ಗುರುವಾರ , ಆಗಸ್ಟ್ 18, 2022
25 °C
₹3 ಕೋಟಿ ವೆಚ್ಚದ ಶತಮಾನೋತ್ಸವ ಭವನ ನಿರ್ಮಾಣದ ಆಶಯ

ಗದಗ: ವಿದ್ಯಾದಾನ ಸಮಿತಿಗೆ ಶತಮಾನೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಸ್ವಾತಂತ್ರ್ಯಪೂರ್ವದಲ್ಲಿ ಆರಂಭಗೊಂಡಿದ್ದ ವಿದ್ಯಾದಾನ ಸಮಿತಿಯು ನೂರು ವರ್ಷಗಳನ್ನು ಪೂರೈಸಿದ್ದು, ನ.12, 13ರಂದು ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಡಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಆರಂಭಗೊಂಡ ವಿದ್ಯಾದಾನ ಶಿಕ್ಷಣ ಸಮಿಯು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದೆ. ಇಂತಹ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭ ನೆನಪಿನಲ್ಲಿ ಉಳಿಯುವಂತೆ ಆಚರಿಸಬೇಕು ಎಂಬುದು ಹಳೆ ವಿದ್ಯಾರ್ಥಿಗಳ ಆಶಯವಾಗಿದೆ. ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ, ಸಂಸ್ಥೆಯ ಹಳೆಯ ವಿದಾರ್ಥಿ, ಉದ್ಯಮಿ ವಿಜಯ ಸಂಕೇಶ್ವರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಬಿ. ಹುಯಿಲಗೋಳ ಮಾತನಾಡಿ, ‘1911ರಲ್ಲೇ ಎನ್.ವಿ. ಹುಯಿಲಗೋಳ (ಸಾಬ ನಾರಾಯಣರಾಯರು), ಹುಯಿಲಗೋಳ ನಾರಾಯಣರಾಯರು, ಎಚ್.ಎಸ್. ಹುಯಿಲಗೋಳ, ಭೀಮರಾವ ಹುಯಿಲಗೋಳ ಒಳಗೊಂಡು ದ.ರಾ. ಬೇಂದ್ರೆ, ಕೀರ್ತಿನಾಥ ಕುರ್ತಕೋಟಿ, ಕೆ.ಎಸ್.ಎನ್. ಅಯ್ಯಂಗಾರ್‌ ಸೇರಿ ಮುಂತಾದವರು ವಿದ್ಯಾದಾನ ಸಮಿತಿಯನ್ನು ಹುಟ್ಟುಹಾಕಿದರು. ಪ್ರಸ್ತುತ ಎರಡು ಪ್ರಾಥಮಿಕ, ಎರಡು ಪ್ರೌಢಶಾಲೆ, ಎರಡು ಪದವಿ ಪೂರ್ವ, ಬಿ.ಇಡಿ ಹಾಗೂ ಚಿತ್ರಕಲಾ ಸೇರಿ ಎಂಟು ಸಂಸ್ಥೆಗಳನ್ನು ಹೊಂದಿದೆ’ ಎಂದು ತಿಳಿಸಿದರು.

‘ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಯಶಸ್ಸಿಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿರುವ ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕರಾದ ಎಚ್.ಕೆ. ಪಾಟೀಲ, ಪರಣ್ಣ ಮುನವಳ್ಳಿ ಸೇರಿ ಹಲವರ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಲಾಗುವುದು. ರಕ್ತದಾನ ಶಿಬಿರ, ನೇತ್ರದಾನ ವಾಗ್ದಾನ ಸೇರಿದಂತೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹೀಗೆ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶತಮಾನೋತ್ಸವ ನಿಮಿತ್ತ ಸ್ಮರಣ ಸಂಚಿಕೆ ಹೊರತರಲಾಗುವುದು’ ಎಂದು ಹೇಳಿದರು.

ವಿದ್ಯಾದಾನ ಸಮಿತಿಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ವಿದೇಶಗಳಲ್ಲೂ ಇದ್ದಾರೆ. ಅವರು ಒಂದೆಡೆ ಸೇರಲು ಅನುಕೂಲವಾಗುವಂತೆ www.vidyadansamiti.org ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಶತಮಾನೋತ್ಸವ ಸಹಾಯಾರ್ಥವಾಗಿ ಜೂನ್‌ 25 ಹಾಗೂ 26 ರಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ತಂಡದಿಂದ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ. ಇದಕ್ಕಾಗಿ ₹250, ₹500 ಹಾಗೂ ₹1000 ಟಿಕೆಟ್ ದರ ನಿಗದಿಪಡಿಸಲಾಗಿದೆ. ಮಾಹಿತಿಗೆ 99018 18464 ಅಥವಾ 97436 21910 ಸಂಪರ್ಕಿಸಬಹುದು ಎಂದು ತಿಳಿಸಿದರು. 

ಮೃತ್ಯುಂಜಯ ಸಂಕೇಶ್ವರ, ಲೆಕ್ಕ ಪರಿಶೋಧಕ ಆನಂದ ಎಲ್. ಪೊತ್ನೀಸ್, ಡಾ.ಪ್ಯಾರಅಲಿ ನೂರಾನಿ, ಗುರಣ್ಣ ಬಳಗಾನೂರ, ವಿಜಯಕುಮಾರ ಬಾಗಮಾರ, ವಿಜಯ ಮೇಲಗಿರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು