ಕುರ್ಚಿಗೆ ಹಾರುವ ಉದ್ದೇಶ ಮಾತ್ರ ಹೊಂದಿದ್ದಾರೆ. ಅದಕ್ಕಾಗಿ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌ ಪಕ್ಷದ ಒಳಗಡೆಯೇ ವಾತಾವರಣ ಸರಿ ಇಲ್ಲ. ಅವರಲ್ಲೇ ಮೂರು ಬಣಗಳಿವೆ. ಸಿದ್ದರಾಮಯ್ಯ ಅಧಿಕಾರ ಹಿಡಿಯುವ ಪ್ರಯತ್ನದ ಭಾಗವಾಗಿಯೇ ಮತ್ತೊಮ್ಮೆ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಆದರೆ, ಅವರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಹಿಂದುಳಿದವರಿಗೆ ಏನು ಮಾಡಿದ್ದಾರೆ ಎಂಬುದರ ಬಗ್ಗೆಯೂ ಆಲೋಚಿಸಬೇಕು’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಅವರು ಎಸ್‌ಸಿ ಮೀಸಲಾತಿ ಹೋರಾಟದಲ್ಲಿ ಕುರುಬ ಸಮುದಾಯದೊಂದಿಗೆ ಗುರುತಿಸಿಕೊಂಡಿಲ್ಲ. ಅದು ಯಾಕೆ? ಎಂಬ ವಿಶ್ಲೇಷಣೆ ಮಾಡುವುದಿಲ್ಲ. ಸಚಿವ ಕೆ.ಎಸ್‌.ಈಶ್ವರ‍‍ಪ್ಪ ಮಂತ್ರಿಯಾಗಿದ್ದರೂ ಸಮುದಾಯ ದೊಡ್ಡದು ಎಂಬ ಕಾರಣಕ್ಕೆ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ ಎಂಬ ಅವರ ಆರೋಪ ‘ಕುಣಿಯಲಾರದವಳು ನೆಲ ಡೊಂಕು’ ಎಂಬ ಮಾತು ನೆನಪಿಸುತ್ತದೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT