ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ | ಶೌಚಾಲಯ, ನೀರಿನ ಸಮಸ್ಯೆ ಪರಿಹರಿಸಿಲ್ಲವೇಕೆ? -ಜಿಲ್ಲಾಧಿಕಾರಿ ವೈಶಾಲಿ

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಶ್ನೆ
Published 14 ಡಿಸೆಂಬರ್ 2023, 14:14 IST
Last Updated 14 ಡಿಸೆಂಬರ್ 2023, 14:14 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ಸಮಸ್ಯೆಗಳಿದ್ದರೂ ಶಾಲೆಗಳನ್ನು ಹೇಗೆ ನಡೆಸುತ್ತಿದ್ದೀರಿ. ಈ ಕುರಿತು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಂಡಿಲ್ಲವೇಕೆʼ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಪ್ರಶ್ನಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ಅಹವಾಲು ಆಲಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆ ನಂ.2 ಮತ್ತು 3ರಲ್ಲಿ ಶೌಚಾಲಯ, ಗೇಟ್ ಹಾಗೂ ನೀರಿನ ಸೌಲಭ್ಯ ಕಲ್ಪಿಸುವಂತೆ ಶಾಲಾ ಶಿಕ್ಷಕಿಯರು ಹಾಗೂ ಎಸ್‌ಡಿಎಂಸಿ ಸದಸ್ಯರು ನೀಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ‘ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳಿʼ ಎಂದು ಬಿಇಒ ಅವರಿಗೆ ಸೂಚಿಸಿದರು.

ಉಣಚಗೇರಿ ಗ್ರಾಮದಲ್ಲಿ ಕೋಳಿ ಫಾರ್ಮಹೌಸ್‌ನಿಂದ ಆಗುತ್ತಿರುವ ತೊಂದರೆ ಕುರಿತು ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ‘ವಾರದೊಳಗೆ ಫಾರ್ಮಹೌಸ್‌ ಬಂದ್ ಮಾಡಿಸಿʼ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಕಿರಾಣಿ ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಮಾರಾಟ ಮಾಡುತ್ತಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪುರಸಭೆ ಸದಸ್ಯ ಯಮನೂರಪ್ಪ ತಿಕರೋಜಿ ‘ಗಜೇಂದ್ರಗಡ ಪುರಸಭೆ ಆಡಳಿತ ಮಂಡಳಿ ಇಲ್ಲದಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಪಟ್ಟಣದಲ್ಲಿ ಮಹಿಳಾ ಶೌಚಾಲಯಗಳ ನಿರ್ವಹಣೆ ಕೊರತೆಯಿಂದ ಬಯಲಲ್ಲಿಯೇ ಶೌಚಕ್ಕೆ ಹೋಗುವುದು ಜೀವಂತವಾಗಿದೆ. ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರು ಅಧಿಕಾರಿಗಳು ಗಮನ ಹರಿಸುತ್ತಿಲ್ಲʼ ಎಂದು ದೂರಿದರು.

ಇದರ ಜೊತೆಗೆ ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕನಕಪ್ಪ ಅರಳಿಗಿಡದ, ಸದಸ್ಯ ಸುಭಾಸ ಮ್ಯಾಗೇರಿ ‘ಪುರಸಭೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಪುರಸಭೆಗೆ ಸಿಬ್ಬಂದಿ ಜೊತೆ ಕಾಯಂ ಎಂಜನಿಯರ್‌ ನೇಮಿಸಿ’ ಎಂದು ಮನವಿ ಮಾಡಿದರು.

ಜನತಾ ದರ್ಶನದಲ್ಲಿ ಜಮೀನಿನ ಸಮಸ್ಯೆ, ಪಿಂಚಣಿ ಸಮಸ್ಯೆ, ಖಾತೆಗೆ ಗೃಹಲಕ್ಷ್ಮೀ ಹಾಗೂ ಪಡಿತರ ಹಣ ಬಾರದಿರುವುದು, ಬಡಾವಣೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಿ 6 ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಆಶ್ರಯ ಮನೆ ನೀಡಿ, ನೀರಿನ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತಂದಿದ್ದ ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು. 128 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳ ಪೈಕಿ ಹಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು.

ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಸೂಚಿಸಿದರು.

ಜನತಾ ದರ್ಶನದಲ್ಲಿ ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್, ಸಿಪಿಐ ಸುನೀಲ್ ಬೀಳಗಿ, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಉಪ ನೋಂದಣಾಧಿಕಾರಿ ವಿರುಪಾಕ್ಷಯ್ಯ ಚೌಕಿಮಠ, ಬಿಇಒ ರುದ್ರಪ್ಪ ಹುರಳಿ, ಪಿಎಸ್‌ಐ ಸೋಮನಗೌಡ ಗೌಡ್ರ, ಹೆಸ್ಕಾಂನ ವೀರೇಶ ರಾಜೂರ, ಆಹಾರ ಇಲಾಖೆಯ ಮಂಜುನಾಥ ತಳ್ಳಿಹಾಳ, ಕೃಷಿ ಇಲಾಖೆಯ ರವಿಂದ್ರಗೌಡ ಪಾಟೀಲ ಇದ್ದರು.

128 ಅರ್ಜಿ ಸಲ್ಲಿಕೆ

‘ಗಜೇಂದ್ರಗಡದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಜನತಾ ದರ್ಶನ ಯಶಸ್ವಿಯಾಗಿದ್ದು 128 ಅರ್ಜಿಗಳ ಪೈಕಿ ಬಹುತೇಕ ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಉಳಿದ ಅರ್ಜಿಗಳಿಗೆ ಸಂಬಂಧಪಟ್ಟವರಿಂದ ವರದಿ ಪಡೆದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್‌ ಕಿರಣಕುಮಾರ ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT