ಗುರುವಾರ , ಜುಲೈ 29, 2021
23 °C
ಮಹೋತ್ಸವದ ಸಿದ್ಧತೆ ಪರಿಶೀಲನೆ: ಸೌಲಭ್ಯ ಕಲ್ಪಿಸಲು ಮುಜರಾಯಿ ಸಚಿವರಿಗೆ ಆಹ್ವಾನ, ಸಭೆ–ಸಚಿವ

ಡಿ.14ರಂದು ತಲಕಾಡು ಪಂಚಲಿಂಗ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ತಲಕಾಡು ಪಂಚಲಿಂಗ ದರ್ಶನ ಕಾರ್ಯಕ್ರಮಗಳು ಡಿ.10ರಿಂದ 19ವರೆಗೆ ನಡೆಸಲು ನಿರ್ಧರಿಸಲಾಗಿದೆ. 14ರಂದು ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ. ಸಿದ್ಧತೆ ಆರಂಭವಾಗಿದ್ದು, ಸೌಲಭ್ಯ ಕಲ್ಪಿಸಲು ಮುಜರಾಯಿ ಸದ್ಯದಲ್ಲೇ ಸಚಿವರನ್ನು ಕರೆಸಿ ಸಭೆ ನಡೆಸಲಾಗುವುದು‍’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಹೋತ್ಸವ ಸಂಬಂಧ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಗುರುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಅಮಾವಾಸ್ಯೆಯಂದು ನಡೆಯಲಿರುವ ಪಂಚಲಿಂಗ ದರ್ಶನ ಕಾರ್ಯಕ್ರಮವನ್ನು ಯಾವ ರೀತಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆದವು.

ಪಂಚಲಿಂಗ ಸಮೂಹ ದೇವಸ್ಥಾನಗಳಾದ ವೈದ್ಯನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ, ಅರ್ಕೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳಲ್ಲಿ ನಡೆದಿರುವ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವೈದ್ಯನಾಥೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದರು.

ಮುಡುಕುತೊರೆ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ, ಬೆಟ್ಟಕ್ಕೆ ರಸ್ತೆ ಹಾಗೂ ಉದ್ಯಾನ ನಿರ್ಮಾಣ ಸಂಬಂಧ ಅಧಿಕಾರಿಗಳು ತಯಾರಿಸಿರುವ ನಕ್ಷೆಯನ್ನು ವೀಕ್ಷಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ‘ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಜವಾಬ್ದಾರಿಗಳನ್ನು ಬೇರೆ ಬೇರೆ ವಿಭಾಗಗಳಿಗೆ ವಿಂಗಡಿಸಲಾಗಿದೆ. ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ ಖಾಲಿಯಾಗಿದ್ದು, ಸದ್ಯದ ಮಟ್ಟಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಿದೆ’ ಎಂದು ಮಾಹಿತಿ ನೀಡಿದರು‌.

ಲೋಕೋಪಯೋಗಿ ಎಂಜಿನಿಯರ್ ಮಾತನಾಡಿ, ‘ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ತಲಕಾಡು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಸಭೆಯ ಗಮನಕ್ಕೆ ತಂದರು.

ಪಂಚಾಯತ್ ರಾಜ್ ಇಲಾಖೆ ಅಧಿಕಾರಿ, ‘ಮಹೋತ್ಸವ ಸಂದರ್ಭದಲ್ಲಿ ಸ್ನಾನಗೃಹ, ಬಟ್ಟೆ ಬದಲಿಸುವ 1,300 ಗೃಹವನ್ನು ನಿರ್ಮಿಸಲಾಗುವುದು’ ಎಂದರು.

‘ಮಹೋತ್ಸವದ ಅವಧಿಯಲ್ಲಿ ದೇಗುಲ, ಮುಖ್ಯರಸ್ತೆ, ಸ್ನಾನಘಟ್ಟಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು’ ಎಂದು ಸೆಸ್ಕ್‌ ಅಧಿಕಾರಿ ಹೇಳಿದರು.

ಶಾಸಕ ಎಂ.ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ, ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.