ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳವತ್ತಿ ಕಲಿಯುಗದ ಶಕುನಿ ಇದ್ದಂತೆ

ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ವ್ಯಂಗ್ಯ
Last Updated 28 ಜನವರಿ 2023, 6:28 IST
ಅಕ್ಷರ ಗಾತ್ರ

ಗದಗ: ‘ಈ ಹಿಂದೆ ಬಿಜೆಪಿ ಮುಖಂಡರಾದ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ ಬಣದಲ್ಲಿ ಗುರುತಿಸಿಕೊಂಡಿದ್ದ ರಾಘವೇಂದ್ರ ಯಳವತ್ತಿ ಅವರನ್ನು ಮೆಚ್ಚಿಸಲು ಅನಿಲ್‌ ವಿರುದ್ಧ ಚಾಡಿ ಹೇಳುತ್ತಿದ್ದರು. ಈಗ, ಬಣ ಬದಲಿಸಿ ಅನಿಲ್‌ ಪರವಾಗಿ ಮಾತನಾಡುತ್ತಿರುವ ಅವರು ಕಲಿಯುಗದ ಶಕುನಿ ಇದ್ದಂತೆ’ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ಏಕವಚನದಲ್ಲಿ ನಿಂದಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಮಹಾಭಾರತದಲ್ಲಿ ಶಕುನಿ ಮಾತು ಕೇಳಿ ದುರ್ಯೋಧನ ಹಾಳಾದಂತೆ; ಆಧುನಿಕ ಶಕುನಿ ಯಳವತ್ತಿ ಮಾತು ಕೇಳಿ ಅನಿಲ್‌ ಮೆಣಸಿನಕಾಯಿ ಕೂಡ ಹಾಳಾಗುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ನಾಲ್ಕು ವರ್ಷಗಳ ಕಾಲ ಬೆಂಗಳೂರಲ್ಲಿದ್ದು, ಚುನಾವಣೆ ಬಂದಾಗ ಮಾತ್ರ ಗದುಗಿಗೆ ಬರುವ ಅನಿಲ್‌ ಮೆಣಸಿನಕಾಯಿ ಅವರನ್ನು ಕ್ಷೇತ್ರದ ಜನ ಅದರಲ್ಲೂ ಗ್ರಾಮೀಣ ಭಾಗದ ಜನ ತಿರಸ್ಕರಿಸುತ್ತಿದ್ದಾರೆ. ಅವರಿಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಲು ಜನ ಸಜ್ಜಾಗಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ ಅವರನ್ನು ಹೆಸರಿಡಿದು ಕರೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹೆಸರಿನ ಮುಂದೆ ಅಣ್ಣ ಅಂತ ಸೇರಿಸಿಕೊಂಡು ಕರೆದಿದ್ದೇವೆ ಎಂದು ಸಮರ್ಥಿಸಿಕೊಳ್ಳುವುದು ಸಹ ಸಣ್ಣತನ’ ಎಂದು ಹರಿಹಾಯ್ದರು.

‘ಹುಲಕೋಟಿಗೆ ಮತಕೇಳಲು ಬರಬೇಡಿ ಅಂತ ಅವರಿಗೆ ಯಾರೂ ಹೇಳಿಲ್ಲ. ಆದರೆ, ಅವರು ಹುಲಕೋಟಿಗೆ ಹೋಗುವುದು ಮತಕೇಳಲಿಕ್ಕೋ; ಅಶಾಂತಿಯ ವಾತಾವರಣ ನಿರ್ಮಾಣ ಮಾಡುವುದಕ್ಕೋ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಹೇಳಿದರು.

‘ಎಚ್.ಕೆ.ಪಾಟೀಲ ಸೇವಾ ತಂಡದಿಂದ ನೂರಾರು ಬಡ ಕುಟುಂಬಗಳಿಗೆ ನೆರವು, ವೈದ್ಯಕೀಯ ಸಹಾಯ ಮಾಡಲಾಗುತ್ತಿದೆ. ಇದಕ್ಕೆ ಆಕ್ಷೇಪಿಸುವವರು ತಾವಾದರೂ ಈ ಸೇವೆ ಮಾಡಲಿ. ಅದು ಬಿಟ್ಟು ರಾಜಕಾರಣಕ್ಕೆ ಟೀಕಿಸಬಾರದು’ ಎಂದು ಹೇಳಿದರು.

ಗದಗ ಮತಕ್ಷೇತ್ರ ಸೇರಿ ಜಿಲ್ಲೆಯಲ್ಲಿ ಯಾರ ಅವಧಿಯಲ್ಲಿ ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ಚರ್ಚಿಸಲು ಸಚಿವ ಸಿ.ಸಿ.ಪಾಟೀಲ ಹಾಗೂ ಅನಿಲ್‌ ಮೆಣಸಿಕಾಯಿ ಇಬ್ಬರೂ ಬಹಿರಂಗ ವೇದಿಕೆಗೆ ಬರಲಿ. ಅವರ ಎಲ್ಲ ಪ್ರಶ್ನೆಗಳಿಗೆ ಕಾಂಗ್ರೆಸ್‌ ಪಕ್ಷ ದಿಟ್ಟ ಉತ್ತರ ಕೊಡಲಿದೆ’ ಎಂದು ಸವಾಲು ಹಾಕಿದರು.

‘ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುವ ಬಿಜೆಪಿಗರು, ಈ ಪ್ರಕರಣವನ್ನು ಬೇಕಿದ್ದಲ್ಲಿ ಲೋಕಾಯುಕ್ತ ತನಿಖೆ ಒಳಪಡಿಸಲಿ. ಅದನ್ನು ಎದುರಿಸಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ನಗರಸಭೆ ಸದಸ್ಯ ಇಮ್ತಿಯಾಜ್‌ ಶಿರಹಟ್ಟಿ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಅನಿಲ್‌ ಸಿದ್ದಮ್ಮನಹಳ್ಳಿ, ಉಮರ್‌ ಫಾರೂಕ ಹುಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT