ಶನಿವಾರ, ಸೆಪ್ಟೆಂಬರ್ 18, 2021
30 °C
‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿ ಲೋಕಾರ್ಪಣೆ

ಸಾಹಿತ್ಯ ಭಾಷೆಯಲ್ಲಿ ಇತಿಹಾಸ ನಿರೂಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಇತಿಹಾಸ ಪುರುಷರನ್ನು ವಾಸ್ತವವಾಗಿ ಚಿತ್ರಿಸಬೇಕು. ಪುರಾಣದ ಪವಾಡ ಪುರುಷರನ್ನಾಗಿ ಮಾಡಬಾರದು’ ಎಂದು ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ತೋಂಟದಾರ್ಯ ಮಠದ ಶಿವಾನುಭವ ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಕಲಬುರ್ಗಿಯವರ ಸ್ಮರಣೆ ಹಾಗೂ ‘ಹಗಲಿನಲ್ಲಿಯೆ ಸಂಜೆಯಾಯಿತು’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಠದ ಪರಿಸರದಲ್ಲಿ ಬೆಳೆದ ಸಿದ್ದು ಯಾಪಲಪರವಿ ಅವರು ಸ್ವಾಮೀಜಿ ವ್ಯಕ್ತಿತ್ವವನ್ನು ಸಹಜವಾಗಿ ನಿರೂಪಿಸಿದ್ದಾರೆ. ಇತಿಹಾಸವನ್ನು ಸಾಹಿತ್ಯ ಭಾಷೆಯಲ್ಲಿ ಓದಿಸಿಕೊಂಡು ಹೋಗುವ ರೀತಿಯಲ್ಲಿ ಬರೆದಿರುವುದು ವಿಶೇಷ. ಸರಳ, ಸುಲಲಿತ ಭಾಷೆ ಮತ್ತು ಪ್ರಾಮಾಣಿಕ ಅಭಿವ್ಯಕ್ತಿ ‘ಹಗಲಿನಲ್ಲಿಯೆ ಸಂಜೆಯಾಯಿತು’ ಕೃತಿಯ ವಿಶೇಷ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಸಿದ್ಧನಗೌಡ ಪಾಟೀಲ ಮಾತನಾಡಿ, ‘ತೋಂಟದಾರ್ಯ ಶ್ರೀಗಳ ಒಡನಾಡಿ ಶಿಷ್ಯ ಸಿದ್ದು ಯಾಪಲಪರವಿ ಬರೆದ ಕೃತಿ ಸಾಹಿತ್ಯಕ ಐತಿಹಾಸಿಕ ದಾಖಲೆಯಾಗಿದೆ. ಅಜ್ಜಾ ಅವರ ವೈಯಕ್ತಿಕ ಬದುಕಿನ ಮರೆತು ಹೋದ ಅನೇಕ ಘಟನೆಗಳನ್ನು ಆಪ್ತವಾಗಿ, ಸುಲಲಿತವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಕಲಬುರ್ಗಿಯವ ವೈದಿಕತೆಯನ್ನು ಸಂಶೋಧನಾತ್ಮಕವಾಗಿ ಖಂಡಿಸಿದ್ದರು. ಸಮಾಜ ಅದನ್ನು ಅರಗಿಸಿಕೊಳ್ಳಲು ವಿಫಲವಾಯಿತು’ ಎಂದರು.

ಪುಸ್ತಕ ಪ್ರಕಟಿಸಿದ ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ, ‘ತೋಂಟದಾರ್ಯ ಸ್ವಾಮೀಜಿ ಕುರಿತು ಮೂವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಸಿದ್ದು ಯಾಪಲಪರವಿ ಘಟನೆಗಳನ್ನು ಮನೋಜ್ಞವಾಗಿ ದಾಖಲಿಸಿದ್ದಾರೆ. ಸಣ್ಣ ಪುಟ್ಟ ಸಂಗತಿಗಳನ್ನು ರಸವತ್ತಾಗಿ ವಿವರಿಸುವ ಆಪ್ತತೆ ಪುಸ್ತಕದ ಮೌಲ್ಯ ಹೆಚ್ಚಿಸಿದೆ’ ಎಂದರು. 

ಲೇಖಕ ಸಿದ್ದು ಯಾಪಲಪರವಿ ಮಾತನಾಡಿ, ‘ಜಾತ್ಯತೀತ ತೋಂಟದಾರ್ಯ ಪರಂಪರೆಯನ್ನು ಉಳಿಸುವ ಜವಾಬ್ದಾರಿ ಅವರ ಶಿಷ್ಯರ ಮೇಲಿದೆ. ಬಸವಾದಿ ಶರಣರು ಮತ್ತು ರಾಮಕೃಷ್ಣ ಮಠದ ಪರಂಪರೆಯಂತೆ ತೋಂಟದಾರ್ಯ ಪರಂಪರೆ ಉಳಿಯುವ ಕಾರ್ಯವಾಗಬೇಕು. ಪುಸ್ತಕಗಳು ಜಗತ್ತನ್ನು ಸದಾ ಆಳುತ್ತವೆ ಎಂಬ ಶ್ರೀಗಳ ಮಾತನ್ನು ಪುಸ್ತಕಗಳ ಮೂಲಕ ಶಾಶ್ವತಗೊಳಿಸಬೇಕು’ ಎಂದರು.

ಗ್ರಂಥ ದಾಸೋಹ ನೀಡಿದ ಕಾರಟಗಿಯ ಉದ್ಯಮಿ ವೀರೇಶಪ್ಪ ಚಿನಿವಾಲ ಅವರನ್ನು ಸನ್ಮಾನಿಸಲಾಯಿತು. ಡಾ.ಕೆ.ರವೀಂದ್ರನಾಥ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ಶಿವರಾಯಪ್ಪ ಲಗಳಿ ವೇದಿಕೆಯಲ್ಲಿದ್ದರು.

ಶಿವಾನುಭವ ಸಮಿತಿಯ ವಿವೇಕಾನಂದ ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ್ ಬುಳ್ಳಾ, ಶಿವಬಸಪ್ಪ ಯಂಡಿಗೇರಿ, ಸೋಮಶೇಖರ್ ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವನಗೌಡ ಗೌಡರ, ಬಸವರಾಜ ಲಗಳಿ, ವಿನೋದ ಲಗಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.