ಗುರುವಾರ , ಮೇ 19, 2022
23 °C
ಡಾ. ಆನಂದ್‌ಗೆ ಬೀಳ್ಕೊಡುಗೆ ಹಾಗೂ ನೂತನ ಸಿಇಒ ಭರತ್‌ಗೆ ಸ್ವಾಗತ ಕಾರ್ಯಕ್ರಮ

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಆನಂದ್ ಕೆ. ಸಮರ್ಥ ಆಡಳಿತಗಾರ: ಡಿ.ಸಿ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಹೊಸ ವಿಚಾರ ಹಾಗೂ ಯೋಜನೆಗಳ ಅನುಷ್ಠಾನದಿಂದ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕರಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಆನಂದ್ ಕೆ. ಸಮರ್ಥ ಆಡಳಿತಗಾರ ಹಾಗೂ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಭಿಪ್ರಾಯಪಟ್ಟರು.

ವರ್ಗಾವಣೆಯಾಗಿರುವ ಡಾ. ಆನಂದ್ ಕೆ. ಅವರಿಗೆ ಬೀಳ್ಕೊಡುಗೆ ಹಾಗೂ ಜಿಲ್ಲಾ ಪಂಚಾಯ್ತಿಯ ನೂತನ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಭರತ್ ಎಸ್. ಅವರಿಗೆ ನಡೆದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೋವಿಡ್‌–19 ಸಂದರ್ಭದಲ್ಲಿ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ, ಸೋಂಕು ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಅವರಲ್ಲಿನ ಸಹನಶೀಲತೆ ಹಾಗೂ ಸಹಾನುಭೂತಿ ಗುಣಗಳು ಎಲ್ಲರಿಗೂ ಮಾದರಿಯಾಗಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಮಾತನಾಡಿ, ‘ಡಾ. ಆನಂದ್ ಕೆ. ಅವರ ಕಾರ್ಯಶೈಲಿ ಎಲ್ಲರಿಗೂ ಮಾದರಿ. ಅವರ ಅಗಾಧ ಜ್ಞಾಪಕಶಕ್ತಿ ಬೆರಗು ಮೂಡಿಸುವಂತಹದ್ದು’ ಎಂದು ಹೇಳಿದರು.

ಡಾ. ಆನಂದ್ ಕೆ. ಮಾತನಾಡಿ, ‘ಎಲ್ಲ ಅಧಿಕಾರಿಗಳು ಹಾಗೂ ನೌಕರರು ನನ್ನ ಜತೆಗೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒಗಳು ಕೂಡ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ‍ಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡ್ರ ಮಾತನಾಡಿ, ‘ಡಾ. ಆನಂದ್ ಹೃದಯವಂತ ಅಧಿಕಾರಿ. ಅಗಾಧ ಜ್ಞಾನ, ಅಭಿವ್ಯಕ್ತಿಗೊಳಿಸುವ ಶಕ್ತಿ ನಿಜವಾಗಿಯೂ ಅದ್ಭುತವಾಗಿತ್ತು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಮ್ಸ್‌ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಲಕ್ಕಣ್ಣವರ ಇದ್ದರು.

ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್.ಜಿನಗಾ ಹಾಗೂ ಪಿಡಿಒ ಕುಂಬಾರ ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರೇಮಾ ಟಿ. ಅವರು ಡಾ. ಆನಂದ್ ಕೆ. ಕುರಿತು ರಚಿಸಿರುವ ಕವನ ವಾಚಿಸಿದರು. ಲಕ್ಷ್ಮೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಜೆ.ಎಂ. ಅಂದಾನಯ್ಯ ಸ್ವಾಮಿ ವಂದಿಸಿದರು.

ಅಧಿಕಾರ ಸ್ವೀಕಾರ: ಗದಗ ಜಿಲ್ಲಾ ಪಂಚಾಯ್ತಿ ನೂತನ ಸಿಇಒ ಆಗಿ ಭರತ್‌ ಎಸ್. ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಇವರು 2017ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಮಾರ್ಚ್‌ 2020ರಿಂದ ಭಟ್ಕಳ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

‘ಜನರ ಸಮಸ್ಯೆಗಳಿಗೆ ಸ್ಪಂದನೆ’

ಎಡಿಸಿ ಸತೀಶ್‌ ಕುಮಾರ್ ಎಂ. ಮಾತನಾಡಿ, ‘ಲಾಕ್‍ಡೌನ್ ಅವಧಿಯಲ್ಲಿ ತೊಂದರೆಗೆ ಒಳಗಾದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಡಾ. ಆನಂದ ಕೆ. ವೈದ್ಯರಾಗಿದ್ದರಿಂದ ಕೋವಿಡ್‌–19 ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅನುಕೂಲವಾಯಿತು. ಚುನಾವಣೆ ಸಂದರ್ಭದಲ್ಲಿಯೂ ಉತ್ತಮ ಮಾರ್ಗದರ್ಶನ ನೀಡಿ ಸಮರ್ಥ ಆಡಳಿತ ನಿರ್ವಹಣೆಗೆ ಸಹಕರಿಸಿದರು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು