ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣ ಇಲ್ಲ; ವೃಕ್ಷಾರೋಪಣವೇ ಎಲ್ಲ!

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿವಿ
Last Updated 5 ಜೂನ್ 2021, 5:58 IST
ಅಕ್ಷರ ಗಾತ್ರ

ಗದಗ: ಗಾಂಧಿ ಚಿಂತನೆ ಹಾಗೂ ಗ್ರಾಮೀಣಾಭಿವೃದ್ಧಿ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಯಲವು ವಿಶ್ವ ಪರಿಸರ ದಿನವನ್ನು ವರ್ಷಪೂರ್ತಿ ಆಚರಿಸಲು ಸಿದ್ಧಗೊಂಡಿದೆ.

ವಿಶ್ವವಿದ್ಯಾಲಯದ ಕ್ಯಾಂಪಸ್‌ ಅಂದಾಜು 300 ಎಕರೆ ಇದ್ದು, ಪ್ರತಿ ವರ್ಷ ಇಂತಿಷ್ಟು ಸಸಿಗಳನ್ನು ನೆಟ್ಟು, ಪೋಷಿಸುವ ಮೂಲಕ ಇಡೀ ಆವರಣವನ್ನು ಹಸಿರುಮಯ ಆಗಿಸುವ ಯೋಜನೆ ಕೈಗೆತ್ತಿಕೊಂಡಿದೆ. ಈ ‍ಪ್ರಕ್ರಿಯೆ ವಿಶ್ವ ಪರಿಸರ ದಿನದಂದು ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ‌

‘ವಿಶ್ವ ಪರಿಸರ ದಿನದಂದು ಭಾಷಣ ಇಲ್ಲ; ವೃಕ್ಷಾರೋಪಣವೇ ಎಲ್ಲ. ಸಸಿ ನೆಡುವ ಪ್ರಕ್ರಿಯೆ ಶನಿವಾರದಿಂದ (ಜೂನ್‌ 5) ಆರಂಭಗೊಳ್ಳಲಿದ್ದು, ನಿರಂತರವಾಗಿ ಮುಂದುವರಿಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

‘ವಿದ್ಯಾರ್ಥಿಗಳು, ಅಧ್ಯಾಪಕರೆಲ್ಲರೂ ಸೇರಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಅನ್ನು ಹಸಿರೀಕರಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಈ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆ 10 ಸಂಜೆ 5ರವರೆಗೆ ಕ್ಯಾಂಪಸ್‌ನಲ್ಲಿ 500 ಸಸಿಗಳನ್ನು ನಡೆಲಾಗುವುದು. ಈ ಪ್ರಕ್ರಿಯೆ ನಿರಂತರವಾಗಿದ್ದು, ಅಂದಾಜು 10 ಸಾವಿರ ಸಸಿಗಳನ್ನು ನೆಟ್ಟು ‍ಪೋಷಿಸುವ ಗುರಿ ಹೊಂದಿದ್ದೇವೆ’ ಎಂದು ಅವರು ಹೇಳಿದರು.

‘ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಊರುಗಳಿಗೆ ತೆರಳಿದ್ದಾರೆ. ಆದರೂ, ಅವರಲ್ಲಿ ಪರಿಸರ ‍ಪ್ರಜ್ಞೆ ಮೂಡಿಸಲು ‘ನನ್ನ ಗಿಡ ನನ್ನ ಉಸಿರು’ ಅಭಿಯಾನ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲೇ ಒಂದು ಗಿಡ ನೆಟ್ಟು, ಅದನ್ನು ಪೋಷಿಸುವ ಸಂಕಲ್ಪದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ವಿಶ್ವ ಪರಿಸರ ದಿನದಂದು ಭಾಷಣ ಮಾಡುವುದಕ್ಕಿಂತ ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು. ಅದಕ್ಕಾಗಿ ಇಂದು ನಡೆಯುವ ಕಾರ್ಯಕ್ರಮದಲ್ಲಿ ಭಾಷಣ ಸಮಾರಂಭ ಇರುವುದಿಲ್ಲ. ಎಲ್ಲರೂ ಗಿಡ ನೆಡುವುದರೊಂದಿಗೆ ವಿಶ್ವ ಪರಿಸರ ದಿನವನ್ನು ಸಂಭ್ರಮಿಸಲಿದ್ದಾರೆ’ ಎಂದು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಬಿ.ಎಲ್‌.ಲಕ್ಕಣ್ಣನವರ ತಿಳಿಸಿದರು.

‘ಕ್ಯಾಂಪಸ್‌ನಲ್ಲಿ ಸಾವಿರಾರು ಗಿಡಗಳನ್ನು ನೆಡುವಷ್ಟು ಜಾಗವಿದೆ. ಲೆಕ್ಕಕ್ಕೆ ಮಾತ್ರ ನೆಟ್ಟು ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡದಂತೆ ಆಗಬಾರದು. ನೆಟ್ಟ ಗಿಡಗಳೆಲ್ಲವೂ ಹೆಮ್ಮರವಾಗಿ ಬೆಳೆಯಬೇಕು. ಈ ಕಾರಣದಿಂದ ಪ್ರತಿ ತಿಂಗಳು ಇಂತಿಷ್ಟೇ ಗಿಡಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

*
ಆಮ್ಲಜನಕವನ್ನು ಹೆಚ್ಚು ನೀಡುವ ಅತ್ತಿ, ಬನ್ನಿ, ಬೇವು, ಅರಳಿ, ಪತ್ರಿ ಗಿಡ ನೆಟ್ಟು, ಕ್ಯಾಂಪಸ್‌ ಒಳಗೆ ಪಂಚವಟಿ ವನ ನಿರ್ಮಿಸುವ ಆಶಯ ಇದೆ.
-ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಕುಲಪತಿ

*
ವಿಶ್ವವಿದ್ಯಾಲಯದಿಂದ ದತ್ತು ಪಡೆದಿರುವ ಶಾಲೆಗಳ ಪೈಕಿ ಎರಡು ಶಾಲೆಗಳಲ್ಲಿ ಔಷಧ ವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
-ಪ್ರೊ. ಬಿ.ಎಲ್‌.ಲಕ್ಕಣ್ಣನವರ, ಕುಲಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT